ಚಿತ್ತಾಪುರದಲ್ಲಿ ಕಾನೂನು ವಿರೋಧಿ ಚಟುವಟಿಕೆ: ಮಣಿಕಂಠ ರಾಠೋಡ ಆರೋಪ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕ್ಷೇತ್ರದಲ್ಲಿ ಕಳೆದ 11 ತಿಂಗಳಿಂದ ಕಾಗಿಣಾ ನದಿಯಲ್ಲಿ ಅಕ್ರಮ ಮರುಳು ದಂಧೆ ರಾಜಾರೋಷವಾಗಿ ನಡೆಯುತ್ತಿದೆ ಇದಕ್ಕೆ ಇಲ್ಲಿನ ಶಾಸಕ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸಂಸದ ರಾಧಾಕೃಷ್ಣ ದೊಡ್ಡಮನಿ ಅವರ ಸಹಕಾರ ಇದೆ ಇವರಿಂದಲೇ ಸಂವಿಧಾನ ಹಾಗೂ ಕಾನೂನು ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಗಿಣಾ ನದಿಯಲ್ಲಿ ಹಿಟಾಚಿ, ಜೆಸಿಬಿ ಮೂಲಕ ಅಕ್ರಮ ಮರಳು ಸಾಗಾಟದ ದಂಧೆ ನಡೆಸಿದ ಕಾಂಗ್ರೆಸ್ ಮುಖಂಡರು ನದಿಯ ನಕ್ಷೆನೇ ಬದಲಾಯಿಸಿದ್ದಾರೆ. ಈ ನಿಟ್ಟಿನಲ್ಲಿ ನಾನು ಅನ್ಯಾಯ ಮತ್ತು ಭ್ರಷ್ಟಾಚಾರ ವಿರುದ್ಧ ಮಾತನಾಡಿದರೆ ಸಚಿವರಿಗೆ ಬಹಳ ತ್ರಾಸ್ ಆಗುತ್ತದೆ, ನನ್ನ ವಿರುದ್ಧ ಸುಳ್ಳು ಕೇಸುಗಳನ್ನು ಹಾಕಿ ನನಗೆ ಜೈಲಿಗೆ ಕಳುಹಿಸಿದ್ದಾರೆ ನಾನು 11 ತಿಂಗಳು ಕಾಲ ಕ್ಷೇತ್ರದಲ್ಲಿ ಇರಲಿಲ್ಲ ಹೀಗಾಗಿ ಇಲ್ಲಿ ಸಾಕಷ್ಟು ಹಗರಣಗಳು ನಡೆದಿವೆ, ನನಗೆ ಜೈಲಿಗೆ ಕಳುಹಿಸಿದವರು ಮುಂದಿನ ದಿನಗಳಲ್ಲಿ ಅವರು ಜೈಲಿಗೆ ಹೋಗಲಿದ್ದಾರೆ ಎಂದು ಭವಿಷ್ಯ ನುಡಿದರು. ತಹಸೀಲ್ದಾರ್, ಪೊಲೀಸ್ ಮತ್ತು ಆರ್.ಟಿ.ಓ ಅಧಿಕಾರಿಗಳು ಕ್ಷೇತ್ರದ ಶಾಸಕರು ಮತ್ತು ಸಂಸದರು ನಮ್ಮ ಹಿಂದೆ ಇದ್ದಾರೆ ಎಂದು ಕೆಲಸ ಮಾಡಬೇಡಿ ನಿಮ್ಮ ಕರ್ತವ್ಯ ನೀವು ಮಾಡಿ ಆಗಿದ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಇಲ್ಲದಿದ್ದರೆ ನಾವು ಪಾಠ ಕಲಿಸಬೇಕಾಗುತ್ತದೆ ಎಂದರು.
ನನ್ನ ಮೇಲೆ ಇಂತಹ ನೂರು ಸುಳ್ಳು ಕೇಸುಗಳನ್ನು ಹಾಕಿದರೂ ನಾನು ಹೆದರುವುದಿಲ್ಲ ನಾನು ಜನರ ಮದ್ಯೆದಲ್ಲಿ ಇರುತ್ತೇನೆ, ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ ನನಗೆ ಮುಂದಿನ ದಿನಗಳಲ್ಲಿ ಜನರು ಆಶೀರ್ವಾದ ಮಾಡಿ ಅಧಿಕಾರ ನೀಡಿದಾಗ ಎಲ್ಲ ಹಗರಣಗಳು ಬಯಲಿಗೆ ಎಳೆದು ಜನರ ಧ್ವನಿಯಾಗಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು.
ಹನಿಟ್ರಾಪ್ ಈಗಿಂದು ಅಲ್ಲ ಮಲ್ಲಿಕಾರ್ಜುನ ಖರ್ಗೆ ಕಾಲದಿಂದಲೇ ಅಂದರೆ 1972 ರಿಂದಲೇ ಇದೆ, ಈಗ ಹನಿ ಟ್ರಾಪ್ ಹಾಗೂ ಹಫ್ತಾ ವಸೂಲಿ ವಿಷಯದಲ್ಲಿ ಬಿರುಕು ಬಿಟ್ಟಿದ್ದರಿಂದ ಈಗ ಹೊರಬಂದಿದೆ, 2022 ರಲ್ಲಿ ನನಗೆ ಗಡಿಪಾರು ಮಾಡಲು ಒಂದಾಗಿದ್ದವರು ಈಗ ಅವರೇ ಒಬ್ಬರನೊಬ್ಬರು ಕಚ್ಚಾಡಿ ಈಗ ಅವರೇ ಜೈಲಿಗೆ ಹೋಗಿದ್ದಾರೆ ಎಂದು ಹೇಳಿದರು. ಹಫ್ತಾ ವಸೂಲಿ ಅಕ್ರಮ ಗನ್ ಸಪ್ಲೈ ಮಾಡುವ ರಾಜು ಕಪನೂರ ಪ್ರಿಯಾಂಕ್ ಖರ್ಗೆ ಬಲಗೈ ಬಂಟ ಇರುವುದರಿಂದಲೇ ಜೈಲಿಗೆ ಹೋಗದೆ ಬಹಿರಂಗವಾಗಿ ಓಡಾಡುತ್ತಿದ್ದಾನೆ ಮುಂದಿನ ದಿನಗಳಲ್ಲಿ ಜೈಲಿಗೆ ಹೋಗುತ್ತಾನೆ ಎಂದರು. ನಾನು ಸುರಪುರ ಜೈಲಿನಿಂದ ನೇರವಾಗಿ ಚಿತ್ತಾಪುರ ಕ್ಷೇತ್ರದ ಜನರನ್ನು ಭೇಟಿ ಮಾಡಲು ಬಂದಿದ್ದೇನೆ, ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸಿ ಪಕ್ಷದ ಹೈಕಮಾಂಡ್ ಆದೇಶದ ಮೇರೆಗೆ ಮುಂದಿನ ಹೋರಾಟಗಳನ್ನು ಮಾಡುತ್ತೇನೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಮುಖಂಡರಾದ ದೂಳಪ್ಪ ಅವಂಟಿ, ಮಹೇಶ್ ಬಾಳಿ, ಗುಂಡು ಮತ್ತಿಮುಡ್, ಶ್ರೀಕಾಂತ ಸುಲೇಗಾಂವ, ದೇವರಾಜ್ ತಳವಾರ, ಗೂಳಿ ಡಿಗ್ಗಿ, ಸಂಗಮೇಶ ರೋಣದ್, ರಾಜು ದೊರೆ ಸೇರಿದಂತೆ ಇತರರು ಇದ್ದರು.