Oplus_0

ಬೊಮ್ಮನಹಳ್ಳಿ ಗ್ರಾಮದಲ್ಲಿ ರಾಮ್ಕೊ ಸಿಮೆಂಟ್ಸ್ ಲಿಮಿಟೆಡ್ ವತಿಯಿಂದ ಪರಿಸರ ಸಾರ್ವಜನಿಕ ಆಲಿಕೆ ಸಭೆ

ಅಹವಾಲುಗಳನ್ನು ಸಲ್ಲಿಸಲು ಮೂರು ವಾರಗಳ ಕಾಲಾವಕಾಶ: ಜಿಲ್ಲಾಧಿಕಾರಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ  ಉದ್ದೇಶಿತ ರಾಮ್ಕೊ ಸಿಮೆಂಟ್ ಕಂಪೆನಿಯ ಯೋಜನಾ ಸ್ಥಳದಲ್ಲಿ ವಾಸವಾಗಿರುವ ಆಸಕ್ತ ನಿವಾಸಿಗಳು, ಪರಿಸರಾಸಕ್ತ ಗುಂಪುಗಳು ಮತ್ತು ಈ ಯೋಜನೆಯಿಂದ ತೊಂದರೆಗೊಳಗಾಗಬಹುದಾದ ಸಾರ್ವಜನಿಕರು ತಮ್ಮ ಸಲಹೆಗಳು, ಅನಿಸಿಕೆಗಳು, ಟೀಕೆ-ಟಿಪ್ಪಣಿಗಳು ಹಾಗೂ ಅಹವಾಲುಗಳನ್ನು ಜಿಲ್ಲಾಧಿಕಾರಿಗಳಿಗೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ, ಸೇಡಂ ಸಹಾಯಕ ಆಯುಕ್ತರಿಗೆ ಅಥವಾ ಚಿತ್ತಾಪುರ ತಹಸೀಲ್ದಾರ್ ಅವರಿಗೆ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಹೇಳಿದರು.

ದಿ ರಾಮ್ಕೊ ಸಿಮೆಂಟ್ಸ್ ಲಿಮಿಟೆಡ್ ರವರು ಚಿತ್ತಾಪುರ ತಾಲೂಕಿನ ಬೊಮ್ಮನಹಳ್ಳಿ ಸುಣ್ಣದಕಲ್ಲು ಗಣಿ ಬ್ಲಾಕ್ (ಇ-ಹರಾಜು ಮಾಡಿದ ಗಣಿ ಬ್ಲಾಕ್) ನಿಂದ 4.0 MTPA ಉತ್ಪಾದನಾ ಸಾಮರ್ಥ್ಯದ ಸುಣ್ಣದ ಕಲ್ಲು, ಮೇಲಿನ ಮಣ್ಣು 2,14321 M’, ಅಧಿಕ ಭಾರ (Over Burden) 0.46 MTPA ಜೊತೆಗೆ 1000 TPH ಸಾಮರ್ಥ್ಯದ ಕ್ರಷರ್ 500 ΤΡΗ ಸಾಮರ್ಥ್ಯದ ವೊಬ್ಲರ್ ಮತ್ತು ಸ್ಕ್ರೀನ್, 1200 TPH ಸಾಮರ್ಥ್ಯದ ಬೆಲ್ಟ್ ಕನ್ವೆಯರ್‌ಗಳನ್ನು ಒಟ್ಟು 500 ಹೇಕ್ಟೇರ್ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಕಲಬುರ್ಗಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಉದ್ದೇಶಿತ ಯೋಜನೆಯ ಪರಿಸರ ಸಾರ್ವಜನಿಕ ಆಲಿಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಮೀನು ಕಳೆದುಕೊಂಡವರಿಗೆ ಸ್ಥಳೀಯರಿಗೆ ಆದ್ಯತೆ ಮೇರೆಗೆ ಉದ್ಯೋಗ ನೀಡುವುದು, ಸಿಎಸ್ ಆರ್ ಅನುದಾನ ಹೆಚ್ಚಳ ಮಾಡಬೇಕು, ಶಾಲೆ, ಆಸ್ಪತ್ರೆ, ಅಂಗನವಾಡಿ ನಿರ್ಮಾಣ, ಈಗಿರುವ ಎರಡು ರಸ್ತೆಗಳಲ್ಲಿ ಓಡಾಡಲು ತೊಂದರೆ ಆಗದಂತೆ ನೋಡಿಕೊಳ್ಳುವುದು, ಜಮೀನನ ಬೆಲೆ ಹೆಚ್ಚಿಸುವುದು ಸೇರಿದಂತೆ ಸರ್ಕಾರದ ಗೈಡ್ ಲೈನ್ ಪ್ರಕಾರ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎನ್ನುವ ಚರ್ಚಿತ ವಿಷಯಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ರೈತರ ಅಭಿಪ್ರಾಯಗಳು:

