Oplus_0

ಆಳಂದ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಜ.13 ರಂದು ಹಿರೋಳಿಯಲ್ಲಿ, ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಧರ್ಮಣ್ಣ ಧನ್ನಿ ಆಯ್ಕೆ: ಶೇರಿ

ನಾಗಾವಿ ಎಕ್ಸಪ್ರೆಸ್ 

ಆಳಂದ: ತಾಲೂಕು 12 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನ ಗಡಿಗ್ರಾಮ ಹಿರೋಳಿಯಲ್ಲಿ ಜನೆವರಿ 13 ರಂದು ಇದೇ ಮೊದಲ ಬಾರಿಗೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಾಲೂಕು ಅಧ್ಯಕ್ಷ ಹಣಮಂತ ಶೇರಿ ತಿಳಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಆಳಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಚರ್ಚಿಸಿ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಐತಿಹಾಸಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇಲ್ಲಿಯವರಗೆ ಜರುಗಿದ ಹಿಂದಿನ 11 ಸಮ್ಮೇಳನಗಳು ಅತ್ಯಂತ ಯಶಸ್ವಿಯಾಗಿ ಜರುಗಿವೆ ಅವುಗಳಂತೆ ಈ ಸಮ್ಮೇಳನವು ಯಶಸ್ವಿಯಾಗಿ ಜರುಗಲು ಎಲ್ಲ ತಯಾರಿ ಮಾಡಿಕೊಳ್ಳಲಾಗುವುದು. ಸಮ್ಮೇಳನದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಬರಗಾಲ ಘೋಷಣೆಯಾಗಿದ್ದರಿಂದ ಸಮ್ಮೇಳನ ಹಮ್ಮಿಕೊಂಡಿರಲಿಲ್ಲ ಈ ವರ್ಷ ಅಖಿಲ ಭಾರತ ಸಮ್ಮೇಳನವೂ ಜರುಗುತ್ತಿರುವುದರಿಂದ ವಿಶೇಷವಾಗಿ ಆಳಂದ ತಾಲೂಕಿನ ಗಡಿಗ್ರಾಮ ಹಿರೋಳಿಯಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ. ತಾಲೂಕಿನ ಕನ್ನಡ ಪ್ರೇಮಿಗಳು ಸಮ್ಮೇಳನದಲ್ಲಿ ಭಾಗವಹಿಸುವುದರ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.

ಸಮ್ಮೇಳನಾಧ್ಯಕ್ಷ ಪರಿಚಯ: ಸಾಸಿರ ನಾಡಿನ, ಒಲವಿನ ಕವಿಯೆಂದೆ ಕರೆಯಲ್ಪಡುವ ಧರ್ಮಣ್ಣ ಎಚ್. ಧನ್ನಿ ಅವರು ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಡಗಂಚಿ ಗ್ರಾಮದವರು. ತಂದೆ ಹುಸನಪ್ಪಾ, ತಾಯಿ ತಾನಾಬಾಯಿ ಉದರದಲ್ಲಿ 1 ಜುಲೈ 1967 ರಂದು ಜನನ. ತಂದೆ ತಾಯಿಗಳಿಬ್ಬರು ಜನಪದ ಕಲಾವಿದರು. ಇಂಥ ಸಾಂಸ್ಕೃತಿಕ ಪರಿಸರದ ಮನೆಯಲ್ಲಿ ಜೋಗುಳ ಪದ ಕೇಳುತ್ತಾ ಬೆಳೆದು ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆದವರು.

ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ವಿದ್ಯಾವರ್ಧಕ ಪ್ರೌಢ ಶಾಲೆಯಲ್ಲಿ ಅಭ್ಯಾಸ ಮಾಡಿದರು. ಈ ಪ್ರೌಢ ಶಾಲೆಯಲ್ಲಿ ಓದುತ್ತಿರುವಾಗಲೇ ಕವನ ರಚನೆಯ ಗೀಳು ಹಚ್ಚಿಕೊಂಡರು. ಜನಪದ ವಿದ್ವಾಂಸ ವಿಜಯಪುರದ ಸಿಂಪಿ ಲಿಂಗಣ್ಣ ಅವರು 1982 ರಲ್ಲಿ ಈ ಪ್ರೌಢ ಶಾಲೆಗೆ ಬಂದಾಗ ತಾವು ಬರೆದ ಕವನವೊಂದು ತೋರಿಸಿದರು. ಅವರು ಮೆಚ್ಚುಗೆ ಸೂಚಿಸಿ ಬೆನ್ನು ತಟ್ಟಿದರು. ಅಂದಿನಿಂದ ನಿರಂತರವಾಗಿ ಕಾವ್ಯ, ಗದ್ಯ, ಭಾಷಣ, ನಾಟಕ ಮತ್ತು ರೂಪಕಗಳನ್ನು ಬರೆಯುವ ಹವ್ಯಾಸ ಕರಗತವಾಯಿತು.

