ಅಂಗನವಾಡಿಗಳಲ್ಲಿ ಶುಚಿತ್ವ ಕಾಪಾಡಿ: ಸಚಿವ ಪ್ರಿಯಾಂಕ್ ಖರ್ಗೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಅಂಗನವಾಡಿಗಳಲ್ಲಿ ಶುಚಿತ್ವ ಕಾಪಾಡಿ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.
ತಾಲೂಕಿನ ದಂಡೋತಿ ಗ್ರಾಮದಲ್ಲಿ ಮೂರು ಹಾಗೂ ಚಿತ್ತಾಪುರ ಪಟ್ಟಣದಲ್ಲಿ ಎರಡು ಅಂಗನವಾಡಿ ಕೇಂದ್ರಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಅಂಗನವಾಡಿ ಕೇಂದ್ರಗಳಲ್ಲಿ ತಯಾರಿಸುವ ಅಡುಗೆಯಲ್ಲಿ ಶುಚಿತ್ವ ಹಾಗೂ ಸ್ವಚ್ಛತೆ ಕಾಪಾಡಿಕೊಂಡು ಮಕ್ಕಳಿಗೆ ವಿದ್ಯೆ ಕಲಿಸುವುದರ ಜೊತೆಗೆ ಆರೋಗ್ಯದ ಕಡೆಗೆ ವಿಶೇಷ ಗಮನ ಹರಿಸಬೇಕೆಂದು ಸಚಿವರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
2022-23 ನೇ ಸಾಲಿನ ಕೆಕೆಆರ್ ಡಿಬಿ ಮೆಗಾ ಮ್ಯಾಕ್ರೋ ಯೋಜನೆಯಡಿಯಲ್ಲಿ ತಲಾ ರೂ. 20 ಲಕ್ಷ ವೆಚ್ಚದಲ್ಲಿ ದಂಡೋತಿ ಗ್ರಾಮದಲ್ಲಿ ಮೂರು ಹಾಗೂ ಚಿತ್ತಾಪುರ ಪಟ್ಟಣದ ಅಂಬೇಡ್ಕರ್ ನಗರ ಮತ್ತು ವಡ್ಡರಗಲ್ಲಿಯಲ್ಲಿ ತಲಾ ಒಂದು ಅಂಗನವಾಡಿ ಕೇಂದ್ರಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಉದ್ಘಾಟನೆಯ ನಂತರ ಕೇಂದ್ರಗಳಲ್ಲಿದ್ದ ಚಿಣ್ಣರೊಂದಿಗೆ ಸಚಿವರು ಕೆಲ ಕಾಲ ಸಮಯ ಕಳೆದು ಅವರಿಗೆ ಶುಭ ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಎಸ್.ಪಿ ಅಡ್ಡೂರು ಶ್ರೀನಿವಾಸಲು, ಅಡಿಷನಲ್ ಎಸ್.ಪಿ ಮಹೇಶ್ ಮೇಘಣ್ಣವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ತಹಸೀಲ್ದಾರ್ ನಾಗಯ್ಯ ಹಿರೇಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ್ ರಾಠೋಡ, ಸಿಡಿಪಿಒ ಆರತಿ ತುಪ್ಪದ್, ದಂಡೋತಿ ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಶಿವಾಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಕಾರ್ಯದರ್ಶಿ ರಮೇಶ್ ಮರಗೋಳ, ಪ್ರಮುಖರಾದ ರಾಜಶೇಖರ್ ತಿಮ್ಮನಾಯಕ, ವೀರಣ್ಣಗೌಡ ಪರಸರೆಡ್ಡಿ ನಾಲವಾರ, ಸುನೀಲ್ ದೊಡ್ಡಮನಿ, ಬಸವರಾಜ ಹೊಸಳ್ಳಿ, ಮನ್ಸೂರ್ ಪಟೇಲ್, ಚಂದ್ರಶೇಖರ್ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ, ವಿನೋದ ಗುತ್ತೇದಾರ, ಶಿವಕಾಂತ ಬೆಣ್ಣೂರಕರ್, ರಷೀದ್ ಪಠಾಣ, ಶರಣಪ್ಪ ನಾಟೀಕಾರ, ಮುನಿಯಪ್ಪ ಕೊಳ್ಳಿ, ರಮೇಶ್ ಕವಡೆ, ಸಾಬಣ್ಣ ಭರಾಟೆ, ಕಾಶಪ್ಪ ಡೋಣಗಾಂವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.