ರಾಜು ಗುತ್ತೇದಾರ: ರಾಮ್ಕೊ ಸಿಮೆಂಟ್ ಕಂಪೆನಿ ಬಹುಬೇಗನೆ ಆರಂಭವಾಗಬೇಕು. ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು.

ತೋಟಪ್ಪ ಪೂಜಾರಿ: ಕಂಪೆನಿಯವರು ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಜಮೀನು ನೀಡಿದ ರೈತರ ಮಕ್ಕಳಿಗೆ ಉದ್ಯೋಗ ನೀಡಬೇಕು.

ವಿರೇಶ್ ಕರದಾಳ: ವಿಳಂಬ ಮಾಡದೆ ಕಂಪೆನಿ ಆರಂಭ ಮಾಡಬೇಕು ಜೊತೆಗೆ ವಿದ್ಯಾರ್ಹತೆ ತಕ್ಕಂತೆ ಉದ್ಯೋಗ ನೀಡಬೇಕು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.

ರಫೀಕ್ ಲಿಂಕ್: ಕಂಪೆನಿಯು ಸಿಎಸ್ ಆರ್ ಅನುದಾನದಲ್ಲಿ ಹೆಚ್ಚಿನ ಚಟುವಟಿಕೆಗಳು ಕೈಗೊಳ್ಳಬೇಕು.

ರೇವಣಸಿದ್ದಪ್ಪ ತಳವಾರ: ರೈತರು ಗುಳೆ ಹೋಗದಂತೆ ತಡೆಯುವ ಕೆಲಸ ಮಾಡಿ, ಅವರಿಗೆ ಮೊದಲು ಉದ್ಯೋಗ ನೀಡಿ ಮತ್ತು ರಸ್ತೆಗಳ ಅಭಿವೃದ್ಧಿ ಮಾಡಿ ಎಂದರು.

ಅಯ್ಯಪ್ಪ ಬೊಮ್ಮನಹಳ್ಳಿ: ರೈತರ ಪ್ರತಿ ಎಕರೆ ಜಮೀನಿಗೆ 35 ಲಕ್ಷಕ್ಕೆ ಖರೀದಿ ಮಾಡಬೇಕು, ಈಗಾಗಲೇ 19 ಲಕ್ಷಕ್ಕೆ ಕಂಪೆನಿಯವರು ಖರೀದಿ ಮಾಡಿದ್ದಾರೆ ಇದು ಅವೈಜ್ಞಾನಿಕ ಬೆಲೆಯಾಗಿದೆ, 45 ಎಕರೆ ಗೈರಾಣಿ ಜಮೀನು ಕಂಪೆನಿಯವರು ಖರೀದಿ ಮಾಡದೇ ದನಕರುಗಳಿಗೆ ಮೇಯಿಸಲು ಬೀಡಬೇಕು.

ವೀರಣ್ಣ ಯಾರಿ: ಸಿಮೆಂಟ್ ಕಂಪೆನಿ ಕಂಪೆನಿಯಿಂದ ರೈತರ ಬೆಳೆದ ಬೆಳೆಯ ಮೇಲೆ ಹಾಗೂ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಹೀಗಾಗಿ ಮಾಲಿನ್ಯ ನಿಯಂತ್ರಣ ಮಾಡುವ ಕಡೆ ಹೆಚ್ಚು ಗಮನ ಹರಿಸಬೇಕು, ಸರ್ಕಾರ, ಕಂಪೆನಿ ಮತ್ತು ರೈತರ ಮೂವರ ನಡುವೆ ವ್ಯವಹಾರ ನಡೆಯಲಿ ದಲ್ಲಾಳಿಗಳಿಗೆ ಅವಕಾಶ ನೀಡಬೇಡಿ ಮತ್ತು ರೈತರ ಭೂಮಿಗೆ ಬೆಂಬಲ ಬೆಲೆ ನೀಡಬೇಕು.

