Oplus_131072

ಭರತನೂರ ಲಿಂ. ಶ್ರೀ ಗುರುನಂಜೇಶ್ವರ ಮಹಾ ಶಿವಯೋಗಿಗಳ ಪುರಾಣ ಮಹಾಮಂಗಲ, ಸಮಾಜದ ಅಭಿವೃದ್ಧಿಗೆ ವೀರಶೈವ ಮಠಗಳ ಕೊಡುಗೆ ಅಪಾರ: ಶ್ರೀಶೈಲ ಜಗದ್ಗುರು

ನಾಗಾವಿ ಎಕ್ಸ್‌ಪ್ರೆಸ್‌

ಕಾಳಗಿ: ಪುರಾತನ ಕಾಲದಿಂದಲೂ ವೀರಶೈವ ಮಠಗಳು ಜಾತಿ, ಭೇದ ಎಣಿಸದೆ ಸರ್ವ ಜನಾಂಗದವರಿಗೂ ಅಕ್ಷರ, ಅನ್ನ, ಮತ್ತು ವಸತಿ ನೀಡುತ್ತ ಬಂದಿವೆ. ಸಮಾಜದ ಅಭಿವೃದ್ಧಿಗೆ ವೀರಶೈವ ಮಠಗಳ ಕೊಡುಗೆ ಅಪಾರವಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಭರತನೂರಿನ ವಿರಕ್ತ ಮಠದ ಮಹಾತಪಸ್ವಿ ದಾಸೋಹ ಮೂರ್ತಿ ಲಿಂ. ಪೂಜ್ಯ ಗುರುನಂಜೇಶ್ವರ ಮಹಾಶಿವಯೋಗಿಗಳವರ 31 ನೇ ಪುಣ್ಯ ಸ್ಮರಣೋತ್ಸವ ಹಾಗೂ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳ ನಿರಂಜನ ಚರ ಪಟ್ಟಾಧಿಕಾರದ 25 ನೇ ರಜತ್ ಮಹೋತ್ಸವ ನಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಪಂಚಪೀಠ ಮತ್ತು ವಿರಕ್ತ ಪೀಠಗಳ ಮಧ್ಯೆ ಯಾವುದೇ ಮತ ಭೇದ ಭಾವವಿಲ್ಲ, ಭಕ್ತ ಸಮೂಹಕ್ಕೆ ಒಳಿತಾಗಬೇಕೆಂಬುದೆ ಆಶಯವಾಗಿದೆ. ಆದರೆ ಕೆಲವರು ಕಂದಕ ಸೃಷ್ಟಿ ಮಾಡುತ್ತಿರುವುದು ಸರಿಯಲ್ಲ, ಪಂಚಪೀಠ ಮತ್ತು ಗುರು ವಿರಕ್ತ ಪೀಠಗಳು ವೀರಶೈವ ಸಮಾಜದ ಎರಡು ಕಣ್ಣುಗಳಿದ್ದಂತೆ, ಭಕ್ತರಿಂದಲೇ ಮಠಮಾನ್ಯಗಳು ಮತ್ತು ಪೀಠಗಳು ಬೆಳೆಯಲು ಸಾಧ್ಯ ಎಂದು ಹೇಳಿದರು.

