6 ನೇ ಸುತ್ತಿನ ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಚಾಲನೆ
ಲಸಿಕೆ ಹಾಕುವುದೊಂದೇ ರೋಗ ನಿಯಂತ್ರಣದ ಏಕೈಕ ಮಾರ್ಗ: ಡಾ. ಶಂಕರ ಕಣ್ಣಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಾಲುಬಾಯಿ ರೋಗವು ಒಂದು ವೈರಾಣು ರೋಗವಾಗಿದ್ದು, ಲಸಿಕೆ ಹಾಕುವುದೊಂದೇ ರೋಗ ನಿಯಂತ್ರಣದ ಏಕೈಕ ಮಾರ್ಗ ಎಂದು ಪಶು ವೈದ್ಯಾಧಿಕಾರಿ ಡಾ.ಶಂಕರ ಕಣ್ಣಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತ್ ಸಭಾಂಗಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ನಿ) ಮತ್ತು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ನಿ) ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕಲಬುರಗಿ ಇವರ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 6ನೇ ಸುತ್ತಿನ ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲುಬಾಯಿ ರೋಗದಿಂದ ಪೂರ್ಣ ಸುರಕ್ಷತೆಗಾಗಿ ಸತತವಾಗಿ ಕನಿಷ್ಠ ಎರಡು ಬಾರಿ ಲಸಿಕೆ ಹಾಕುವುದು ಅತ್ಯಗತ್ಯವಾಗಿರುತ್ತದೆ, ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಲಸಿಕೆ ಮಾಡುವ ವೇಳಾಪಟ್ಟಿಯನ್ನು ಗ್ರಾಮ ಪಂಚಾಯತಿಗಳಿಗೆ ನೀಡಲಾಗುವುದು ಎಂದರು.
ಕಾಲುಬಾಯಿ ರೋಗವು ಎತ್ತು, ಹೋರಿ, ಹಸು, ಎಮ್ಮೆಗಳಿಗೆ ತಗಲುವ ಮಾರಕ ರೋಗವಾಗಿದ್ದು, ರೋಗದಿಂದ ಜಾನುವಾರು ಗುಣಮುಖವಾದರೂ ಸಹ ಮುಂದೆ ಗರ್ಭ ಕಟ್ಟುವಿಕೆಯಲ್ಲಿ ವಿಳಂಬ, ಸಾಮರ್ಥ್ಯ ಮತ್ತು ಇಳುವರಿಯಲ್ಲಿ ಇಳಿಮುಖವಾಗುವುದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟುಮಾಡುತ್ತದೆ ಎಂದರು.
ಜಾತ್ರೆ ಅಥವಾ ಸಂತೆಗಳಲ್ಲಿ ಜಾನುವಾರುಗಳಿಗೆ ಕನಿಷ್ಠ 21 ದಿನಗಳ ಹಿಂದೆ ಲಸಿಕೆ ಮಾಡಿದ ಪ್ರಮಾಣಪತ್ರ ಕಡ್ಡಾಯ, ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಸಹ, ಪ್ರತಿ ಆರು ತಿಂಗಳಿಗೊಮ್ಮೆ ಕೈಗೊಳ್ಳುವ ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ ತಪ್ಪದೇ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸಿ ಎಂದು ತಿಳಿಸಿದ್ದಾರೆ.
ತಹಸೀಲ್ದಾರ್ ನಾಗಯ್ಯ ಹಿರೇಮಠ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿ, ರೈತರಿಗೆ ಆರ್ಥಿಕ ಸಂಕಷ್ಟ ಉಂಟುಮಾಡುವ ಕಾಲುಬಾಯಿ ರೋಗದಿಂದ ರಾಜ್ಯವನ್ನು ಮುಕ್ತ ಮಾಡುವಲ್ಲಿ ಸಹಕರಿಸಿ ಎಂದು ಹೇಳಿದರು
6ನೇ ಸುತ್ತಿನ ಲಸಿಕೆ ಹಾಕುವ ಅವಧಿ ಅಕ್ಟೋಬರ್ 2 ರಿಂದ ನವೆಂಬರ್ 11 ವರೆಗೆ ಇರುತ್ತದೆ. ಲಸಿಕೆದಾರರು ಎಲ್ಲಾ ಗ್ರಾಮಗಳಲ್ಲಿ ಉಚಿತವಾಗಿ ಲಸಿಕೆ ಹಾಕಲಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಿರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ ಮರತೂರಕರ್, ಸಿಪಿಐ ಚಂದ್ರಶೇಖರ ತಿಗಡಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.