ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಿಂದಿಸಿರುವ ಆರೋಪದಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ವಿರುದ್ಧ ಎಫ್ಐಆರ್ ದಾಖಲು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಿಂದಿಸಿರುವ ಆರೋಪದಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಕಂಠ ರಾಠೋಡ್ ಅವರು ಮೇ.25 ರಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪೊಲೀಸ್ ಅಧಿಕಾರಿಗಳನ್ನು ಸೇರಿದಂತೆ ಕಾಂಗ್ರೆಸ್ ಮುಖಂಡ ಲಚ್ಚಪ್ಪ ಜಮಾದಾರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ, ಸಮಾಜದಲ್ಲಿ ಅಶಾಂತಿ ಮೂಡಿಸುವ ಸಂಚು ರೂಪಿಸಿದ್ದಾರೆ ಹೀಗಾಗಿ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತ ಹಣಮಂತ ಸಂಕನೂರು ದೂರು ನೀಡಿದ್ದರು.
ದೂರಿನ ಆಧಾರದ ಮೇರೆಗೆ ಪೊಲೀಸರು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ಸೋಮವಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರ ಮೀಸಲು ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡ ಬಿಜೆಪಿ ಮುಖಂಡ ಮಣಿಕಂಠ ನರೇಂದ್ರ ರಾಠೋಡ, ಚಿತ್ತಾಪುರ ಮತಕ್ಷೇತ್ರದ ಶಾಸಕರು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಏಕ ವಚನದಲ್ಲಿ ಸಂಭೋಧಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾರ್ವಜನಿಕವಾಗಿ ಅವಹೇಳನ ಮಾಡಿದ್ದಾರೆ ಹಾಗೂ ಪೊಲೀಸ್ ಇಲಾಖೆಯ ಘನತೆ, ಗೌರವಕ್ಕೆ ಧಕ್ಕೆಯುಂಟು ಮಾಡಿ ಸಾರ್ವಜನಿಕವಾಗಿ ಪೊಲೀಸರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವ ಕುತಂತ್ರ ಹುನ್ನಾರ ಮಾಡಿದ್ದಾರೆ, ಅಲ್ಲದೇ ಕೋಲಿ ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಅವರನ್ನು ಏಕವಚನದಲ್ಲಿ ಹಾಗೂ ಟೋಪಿ ಲಚ್ಚ್ಯಾ ಅಂತ ಸಂಭೋಧಿಸಿ ಸಾರ್ವಜನಿಕವಾಗಿ ಅವಹೇಳನ ಮಾಡಿದ್ದಾರೆ.
ಸಾರ್ವಜನಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ವ್ಯಕ್ತಿತ್ವ, ಘನತೆ, ಗೌರವ ಹೊಂದಿರುವವರನ್ನು ಅವಹೇಳನ ಮಾಡಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಆಶಾಂತಿಯ ವಾತಾವರಣ ಸೃಷ್ಟಿಸಿ ದ್ವೇಷಮಯ ಮತ್ತು ಕಲಹಗಳುಂಟಾಗುವಂತೆ ಹುನ್ನಾರ ಮಾಡಿದ್ದಾರೆ. ಅಲ್ಲದೇ ಪ್ರಕರಣವೊಂದರಲ್ಲಿ ಮಣಿಕಂಠ ಅವರಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯದ ನ್ಯಾಯಾಧೀಶರನ್ನೂ ಅವಹೇಳನ ಮಾಡುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಲ್ಲದೆ ನ್ಯಾಯಾಂಗದ ಬಗ್ಗೆ ಸಾರ್ವಜನಿಕರಲ್ಲಿ ಅಪನಂಬಿಕೆ ಮೂಡಿಸಿ ನ್ಯಾಯಾಡಳಿತದ ಮೇಲಿನ ಜನರ ವಿಶ್ವಾಸ ಭರವಸೆ ಇಲ್ಲದಂತೆ ಮಾಡುವ ಷಡ್ಯಂತರ ಮಾಡಿದ್ದಾರೆ ಹೀಗಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನಂತೆ ಮಣಿಕಂಠ ನರೇಂದ್ರ ರಾಠೋಡ ವಿರುದ್ಧ 59/2025 ಕಲಂ 352 353(2) BNS Act 2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.