ಅಬ್ಬೆತುಮಕೂರು ವಿಶ್ವಾರಾಧ್ಯರ ಮಠದಲ್ಲಿ ಜ.14ರಂದು ಸಂಕ್ರಮಣ ಆಚರಣೆ, ಪೂಜ್ಯರಿಂದ ಭೀಮಾನದಿಯಲ್ಲಿ ಗಂಗಾಮಾತೆಗೆ ವಿಶೇಷ ಪೂಜೆ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಜಿಲ್ಲೆಯ ಪ್ರಸಿದ್ದ ಯಾತ್ರಾ ಸ್ಥಳ ಶ್ರೀ ವಿಶ್ವಾರಾಧ್ಯರ ಸಿದ್ದ ಸಂಸ್ಥಾನ ಮಠ ಅಬ್ಬೆತುಮಕೂರಿನಲ್ಲಿ ಮಕರ ಸಂಕ್ರಮಣವನ್ನು ಜ.14 ರಂದು ಮಂಗಳವಾರ ದಂದು ಆಚರಿಸಲಾಗುವುದು ಎಂದು ಶ್ರೀಮಠದ ವಕ್ತಾರ ಡಾ.ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.
ಪ್ರತಿ ವರ್ಷದ ಪದ್ದತಿಯಂತೆ ಅಂದು ಬೆಳಗ್ಗೆ 10.30 ಗಂಟೆಗೆ ಶ್ರೀಮಠದ ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು ಹಲಗೆ, ಭಾಜಾ, ಭಜಂತ್ರಿ ಮುಂತಾದ ಮಂಗಲವಾದ್ಯಗಳೊಂದಿಗೆ ಭಕ್ತವೃಂದದ ಸಮೇತ ಮೆರವಣಿಗೆಯ ಮೂಲಕ ಅಬ್ಬೆತುಮಕೂರಿನ ಸೀಮಾಂತರದಲ್ಲಿರುವ ಭೀಮಾನದಿಗೆ ತೆರಳುವರು. ಅಲ್ಲಿ ತೆಪ್ಪದ ಮೂಲಕ ಭೀಮಾನದಿಯ ಮಧ್ಯೆ ಭಾಗಕ್ಕೆ ತೆರಳಿ ಗಂಗಾಸ್ನಾನ ಮಾಡಿಕೊಂಡು ಗಂಗಾಮಾತೆಗೆ ಸೀರೆ ಉಡಿಸಿ ಉಡಿತುಂಬಿ ಮಹಾಪೂಜೆಯನ್ನು ನೆರವೇರಿಸಿ ಶ್ರೀಗಳು ನದಿ ತಟಕ್ಕೆ ಆಗಮಿಸುವರು.
ನಂತರ ನದಿ ತೀರದಲ್ಲಿ ನೆರೆದ ಸಹಸ್ರಾರು ಭಕ್ತರು ಪುಣ್ಯಸ್ನಾನವನ್ನು ಮಾಡಿಕೊಂಡು ಶ್ರೀಗಳ ದರ್ಶನ ಪಡೆದು ಕೃತಾರ್ಥರಾಗುವರು. ನಂತರ ಎಳ್ಳು ಹಚ್ಚಿದ ಸಜ್ಜಿ ರೊಟ್ಟಿ, ಬೀಳಿಜೋಳದ ರೊಟ್ಟಿ, ಶೇಂಗಾ ಹೋಳಿಗೆ, ಕರಿಗಡಬು, ಶೇಂಗಾ ಹಿಂಡಿ, ಭಜಿ, ಭರ್ಥ, ಪುಂಡಿಪಲ್ಯ ಸೇರಿದಂತೆ ವಿವಿಧ ಭಕ್ಷಭೋಜ್ಯಗಳ ಮಹಾ ಪ್ರಸಾದ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.