ಅಲ್ಲೂರ.ಬಿ ಗ್ರಾಮದಲ್ಲಿ ಪತ್ರಕರ್ತ ದಿ.ನಾಗಯ್ಯ ಸ್ವಾಮಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಕುಟುಂಬಕ್ಕೆ ಪರಿಹಾರ, ಪಿಡಿಒ ವಿರುದ್ಧ ಕಠಿಣ ಶಿಕ್ಷೆಗೆ ಮುಖಂಡರ, ಮಠಾಧೀಶರ ಒಕ್ಕೊರಲಿನ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಕೆಲವೇ ಪತ್ರಕರ್ತರಲ್ಲಿ ನಾಗಯ್ಯ ಸ್ವಾಮಿ ಅಲ್ಲೂರ ಒಬ್ಬ ಪ್ರಾಮಾಣಿಕ ಹಾಗೂ ದಕ್ಷ ಪತ್ರಕರ್ತರಾಗಿದ್ದರು ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಹೇಳಿದರು.
ತಾಲೂಕಿನ ಅಲ್ಲೂರ.ಬಿ ಗ್ರಾಮದಲ್ಲಿ ನಡೆದ ಪತ್ರಕರ್ತ ದಿ.ನಾಗಯ್ಯಸ್ವಾಮಿ ಅಲ್ಲೂರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗಯ್ಯ ಸ್ವಾಮಿ ಅವರ ಸಾವು ತುಂಬಾ ನೋವುಂಟು ಮಾಡಿದೆ ಅವರ ಸಾವಿಗೆ ನ್ಯಾಯ ಸಿಗಬೇಕು ಈ ನಿಟ್ಟಿನಲ್ಲಿ ಅವರ ಕುಟುಂಬದ ಜೊತೆ ನಾವಿದ್ದೇವೆ ಎಂದು ಭರವಸೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ಸಾಹಿತ್ಯ, ಶಿಕ್ಷಣ ಹಾಗೂ ಪತ್ರಿಕಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಈ ನಿಟ್ಟಿನಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಿದ ಕೀರ್ತಿ ನಾಗಯ್ಯ ಸ್ವಾಮಿ ಅಲ್ಲೂರ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.
ಹಿರಿಯ ಪತ್ರಕರ್ತ ಮುಡುಬಿ ಗುಂಡೇರಾವ್ ಮಾತನಾಡಿ, ನಾಗಯ್ಯ ಸ್ವಾಮಿ ಸಾಹಿತಿಯಾಗಿ ಗುರುತಿಸಿಕೊಳ್ಳುವ ಮೂಲಕ ಚಿತ್ತಾಪುರದಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಅವರಿಗೆ ಈ ಭಾಗದ ಸಾಹಿತ್ಯ ಮತ್ತು ಇತಿಹಾಸದ ಮೇಲೆ ಹೆಚ್ಚಿನ ಆಸಕ್ತಿ ಮತ್ತು ಅಭಿಮಾನ ಇತ್ತು ಅವರ ಅಗಲಿಕೆಯಿಂದ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದು ಕಂಬನಿ ಮಿಡಿದರು.
ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು ಮಾತನಾಡಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಎಲ್ಲರೂ ನೆನೆಸುವಂತ ಕೆಲಸ ಮಾಡಿದ್ದಾರೆ, ತಾಲೂಕಿನಲ್ಲಿ ಪ್ರಥಮ ಸಾಹಿತ್ಯ ಸಮ್ಮೇಳನ ಬಹಳ ಅದ್ದೂರಿಯಾಗಿ ಮಾಡುವ ಮೂಲಕ ಸಾಹಿತ್ಯಿಕ ವಾತಾವರಣ ನಿರ್ಮಾಣ ಮಾಡಿದ್ದಾರೆ. ನಾಗಯ್ಯ ಸ್ವಾಮಿ ಅವರ ಸಾವು ನ್ಯಾಯಯುತವಲ್ಲ, ತಾನು ಬರೆದ ಪುಸ್ತಕ ಪಂಚಾಯತಿಗೆ ನೀಡಿದ ಬಿಲ್ ಕೇಳಿದ್ದೆ ತಪ್ಪಾ ಹೀಗಾಗಿ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ ಸುಭಾಷ್ ಬಣಗಾರ್ ಮಾತನಾಡಿ, ಚಿತ್ತಾಪುರ ಪಟ್ಟಣದಲ್ಲಿ ಬಯಲು ಗ್ರಂಥಾಲಯ ಮಾಡಿ ಪತ್ರಿಕೆ ಓದುವ ಹವ್ಯಾಸ ಮೂಡಿಸಿದ ನಾಗಯ್ಯ ಸ್ವಾಮಿ ಅವರ ಸೇವಾಸಕ್ತಿ ಮೆಚ್ಚುವಂಥದ್ದು ಎಂದು ಸ್ಮರಿಸಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಮಾತನಾಡಿ, ಪಿಡಿಒ ಬೆದರಿಕೆಗೆ ಆಘಾತಗೊಂಡು ಸಾವನ್ನಪ್ಪಿದ್ದ ನಾಗಯ್ಯ ಸ್ವಾಮಿ ಅಲ್ಲೂರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಅವರ ಹೆಸರಿನ ಮೇಲೆ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ವಾರ್ಷಿಕ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದರು. ಈ ಸಾವಿಗೆ ಕಾರಣವಾದ ಪಿಡಿಒ ಅವರ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.
