Oplus_0

ತಹಸೀಲ್ದಾರ್ ನಾಗಯ್ಯ ಹಿರೇಮಠ ಚಾಲನೆ | ನಾಗಾವಿ ಯಲ್ಲಮ್ಮ ಪಲ್ಲಕ್ಕಿ ಉತ್ಸವಕ್ಕೆ ಹರಿದು ಬಂದ ಭಕ್ತಸಾಗರ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಐತಿಹಾಸಿಕ ನಾಗಾವಿ ಕ್ಷೇತ್ರದಲ್ಲಿರುವ ಶಕ್ತಿ ದೇವತೆ ಯಲ್ಲಮ್ಮ ದೇವಿಯ ಜಾತ್ರೆಯು ಭಕ್ತದ ಸಡಗರ, ಸಂಭ್ರಮದ ಮಧ್ಯೆ ಜರುಗಿತು, ಪಲ್ಲಕ್ಕಿ ಉತ್ಸವದ ಸಂಭ್ರಮ ಕಣ್ಣುಂಬಿಕೊಳ್ಳಲು ಭಕ್ತ ಸಾಗರವೇ ನಾಗಾವಿ ಕ್ಷೇತ್ರಕ್ಕೆ ಹರಿದು ಬರುವ ಮೂಲಕ ದೇವಿಯ ದರ್ಶನ ಭಾಗ್ಯ ಪಡೆದು ಪುನಿತರಾದರು.

ಪಟ್ಟಣದ ಬ್ರಾಹ್ಮಣ ಸಮಾಜದ ಸರಾಫ್ ಲಚ್ಚಪ್ಪ ನಾಯಕ ಅವರ ಮನೆಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರ ಉಪಸ್ಥಿತಿಯಲ್ಲಿ ಮಂಗಳವಾರ ಮಧ್ಯಾಹ್ನ ವಿಶ್ವೇಶ್ವರ ಪೂಜೆ, ಗುರುಪೂಜೆ, ದೇವಿಯ ಪಲ್ಲಕ್ಕಿ ಪೂಜೆ ಜರುಗಿತು, ನಂತರ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ತಹಸೀಲ್ದಾರ್ ಅವರು ಮಂಗಳಾರತಿ ಮಾಡಿ ಪಲ್ಲಕ್ಕಿ ಹೊತ್ತುಕೊಂಡು ಉತ್ಸವದ ಮೆರವಣಿಗೆಗೆ ಚಾಲನೆ ನೀಡಿದರು.

ನೆರೆಯ ಮಹಾರಾಷ್ಟ್ರ, ಆಂದ್ರಪ್ರದೇಶ, ತೇಲಂಗಾಣ ಸೇರಿದಂತೆ ವಿವಿಧ ಪ್ರದೇಶಗಳಿಂದ ಭಕ್ತರ ಮಹಾಪೂರವೇ ಹರಿದು ಬಂದಿತ್ತು. ಸೋಮವಾರವೇ ಆಗಮಿಸಿದ್ದ ಭಕ್ತಸಮೂಹ ದೇವಸ್ಥಾನದ ಎದುರಿಗೆ ಇರುವ ಎರಡು ಬಾವಿಗಳಲ್ಲಿ ಮತ್ತು ಹಿಂದುಗಡೆ ಇರುವ ನಂದಿಬಾವಿಯಲ್ಲಿ ಪವಿತ್ರ ಸ್ನಾನ ಮಾಡಿದ ಭಕ್ಷರು, ದೇವಿಯ ನಾಮಸ್ಮರಣೆಯೊಂದಿಗೆ ಯಲ್ಲಮ್ಮ ದೇವಸ್ಥಾನಕ್ಕೆ ಹೆಜ್ಜೆ ಹಾಕಿದರು. ಹೋಳಿಗೆ, ಕಡಬು, ಪಡೆ, ಕರ್ಚೆಕಾಯಿ ಮತ್ತಿತರ ಖಾದ್ಯಗಳನ್ನು ತಯಾರಿಸಿ ದೇವಿಗೆ ನೈವೇದ್ಯ ಅರ್ಪಿಸಿ ಧನ್ಯರಾದರು.

ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ಶ್ರೀಶೈಲ್ ಅಂಬಾಟಿ, ತಿರುಮಲೇಶ್ ಕುಂಬಾರ, ತಿಮ್ಮಯ್ಯ ಕಾಳಗಿ, ಚಂದ್ರಕಾಂತ ಮಕಾಲೆ ಶಹಾಬಾದ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ, ಪ್ರಮುಖರಾದ ವಿನಾಯಕರಾವ್ ನಾಯಕ, ರತ್ನಾಕರ್ ನಾಯಕ, ಗೌತಮ ನಾಯಕ ಕಣ್ವಾ ನಾಯಕ, ನಾಗರೆಡ್ಡಿ ಗೋಪಸೇನ್, ಅಯ್ಯಪ್ಪ ರಾಮತೀರ್ಥ, ಮೌನೇಶ್ ಭಂಕಲಗಿ, ಜಗನ್ನಾಥ ಮುಡಬೂಳಕರ್ ಸೇರಿದಂತೆ ಇತರರು ಇವರು.

ದೇವಿಯ ಪಲ್ಲಕ್ಕಿ ಮೆರವಣಿಗೆಯು ಲಚ್ಚಪ್ಪ ನಾಯಕ್ ಅವರ ಮನೆಯಿಂದ ಸಕಲ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ದೇವಿಯ ಮಂದಿರವರೆಗೆ ಭಕ್ತರ ಜಯಘೋಷಗಳೊಂದಿಗೆ ಸಡಗರ, ಸಂಭ್ರಮದಿಂದ ತಲುಪಿತು. ಮೆರವಣಿಗೆಯಲ್ಲಿ ಡಿಜೆ ಸೌಂಡ್ ಯುವಕರು ಕುಣಿದು ಕುಪ್ಪಳಿಸಿದರು. ಡೊಳ್ಳು ಹಲಗೆ ವಾದನ, ಯುವಕರ ನೃತ್ಯ ಹಾಗೂ ಸಾಂಸ್ಕೃತಿಕ ಕಲಾ ತಂಡಗಳು ಎಲ್ಲರ ಕಣಮನ ಸೆಳೆಯಿತು.

ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಜನರು ಪಲ್ಲಕ್ಕಿಯಲ್ಲಿ ಆರೂಢಳಾದ ದೇವಿಯ ಮೂರ್ತಿಗೆ ಹೂವು ಚೆಲ್ಲಿ ನಮಿಸಿದರು. ಜಾತೆಯಲ್ಲಿ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಅಧಿಕಾರಿಗಳು ಬಿಗಿ ಬಂದೋಬಸ್ತ್ ಮಾಡಿದ್ದರು. ದೇವಿಯ ಜಾತ್ರೆ ಪಲ್ಲಕ್ಕಿ ಉತ್ಸವ ಮೆರವಣಿಗೆ ಸಂಪೂರ್ಣ ಶಾಂತಿಯುತವಾಗಿ ಸಂಪನ್ನವಾಯಿತು. ಯುವಕರು ಆಸಕ್ತಿ ವಹಿಸಿ ದಾರಿಯುದ್ದಕ್ಕೂ ದೀಪಾಲಂಕಾರ ಮಾಡಿರುವುದು ಜಾತ್ರೆಗೆ ಮತ್ತಷ್ಟು ಮೆರಗು ನೀಡಿತು. ಭೋವಿ ಸಮಾಜದವರು ಪಲ್ಲಕ್ಕಿ ಸೇವೆ ಸಲ್ಲಿಸಿದರು. ದೇವಸ್ಥಾನದ ಮಾರ್ಗದ ಉದ್ದಕ್ಕೂ ಭಕ್ತಸಮೂಹ ಪ್ರಸಾದ ಸೇವೆ, ಕುಡಿವ ನೀರು, ಹೆಣ್ಣು ಹಂಪಲು ವಿತರಣೆ ಮಾಡುವ ಭಕ್ತಾದಿಗಳ ಸೇವೆ ನಿರಂತರವಾಗಿ ನಡೆಯಿತು.

Spread the love

Leave a Reply

Your email address will not be published. Required fields are marked *

You missed

error: Content is protected !!