ಭೀಮನಳ್ಳಿ ಗ್ರಾಮದಲ್ಲಿ ಹಳ್ಳ ಹಿಡಿದ ಜೆಜೆಎಂ ಕಾಮಗಾರಿ, ತನಿಖೆಗೆ ಗ್ರಾಮಸ್ಥರ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕೇಂದ್ರ ಸರಕಾರದ ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯ ಕಾಮಗಾರಿ ಹಳ್ಳ ಹಿಡಿದಿದೆ. ಪ್ರತಿ ಕುಟುಂಬಕ್ಕೆ ಶುದ್ಧ ಕುಡಿಯುವ ನೀರು ಕಲ್ಪಿಸುವುದು ಸರಕಾರದ ಮುಖ್ಯ ಉದ್ದೇಶವಾಗಿದೆ ಆದರೆ ಅಕ್ಷರಶಃ ಈಡೇರದೆ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಯೋಜನೆ ಹೆಸರಲ್ಲಿ ಬೋಗಸ್ ಕಾಮಗಾರಿ ನಡೆಸಿ ಹಣ ಲೂಟಿ ಮಾಡಿರುವುದು ಮಾತ್ರ ಕಣ್ಣಿಗೆ ಕಾಣುತ್ತಿದೆ. ಇದಕ್ಕೆ ಚಿತ್ತಾಪುರ ತಾಲೂಕಿನ ಭೀಮನಳ್ಳಿ ಗ್ರಾಮದಲ್ಲಿ ನಡೆದ ಜೆಜೆಎಂ ಕಾಮಗಾರಿಯೇ ತಾಜಾ ಉದಾಹರಣೆಯಾಗಿದೆ. ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡರು ಆಗ್ರಹಿಸಿದ್ದಾರೆ.
2020-21 ರಲ್ಲಿ ಜೆಜೆಎಂ ಕಾಮಗಾರಿಗೆ ಮಂಜೂರಾದ 40 ಲಕ್ಷ ಅನುದಾನದ ಗುತ್ತಿಗೆಯನ್ನು ಆಗ ಶ್ರೀ ಸಂದೀಪ್ ಬೋಸಲೆ ಪಡೆದಿದ್ದರು. ಈ ಪೈಕಿ 37,04,369 ಹಣ 2022 ರಲ್ಲಿ ಪಾವತಿಯಾಗಿದೆ, ಆದರೂ ಸಹ ಮನೆ ಮನೆಗೆ ನೀರು ಮಾತ್ರ ಹರಿದಿಲ್ಲ ಆದರೆ ಸರ್ಕಾರದ ಹಣ ಮಾತ್ರ ನೀರಿನಲ್ಲಿ ಹರಿದಂತಾಗಿದೆ. ಕಣ್ಣಿಗೆ ಕಾಣುವಂತೆ ನಳ ಕೂಡಿಸಿದ್ದಾರೆ ಆದರೆ ಅದಕ್ಕೆ ಸಂಪರ್ಕಿಸುವ ಪೈಪ್ ಲೈನ್ ಅಳವಡಿಸಿಲ್ಲ, ಪೈಪ್ ಲೈನ್ ಮಾಡಿಲ್ಲ ಅಂದ ಮೇಲೆ ನೀರು ಎಲ್ಲಿಂದ ಹರಿಯುತ್ತದೆ ಎಂದು ಗ್ರಾಮದ ಕ್ರಿಶ್ಚಿಯನ್ ವಾಡ್ ಮುಖಂಡ ಚಂದ್ರಾಮ್ ಗಂಗಣೋರ್ ಪ್ರಶ್ನಿಸಿದ್ದಾರೆ.
ಈ ಕುರಿತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಹಾಗೂ ಜೆಇ ಅವರಿಗೆ ಸಂಪರ್ಕಿಸಿದರೆ ನಾವುಗಳು ಇಚೇಗೆ ಬಂದಿದ್ದೇವೆ ಈ ಕಾಮಗಾರಿ ಹಳೆಯದು ಎಂದು ಹಾರಿಕೆಯ ಉತ್ತರ ನೀಡಿದ್ದಾರೆ, ನಾವು ಅದರ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿ ಕುಟುಂಬಕ್ಕೆ ಶುದ್ಧ ಕುಡಿಯುವ ನೀರು ಕಲ್ಪಿಸುವುದು ಸರಕಾರದ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿಯೇ ಸರಕಾರ ಜಲ ಜೀವನ ಮಿಷನ್ ಯೋಜನೆಯಡಿ ತಾಲೂಕಿನ ಭೀಮನಳ್ಳಿ ಗ್ರಾಮದಲ್ಲಿ 40 ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ಯೋಜನೆಯ ಲಾಭ ಜನರಿಗೆ ತಲುಪುತ್ತಿಲ್ಲ ಎಂದು ಶರಣಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿಗಳು ಸಂಪೂರ್ಣ ಕಳಪೆ ಮಟ್ಟದಲ್ಲಿ ನಡೆದರೂ ಸಹ 37 ಲಕ್ಷ ಸರ್ಕಾರದ ಹಣ ಗುತ್ತಿಗೆದಾರನಿಗೆ ಪಾವತಿಯಾಗಿದೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಆದ್ದರಿಂದ ಕಾಮಗಾರಿಗಳನ್ನು ಮರು ಪರಿಶೀಲನೆ ಮಾಡಬೇಕು ಪಾವತಿಯಾದ ಹಣ ವಾಪಸ್ ಪಡೆಯಬೇಕು ಎಂದು ಚಂದ್ರಾಮ್ ಗಂಗಣೋರ್ ಆಗ್ರಹಿಸಿದ್ದಾರೆ.
ಜೆಜೆಎಂ ಕಾಮಗಾರಿ ನಡೆದು ಕಳೆದ ಎರಡು ವರ್ಷ ಆಯಿತು ಆದರೂ ಇಲ್ಲಿವರೆಗೆ ಹನಿ ನೀರು ಬಂದಿಲ್ಲ ಹೀಗಾಗಿ ನಾವು ಎರಡು ಕಿ.ಮೀ ದೂರದ ಹೊಲದಿಂದ ನೀರು ತರಬೇಕಿದೆ ಇದರಿಂದ ನಮ್ಮ ಕಾಲು ಕೈಗಳು ಬೇನೆಯಾಗಿವೆ ಹೀಗಾಗಿ ಕೂಡಲೇ ನಮ್ಮ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ನಿರ್ಮಾಲ್ಲಮ್ಮ, ರತ್ನಮ್ಮ, ಮಹಾದೇವಮ್ಮ, ಸೌಭಾಗ್ಯಮ್ಮ, ಮಂಜುಳಮ್ಮ, ರಾಮಮ್ಮ ಅವರು ತಮ್ಮ ಅಳಲನ್ನು ತೋಡಿಕೊಂಡರು.
ಕೂಡಲೇ ಇತ್ತಕಡೆ ಕ್ಷೇತ್ರದ ಶಾಸಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