ನ್ಯಾಯವಾದಿ ಚಂದ್ರಶೇಖರ ಅವಂಟಿ ಮಾತನಾಡಿ, ಪಿಡಿಒ ಬೆದರಿಕೆಗೆ ಸಾವನ್ನಪ್ಪಿದ್ದ ನಾಗಯ್ಯ ಸ್ವಾಮಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಹಾಗೂ ಪಿಡಿಒ ಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ದಿಗ್ಗಾಂವ ಶ್ರೀ ಸಿದ್ದವೀರ ಶಿವಾಚಾರ್ಯರು ಮಾತನಾಡಿ, ನಾಗಯ್ಯ ಸ್ವಾಮಿ ಅವರು ವಿಚಾರ ಮಾಡಿ ವಿಮರ್ಶೆ ಮಾಡಿ ವರದಿ ಮಾಡುತ್ತಿದ್ದರು ಅವರೊಬ್ಬ ಸಾತ್ವಿಕ ಪತ್ರಕರ್ತರಾಗಿದ್ದರು ಅವರ ಕುಟುಂಬದ ಜೊತೆ ನಾವಿದ್ದೇವೆ ಎಂದು ಅಭಯಹಸ್ತ ನೀಡಿದರು.
ಡಿವೈಎಸ್ಪಿ ಶಂಕರಗೌಡ ಪಾಟೀಲ ಮಾತನಾಡಿ, ನಾಗಯ್ಯ ಸ್ವಾಮಿ ಅವರ ವ್ಯಕ್ತಿತ್ವ ಎಂಥದು ಎನ್ನುವುದಕ್ಕೆ ಇಲ್ಲಿ ಸೇರಿದ ಜನರೇ ಸಾಕ್ಷಿ ಇವರೊಬ್ಬ ಸರಳ ಹಾಗೂ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು ಎಂದು ನುಡಿನಮನ ಸಲ್ಲಿಸಿದರು.
ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ನಾಗಯ್ಯ ಸ್ವಾಮಿ ಅವರು ಸಾವಿನಿಂದ ಪತ್ರಿಕಾ ರಂಗ ಬಡವಾಗಿದೆ. ಪಿಡಿಒ ಅವರ ಬೆದರಿಕೆಯಿಂದ ಇಂದು ನಾಗಯ್ಯ ಸ್ವಾಮಿ ಅವರ ಕುಟುಂಬ ಕಣ್ಣಿರಲ್ಲಿ ಮೂಳುಗಿದೆ. ನಾಗಯ್ಯ ಸ್ವಾಮಿ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು ಹಾಗೂ ಸಾವಿಗೆ ಕಾರಣವಾದ ಪಿಡಿಒ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಲಕಟ್ಟಿ ಶ್ರೀ ಮುನೀಂದ್ರ ಶಿವಾಚಾರ್ಯರು, ಸಿಪಿಐ ಜಗದೇವಪ ಪಾಳಾ, ಪಿಎಸ್ಐ ಶ್ರೀಶೈಲ್ ಅಂಬಾಟಿ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಮಲ್ಲಿಕಾರ್ಜುನ ಸೇಡಂ, ಮುಖಂಡರಾದ ಬಸವರಾಜ ಪಾಟೀಲ ಬೆಳಗುಂಪಾ, ಜಗದೇವರೆಡ್ಡಿ ಪಾಟೀಲ, ಸಿದ್ದರಾಮ ಹೊನ್ಕಲ್, ಬಿ.ಎಚ್.ನಿರಗುಡಿ, ವಿಠಲ್ ನಾಯಕ, ಸಿ.ಎಸ್.ಮಾಲಿಪಾಟೀಲ, ಸಿದ್ದು ಸಾತಿಹಾಳ, ವೀರಣ್ಣ ಯಾರಿ, ನಾಗರಾಜ ಭಂಕಲಗಿ, ವಿನೋದ ಗುತ್ತೇದಾರ, ಬಸವರಾಜ ಹೊಸಳ್ಳಿ, ಶರಣಗೌಡ ಭೀಮನಳ್ಳಿ, ರವೀಂದ್ರ ಸಜ್ಜನಶೆಟ್ಟಿ, ಅಯ್ಯಪ್ಪ ರಾಮತೀರ್ಥ, ಸಿದ್ದಲಿಂಗ ಬಾಳಿ, ಶರಣು ಜ್ಯೋತಿ, ದೇವಿಂದ್ರಪ್ಪ ಅವಂಟಿ, ಶಿವುಕುಮಾರ ಯಾಗಾಪೂರ, ನಿಂಗಣ್ಣ ಹೆಗಲೇರಿ, ಅಂಬರೀಷ್ ಸುಲೇಗಾಂವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಿದ್ದಯ್ಯ ಶಾಸ್ತ್ರಿ ವಾಡಿ ನಿರೂಪಿಸಿದರು.