Oplus_0

ದಿ. 17 ರಂದು ಬಂಜಾರ, ಭೋವಿ, ಕೊರಮ, ಕೊರಚ ಸಮಾಜಗಳಿಂದ ಬೆಳಗಾವಿ ಚಲೋ, ತರಾತುರಿಯಲ್ಲಿ ಒಳ ಮೀಸಲಾತಿ ಜಾರಿ ಕೈಬಿಡಬೇಕು ಇಲ್ಲದಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ: ಚಂದು ಜಾಧವ ಎಚ್ಚರಿಕೆ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಯಾವುದೋ ಒಂದು ಸಮುದಾಯದ ಮಾತು ಕೇಳಿ ತರಾತುರಿಯಲ್ಲಿ ಒಳ ಮೀಸಲಾತಿ ಜಾರಿ ಕೈಬಿಡಬೇಕು ಇಲ್ಲದಿದ್ದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಬಂಜಾರ ಸಮಾಜದ ಹಿರಿಯ ಮುಖಂಡ ಚಂದು ಜಾಧವ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಒಳ ಮೀಸಲಾತಿ ಜಾರಿ ಕುರಿತು ಮಾತನಾಡಿದ ಬಿಜೆಪಿ ಕೈ ಸುಟ್ಟುಕೊಂಡಿದೆ ಅದೇ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬರಲಿದೆ ಎಂದರು. ಈಗ ಹೋರಾಟ ಮಾಡುತ್ತಿದ್ದೇವೆ ಮುಂದಿನ ದಿನಗಳಲ್ಲಿ ಮತಶಕ್ತಿಯ ಮೂಲಕ ಉತ್ತರ ನೀಡಬೇಕಾಗುತ್ತದೆ ಎಂದು ಹೇಳಿದರು.

ಬಂಜಾರ ಸಮಾಜದ ಯುವ ಅಧ್ಯಕ್ಷ ಜಗದೀಶ್ ಚವ್ಹಾಣ ಮಾತನಾಡಿ, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಯನ್ನು ಕೈಬಿಡಬೇಕೆಂದು ಹಾಗೂ ಕರ್ನಾಟಕ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಶ್ರೀ ನಾಗಮೋಹನ್ ದಾಸ್ ಇವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿದ್ದು ಎರಡೇ ತಿಂಗಳಲ್ಲಿ ವರದಿಯನ್ನು ಸಿದ್ಧಪಡಿಸಿ ಸರಕಾರಕ್ಕೆ ಒಪ್ಪಿಸಲು ಆದೇಶವನ್ನು ನೀಡಿರುತ್ತಾರೆ ಆದರೆ ಸರ್ವೋಚ್ಚ ನ್ಯಾಯಾಲಯವು ನೀಡಿದ ಆದೇಶದ ಅನುಸಾರ ಆಯೋಗವು (ಎಂಪೆರಿಕಲ್ ಡೇಟಾ) ಪ್ರಾಯೋಗಿಕ ದತ್ತಾಂಶವನ್ನು ಪ್ರತಿ ಮನೆಗೆ ತೆರಳಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಒಳ ಮೀಸಲಾತಿ ಜಾರಿ ಕುರಿತು ಸುಪ್ರೀಂ ಕೋರ್ಟ್ ಆಯಾಯ ರಾಜ್ಯದ ಮೇಲೆ ಬಿಟ್ಟಿದೆ ಹೀಗಾಗಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿನ ದಲಿತರ, ಹಿಂದುಳಿದ ವರ್ಗಗಳ ನಾಯಕರಾಗಿದ್ದು ಯಾವುದೇ ಕಾರಣಕ್ಕೂ ಒಳ ಮೀಸಲಾತಿ ಜಾರಿ ಮಾಡಬಾರದು ಎಂದು ಮನವಿ ಮಾಡಿಕೊಂಡರು.

ಈ ಸಂಧರ್ಭದಲ್ಲಿ ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಭೀಮಸಿಂಗ್ ಚವ್ಹಾಣ, ಮುಖಂಡರಾದ ವಿಠಲ್ ಕಟ್ಟಿಮನಿ, ಸುಭಾಷ್ ಕಟ್ಟಿಮನಿ, ದೇವಿದಾಸ್ ಚವ್ಹಾಣ, ಪ್ರವೀಣ್ ಪವಾರ, ರಾಕೇಶ್ ಪವಾರ, ಪ್ರಭು ಕಾಶಿ, ವೆಂಕಟೇಶ್ ಹರವಾಳ, ಸುನೀಲ್ ಪವಾರ, ತಿಮಯ್ಯ ಪವಾರ, ರಮೇಶ್ ಭೋಸಗಿ, ಶಿವರಾಮ್ ಚವ್ಹಾಣ ಇದ್ದರು.

“ಒಳ ಮೀಸಲಾತಿ ಜಾರಿ ಕೈ ಬಿಡಬೇಕು ಎಂದು ಒತ್ತಾಯಿಸಿ ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ  ಹೋರಾಟದಲ್ಲಿ ಬಂಜಾರ, ಭೋವಿ, ಕೊರಚ ಮತ್ತು ಕೊರಮ ಸಮಾಜಗಳ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಮಾಜದ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕು”.-ಮಹೇಶ ಕಾಶಿ ಭೋವಿ ವಡ್ಡರ ಸಮಾಜದ ಯುವ ಮುಖಂಡರು.

“ಒಳ ಮೀಸಲಾತಿ ಜಾರಿ ಆಗದಂತೆ ಕ್ಷೇತ್ರದ ಶಾಸಕರು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೆಳಗಾವಿ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಚರ್ಚೆ ಮಾಡುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಬೇಕು”.-ಅಶ್ವಥ್ ರಾಠೋಡ ಬಂಜಾರ ಸಮಾಜದ ಯುವ ಮುಖಂಡರು.

Spread the love

Leave a Reply

Your email address will not be published. Required fields are marked *

error: Content is protected !!