ಧರ್ಮಣ್ಣ ಧನ್ನಿ ಅವರು ಬರೆದ ಅನೇಕ ಭಾಷಣ, ಕಾವ್ಯ ವಾಚನ, ರೂಪಕಗಳು ಕಲಬುರಗಿ ಆಕಾಶವಾಣಿಯಿಂದ ಪ್ರಸಾರವಾಗಿವೆ. ಈ ಎಲ್ಲಾ ಸಾಹಿತ್ಯದ ಪ್ರಕಾರಗಳ ರಚನೆಗೆ ಮನೆಯ ಪರಿಸರವೇ ಪ್ರಭಾವ. ಮೌನ ಮಾತಾಡಿದಾಗ, ಒಡಲ ಬ್ಯಾನಿ, ನೆನಪಿನ ಅಂಗಳದಲ್ಲಿ ಹಾಗೂ ಚುಟುಕು ಕವನ ಸಂಕಲನಗಳು ಸೇರಿ ನಾಲ್ಕು ಸಂಪಾದಿತ ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ.

ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿಗಳನ್ನು ಪ್ರೀತಿಸುವ ಕವಿ ಹೃದಯ ಧನ್ನಿ ಅವರದು. ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳನ್ನು ರೂಪಿಸಿ ನೆರವೇರಿಸಿದ್ದಾರೆ. ಸಾಕ್ಷರತಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ತರುವಲ್ಲಿ ಅವರ ಪಾತ್ರ ತುಂಬಾ ಹಿರಿದು. ಸಾಕ್ಷರತಾ ಕಲಿಕಾ ಕೇಂದ್ರಗಳನ್ನು ವ್ಯವಸ್ಥಿತವಾಗಿ ನಡೆಸಿ ರಾಜ್ಯ ಮಟ್ಟಕ್ಕೆ ಪರಿಚಯಿಸಿದ ಕೀರ್ತಿ ಧನ್ನಿ ಅವರಿಗೆ ಸಲ್ಲುತ್ತದೆ.

ಸಧ್ಯ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಷತ್ತಿನ ‘ಸಂಕಥನ’ ಮತ್ತು ‘ಕನ್ನಡ ಸಾರಥಿ’ ಕೃತಿಗಳೆರಡು ಇವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿವೆ. ಆಳಂದನ ಜೀವ ನದಿ ಅಮರ್ಜಾ ನದಿಯ ಹೆಸರಲ್ಲಿ ಪ್ರಕಾಶನ ಸ್ಥಾಪಿಸಿ ಕಲಬುರಗಿ ಭಾಗದ ಉದಯೋನ್ಮುಖ ಬರಹಗಾರರ ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದಾರೆ. ಬಹುಮುಖ ಪ್ರತಿಭೆಯ ಕವಿ ಧರ್ಮಣ್ಣ ಎಲ್ಲರ ಪ್ರೀತಿಯ ಅಣ್ಣ ಕೂಡ. ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಪುರಸ್ಕಾರಗಳು ಪಡೆದು ಕೊಂಡಿದ್ದಾರೆ.

ಕೃತಿಗಳು ಮೌನ ಮಾತಾಡಿದಾಗ (ಕವನ ಸಂಕಲನ), ಒಡಲ ಬ್ಯಾನಿ (ಕವನ ಸಂಕಲನ), ನೆನಪಿನ ಅಲೆಯಲ್ಲಿ (ಹೈಕು), ಊರಾಚೆ (ಕಥಾ ಸಂಕಲನ) ಮುದ್ರಣದಲ್ಲಿದೆ, ಚುಟುಕು (ಸಂಕಲನ), ಚುಟುಕು (ಸಂಕಲನ),  ಸಂಕಥನ, ಕನ್ನಡ ಸಾರಥಿ, ಕಹಳೆ, ವಿಜಯೀಭವ, ಮಹಿಳಾ ಸಾಹಿತಿಗಳು (ಮುದ್ರಣದಲ್ಲಿ) ಸಂಪಾದಿತ ಕೃತಿಗಳಾಗಿವೆ.

Spread the love

Leave a Reply

Your email address will not be published. Required fields are marked *

error: Content is protected !!