ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಪ್ರಕ್ರಿಯೆ ಪ್ರಾರಂಭ: ಸಚಿವ ಪ್ರಿಯಾಂಕ್ ಖರ್ಗೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: 2025-26 ನೇ ಸಾಲಿನ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿ ಖರೀದಿಸಲು ಸರ್ಕಾರದಿಂದ ಆದೇಶ ಹೊರಡಿಸಲಾಗಿರುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಡಿ. 17 ರಂದು ಸರ್ಕಾರ ಆದೇಶ ಹೊರಡಿಸಿದೆ. ಕಲಬುರಗಿ ಜಿಲ್ಲಾಧಿಕಾರಿಯೊಂದಿಗೆ ನಡೆಸಿದ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಪ್ರತಿ ಕ್ವಿಂಟಾಲಗೆ ರೂ.8,000 ರಂತೆ ಪ್ರತಿ ಎಕರೆಗೆ 4 ಕ್ವಿಂಟಲ್ ನಂತೆ ಹಾಗೂ FRUITS ತಂತ್ರಾಂಶದಲ್ಲಿ ಲಭ್ಯವಾಗುವ ರೈತರು ತೊಗರಿ ಬೆಳೆದ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾದ ಪ್ರಮಾಣದಲ್ಲಿ ತೊಗರಿಯನ್ನು ಖರೀದಿಸಲು ಅನುಮತಿ ನೀಡಲಾಗಿರುತ್ತದೆ.
ಸರ್ಕಾರದ ಆದೇಶದಲ್ಲಿನಂತೆ ಕಲಬುರಗಿ ಜಿಲ್ಲೆಗೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿ ಖರೀದಿಸಲು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ದಿ ಮಂಡಳಿ ಕಲಬುರಗಿ ಸಂಸ್ಥೆಯನ್ನು, ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಕಲಬುರಗಿ ಸಂಸ್ಥೆಯನ್ನು ರಾಜ್ಯ ಖರೀದಿ ಸಂಸ್ಥೆಗಳಾಗಿ ನೇಮಿಸಲಾಗಿರುತ್ತದೆ.
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 141 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ (PACS)) ಹಾಗೂ FPO ಗಳ ಮೂಲಕ ಪ್ರತಿಯೊಂದು ಖರೀದಿ ಕೇಂದ್ರಗಳಲ್ಲಿ POS ಯಂತ್ರಗಳ ಮೂಲಕ ರೈತರ ನೊಂದಣಿ ಹಾಗೂ ಖರೀದಿ ಪ್ರಕ್ರಿಯೆಯಲ್ಲಿ UIDAI ಬಯೋ ಮೆಟ್ರಿಕ್ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಸಚಿವರು ಹೇಳಿದ್ದಾರೆ.
ನೊಂದಣಿ ಕಾರ್ಯ ಪ್ರಾರಂಭವಾಗಿದ್ದು, 6 ಮಾರ್ಚ್ 2026 ರ ವರೆಗೆ ಮುಂದುವರೆಯಲಿದೆ ಹಾಗೂ ನಂತರ ಖರೀದಿ ಪ್ರಕ್ರಿಯೆಯು 16 ಮಾರ್ಚ್ 2026 ರ ವರೆಗೆ ಕೈಗೊಳ್ಳಲಾಗುವುದು. ರೈತರಿಂದ ಖರೀದಿಸಿದ ಉತ್ಪನ್ನದ ಮೌಲ್ಯವನ್ನು DBT ಪೋರ್ಟಲ್ ಮೂಲಕ ಪಾವತಿಸಲಾಗುವುದು. ಮತ್ತು NAFED ಸಂಸ್ಥೆಯು ನೊಂದಾಯಿತ ರೈತರಿಂದ ಬೆಂಬಲ ಬೆಲೆ ದರಕ್ಕಿಂತ ಹೆಚ್ಚಿನ ಮಾರುಕಟ್ಟೆ ಧಾರಣೆ ಇದ್ದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಇ-ಆಕ್ಷನ ಪೋರ್ಟಲ್ ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ಬಫರ್ ಸ್ಟಾಕ ಉದ್ದೇಶಕ್ಕಾಗಿ ಬೆಂಬಲ ಬೆಲೆಗಿಂತ ಹೆಚ್ಚಿನ ದರದಲ್ಲಿ ಖರೀದಿ ಕೈಗೊಳ್ಳುತ್ತಾರೆ.
ಜಿಲ್ಲೆಯ ರೈತ ಬಾಂಧವರು ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆದುಕೊಂಡು ತಮ್ಮ ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ (PACS) ಹಾಗೂ FPO ಗಳಿಗೆ ಹಾಗೂ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿರುವ ತೊಗರಿ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ತಾವು ಬೆಳೆದ ತೊಗರಿ ನಿಗದಿತ ಅವಧಿಯಲ್ಲಿ ಮಾರಾಟಕ್ಕೆ ನೊಂದಾಯಿಸಿಕೊಂಡು ಮಾರಾಟ ಮಾಡಬೇಕು ಎಂದು ಸಚಿವರು ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಮೊಬೈಲಗೆ ಸಂಪರ್ಕಿಸಲು ರೈತರನ್ನು ಕೋರಲಾಗಿದೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಕಲಬುರಗಿ (KSCMF) ಮೊ.ನಂ. 9449864446. ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ದಿ ಮಂಡಳಿ ಕಲಬುರಗಿ (KSPAML) ಮೊ.ನಂ. 9964474444.