ಭರತನೂರಿನ ಲಿಂ. ಪೂಜ್ಯ ಗುರುನಂಜೇಶ್ವರರು ಮಹಾನ ತಪಸ್ವಿಗಳಾಗಿ ಅನೇಕ ಪವಾಡಗಳನ್ನು ಮಾಡಿದ್ದಾರೆ. ನೊಂದು ಬೆಂದವರಿಗೆ, ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ ಭಕ್ತರ ಬಾಳಿಗೆ ಬೆಳಕಾಗಿದ್ದರು. ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ಜಾತಿ, ಕುಲ ಭೇಧ ಭಾವ ಮಾಡದೆ ಸರ್ವ ಜನಾಂಗದವರಿಗೂ ಅಕ್ಷರ, ಅನ್ನ, ಮತ್ತು ಜ್ಞಾನ ನೀಡುವುದರ ಮೂಲಕ ತ್ರಿವಿಧ ದಾಸೋಹಿಗಳಾಗಿ, ಸಾಮಾಜಿಕ, ಆಧ್ಯಾತ್ಮಿಕ, ಮಾನವೀಯ ಮೌಲ್ಯಗಳನ್ನು ಭೋದಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಗದಗ ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಡಾ. ಕಲ್ಲಯ್ಯಜ್ಜನವರು ಆಶೀರ್ವಚನ ನೀಡಿ, ಮಕ್ಕಳಲ್ಲಿ ಸಂಸ್ಕಾರದ ಕೊರತೆಯಿಂದಾಗಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಪಾಲಕರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರೆ ಸಾಲದು. ಜೀವನ ಮೌಲ್ಯಗಳನ್ನು ಬಿತ್ತಬೇಕು. ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡಬೇಕು, ಮಕ್ಕಳಿಗೆ ಮೊಬೈಲ ಕೊಡಿಸುವ ಬದಲು ಒಳ್ಳೆಯ ಪುಸ್ತಕ ಕೊಡಿಸಿ ಮಸ್ತಕ ಓದುವ ಹವ್ಯಾಸ ಬೆಳೆಸಬೇಕು ಎಂದು ಹೇಳಿದರು.

ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಮಾತನಾಡಿದರು. ಭರತನೂರಿನ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಹುಲಸೂರಿನ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು, ಹೊಸಳ್ಳಿ(ಎಚ್) ಪೂಜ್ಯ ಸಿದ್ದಲಿಂಗ ಶಿವಾಚಾರ್ಯರು, ಅಥಣಿಯ ಮಹಾದೇವ ಮಹಾರಾಜರು ಸಾನಿಧ್ಯ ವಹಿಸಿದ್ದರು.

ಶ್ರೀಮಠದ ಭಕ್ತ ಶರಣಬಸ್ಸಪ್ಪ ಸೂರವಾರ ತೊನಸಳ್ಳಿ ಅವರು ಗದಗನ ವಿರೇಶ್ವರ ಪುಣ್ಯಾಶ್ರಮ ಮಠದ ಪೂಜ್ಯ ಕಲ್ಲಯ್ಯಜ್ಜನವರಿಗೆ ತುಲಭಾರ ಸೇವೆ ಸಲ್ಲಿಸಿದರು.

ಪುರಾಣ ಪ್ರವೀಣ ಮಲ್ಲಿಕಾರ್ಜುನ ಶಾಸ್ತ್ರೀ ಐನಾಪೂರ ಮಹಾತಪಸ್ವಿ ಲಿಂ. ಗುರುನಂಜೇಶ್ವರ ಶಿವಯೋಗಿಗಳವರ ಪುರಾಣವನ್ನು ನಡೆಸಿಕೊಟ್ಟರು. ಸಂಗಮೇಶ ಪಾಟೀಲ್ ಸಂಗೀತ ಸೇವೆ ಸಲ್ಲಿಸಿದರು. ಪ್ರವೀಣಕುಮಾರ ಪಂಚಾಳ ತಬಲಾ ಸೇವೆ, ಷಣ್ಮಖಯ್ಯ ಹಿರೇಮಠ ವಾಯಲಿನ ಸೇವೆ ನಲ್ಲಿಸಿದರು.

ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಲಿಂಗರೆಡ್ಡಿ ದೇಶಮುಖ, ಗ್ರಾ.ಪಂ ಅಧ್ಯಕ್ಷ ಪ್ರಕಾಶ ರೆಡ್ಡಿ ರಾಜಾಪೂರ, ಉದ್ಯಮಿ ಧರ್ಮರಾಜ ಕಲ್ಲಹಿಪ್ಪರಗಾ, ಭೂದಾನಿ ಗೋವಿಂದರೆಡ್ಡಿ ತುಮಕುಂಟಿ, ಅಣ್ಣಾರಾಯ ಪೆದ್ದಿ, ಸಿದ್ದು ಪೆದ್ದಿ, ಜಗಧೀಶ ಪಾಟೀಲ್ ರಾಜಾಪೂರ, ಮುರಗಯ್ಯ ಸ್ವಾಮಿ ಮಠಪತಿ ಸೇರದಂತೆ ಸುತ್ತಲಿನ ಗ್ರಾಮದ ಭಕ್ತರು ಇದ್ದರು. ನವಲಿಂಗ ಪಾಟೀಲ್ ನಿರೂಪಿಸಿ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!