ಬೆಳಗುಂಪಾ ಮರಳು ದಕ್ಕಾದಲ್ಲಿ ಬಿದ್ದು ಕುರಿಗಾಯಿ ಶ್ರೀಧರ್ ನವಲಕರ್ ಸಾವು, ಪರಿಹಾರಕ್ಕೆ ಕೋಲಿ ಸಮಾಜದ ಮುಖಂಡರು ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಬೆಳಗುಂಪಾ ಗ್ರಾಮದ ಮರಳು ದಕ್ಕಾದಲ್ಲಿ ಕರಿಗಾಯಿ ಶ್ರೀಧರ್ ಅಮೃತ ನವಲಕರ್ (28) ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ನಿತ್ಯ ಕುರಿಗಳನ್ನು ಕಾಯುತ್ತಾ ಹೋಗುತಿದ್ದ ಶ್ರೀಧರ್ ಶನಿವಾರ ಮನೆಗೆ ಬಾರದೇ ಇರುವುದರಿಂದ ಮನೆಯವರು ಎಲ್ಲಾಕಡೆ ಹುಡುಕಾಡಿದರು, ಕೊನೆಗೆ ಮಂಗಳವಾರ ಮರಳುಗಾರಿಕೆಗಾಗಿ ಆಳವಾಗಿ ತೊಡಿದ ನೀರು ತುಂಬಿದ ಬೃಹದಾಕಾರದ ಗುಂಡಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕೋಲಿ ಕಬ್ಬಲಿಗಾ ಸಮನ್ವಯ ಸಮಿತಿಯ ಜಿಲ್ಲಾ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಬಸವರಾಜ ಬೂದಿಹಾಳ, ಗುಂಡು ಐನಾಪುರ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ ನೇತೃತ್ವದಲ್ಲಿ ನೂರಾರು ಮುಖಂಡರು ದೌಡಾಯಿಸಿ ಘಟನೆಯನ್ನು ಖಂಡಿಸಿ ಪ್ರತಿಭಟಿಸಿದರು.
ಅವ್ವಣ್ಣ ಮ್ಯಾಕೇರಿ ಮತ್ತು ಗುಂಡು ಐನಾಪುರ ಅವರು ಮಾತನಾಡಿ, ಮೃತ ಕುಟುಂಬಕ್ಕೆ 1 ಕೋಟಿ ಪರಿಹಾರ, ಒಂದು ಸರ್ಕಾರಿ ನೌಕರಿ, ಮನೆ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಮರಳುಗಾರಿಗಾಗಿ ಬರೀ 5 ಎಕರೆ ಭೂಮಿಗೆ ಅನುಮತಿ ಪಡೆದು ರೈತರಿಗೆ ಹಣದ ಆಮಿಷ ತೋರಿಸಿ 20-30 ಎಕರೆ ಖರೀದಿಸಿ ಅನಧಿಕೃತ ಮರಳುಗಾರಿಕೆ ಮಾಡುತ್ತಿದ್ದಾರೆ ಅಲ್ಲದೇ 5 ಫೀಟ್ ಅಗೆಯಲು ಅನುಮತಿ ಪಡೆದು 70 ಫೀಟ್ ಅಗೆಯುವ ಮೂಲಕ ರಾಜಾರೋಷವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೇ ಅಕ್ರಮ ಮರಳುಗಾರಿಕೆ ತಡೆಹಿಡಿದು ಇದರಲ್ಲಿ ಶಾಮೀಲಾದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಮಾಡಬೂಳ ಪಿಎಸ್ಐ ಶೀಲಾ ದೇವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.