ನಾಗರೆಡ್ಡಿ ಪಾಟೀಲ ಕರದಾಳ: ಜಮೀನು ನೀಡಿದ ಪ್ರತಿಯೊಬ್ಬರಿಗೂ ಉದ್ಯೋಗ ನೀಡಬೇಕು, ಈಗಿರುವ ಎರಡು ರಸ್ತೆಗಳನ್ನು ಬದಲಾವಣೆ ಮಾಡದೆ ಯಥಾಪ್ರಕಾರ ರಸ್ತೆಗಳನ್ನು ಹೊಂದಿಸಿಕೊಂಡು ಅಭಿವೃದ್ಧಿಪಡಿಸಬೇಕು,‌ ಮಾಲಿನ್ಯ ನಿಯಂತ್ರಣ ಮಾಡುವುದನ್ನು ಪರಿಸರ ಇಲಾಖೆ ಗಮನ ಹರಿಸಬೇಕು.

ರೈತರಾದ ಸಂಗಮೇಶ ಕರದಾಳ, ಮಲ್ಲಣ್ಣ, ಮಾಳಪ್ಪ, ಚಂದ್ರಪ್ಪ ಪೂಜಾರಿ, ನಾಗರಾಜ ತಳವಾರ, ದೂಳಪ್ಪ ಬೊಮ್ಮನಹಳ್ಳಿ, ಚಂದ್ರಕಾಂತ ಚೂರಿ, ದೊಡ್ಡಪ್ಪಗೌಡ ಮಳಖೇಡ, ಮೌನೇಶ್ ಬೊಮ್ಮನಹಳ್ಳಿ, ಬಸವರಾಜ ಕರದಾಳ, ಜಗದೀಶ್ ಚವ್ಹಾಣ ಅವರು ಅನಿಸಿಕೆ ವ್ಯಕ್ತಪಡಿಸಿದರು.

ಪರಿಸರ ಹಿರಿಯ ಅಧಿಕಾರಿ ರೇಖಾ, ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್ ನಾಗಯ್ಯ ಹಿರೇಮಠ, ರಾಮ್ಕೊ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಶ್ರೀನಿವಾಸ್, ಎಜಿಎಂ ಟೀ.ಮದ್ದಿ ವನ್ನನ್, ಜಿಎಂ ವಿ.ಎಸ್‌.ಸಾಂಬಾಶೀವ, ಅಧಿಕಾರಿ ಸೋಮಶೇಖರ ರೆಡ್ಡಿ, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐಗಳಾದ ಜಗದೇವಪ್ಪ ಪಾಳಾ, ನಟರಾಜ್ ಲಾಡೆ, ಪಿಎಸ್ಐಗಳಾದ ಶ್ರೀಶೈಲ್ ಅಂಬಾಟಿ, ತಿರುಮಲೇಶ್ ಕುಂಬಾರ, ಚಂದ್ರಾಮಪ್ಪ ಸೇರಿದಂತೆ ಕರದಾಳ, ಬೊಮ್ಮನಹಳ್ಳಿ, ಸೂಲಹಳ್ಳಿ, ಕಮರವಾಡಿ ಗ್ರಾಮಗಳ ಮುಖಂಡರು, ರೈತರು ಭಾಗವಹಿಸಿದ್ದರು.

ಕಂಪೆನಿ ಅಧಿಕಾರಿ ಮುರುಳಿ ಮನೋಜ್ ಉದ್ದೇಶಿತ ಯೋಜನೆ ಬಗ್ಗೆ ಮಾಹಿತಿ ನೀಡಿದರು, ಪರಿಸರ ಅಧಿಕಾರಿ ಸೋಮಶೇಖರ ಸ್ವಾಗತಿಸಿದರು, ಕಂಪೆನಿ ಅಧಿಕಾರಿ ಸಣ್ಣ ವೆಂಕಟೇಶ್ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!