ಚಿಂಚನಸೂರ ಗ್ರಾಮದಲ್ಲಿ ಅದ್ದೂರಿ ಅಂಬೇಡ್ಕರ್ ಜಯಂತ್ಯುತ್ಸವ ಆಚರಣೆ, ಅಂಬೇಡ್ಕರ್ ಅರಿವಿನ ಪ್ರಜ್ಞೆ: ನಿಜಗುಣ ಪ್ರಭು ಸ್ವಾಮೀಜಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಕೇವಲ ಮೀಸಲಾತಿ ಕೊಟ್ಟ ಮಹಾಪುರುಷ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಕೊಟ್ಟ ಮಹಾ ಜ್ಞಾನಿ ಎಂದು ಬೈಲೂರು ನಿಷ್ಕಲ ಮಂಟಪದ ಪೂಜ್ಯ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ನುಡಿದರು.
ಆಳಂದ ತಾಲೂಕಿನ ಚಿಂಚನಸೂರ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವ ಮೌಢ್ಯಮುಕ್ತ ಭಾರತಕ್ಕಾಗಿ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಶಾಂತಿ, ಸಮಾನತೆಗೆ ಶ್ರಮಿಸಿದ ಬುದ್ಧ, ಬಸವ, ಅಂಬೇಡ್ಕರ್ ಅವರು ಕೇವಲ ಜಯಂತಿಗಾಗಿ ಮಾತ್ರ ನೆನಪಾಗದೆ ಸದಾ ಪ್ರಜ್ಞೆಯಾಗಿ ನಮ್ಮೊಳಗೆ ನೆಲೆಸಿರಬೇಕು ಎಂದು ಹೇಳಿದರು.
ಡಾ. ಅಂಬೇಡ್ಕರ್ ಅವರು ಖಡ್ಗದ ಬದಲಿಗೆ ಜ್ಞಾನದ ಶಕ್ತಿ ಕೊಟ್ಟಿದ್ದಾರೆ. ಅದನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು. ಅವರ ಹೆಸರನ್ನು ಘರ್ಷಣೆ, ಕಾನೂನು, ಸಂದರ್ಭಕ್ಕೆ ತಕ್ಕಂತೆ ಬಳಸದೆ ಓದುವುದಕ್ಕಾಗಿ ಬಳಸಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷಣ, ಸಂಘಟನೆ, ಹೋರಾಟದ ಸೂತ್ರ ನೀಡಿದ ಡಾ.ಅಂಬೇಡ್ಕರ್ ಅವರು ಈ ನೆಲದ ಅಸ್ಮಿತೆ. ಈ ಅಸ್ಮಿತೆಯ ಉಳಿವಿಗಾಗಿ ನಾವೆಲ್ಲರ ಸದಾ ಜಾಗೃತರಾಗಿರಬೇಕು. ಮೂಢನಂಬಿಕೆ, ಅಜ್ಞಾನ, ಅಂಧಕಾರದಿಂದ ಹೊರ ಬಂದು ಸ್ವಾಭಿಮಾನದಿಂದ ಬದುಕು ಸಾಗಿಸಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರ ಡಾ.ಸುರೇಶ ಎಲ್.ಶರ್ಮಾ, ಪತ್ರಕರ್ತ- ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ, ಯುವ ಚಿಂತಕ ಡಾ. ಅನಿಲ್ ಟೆಂಗಳಿ ಮಾತನಾಡಿ, ಅಕ್ಷರ, ಅರಿವು, ಸ್ವಾಭಿಮಾನ ಕಲಿಸಿದ ಅಂಬೇಡ್ಕರ್ ಅವರು ನಮ್ಮೆಲ್ಲರ ಎಚ್ಚರಿಕೆಯ ಸಂಕೇತವಾಗಿದ್ದಾರೆ ಎಂದರು.
ಗ್ರಾ.ಪಂ. ಅಧ್ಯಕ್ಷೆ ವಿಮಲಾಬಾಯಿ ಎ.ರಾಮನ್, ಉಪಾಧ್ಯಕ್ಷ ಪ್ರಶಾಂತ ಇಂಡಿ, ಮಾಜಿ ಉಪಾಧ್ಯಕ್ಷ ಗೋರಖನಾಥ ಸಜ್ಜನ್, ಯುವ ಮುಖಂಡ ರಾಜು ಕಪನೂರ ಬಸವರಾಜ ಅಟ್ಟೂರ್, ಅಮರ ಏಕಲೂರೆ, ಸಿದ್ಧರಾಮ ನಿಂಬರ್ಗಾ, ಗಂಗಾರಾಮ ಲೇಂಗಟಿ, ಮಹೀಂದ್ರ ನಾಯ್ಡು, ಬಂಡಪ್ಪ ಲೇಂಗಟಿ, ಬಶೀರ್ ಜಮಾದಾರ, ವಿಜಯಕುಮಾರ ಸನ್ನಿಧಿ ಅಂಬಾರಾಯ ನಾಟೀಕಾರ್, ಶಿವಶರಣಪ್ಪ ಸಜ್ಜನ್, ಡಾ. ಪಂಡಿತ ಮದಗುಣಕಿ ಅತಿಥಿಗಳಾಗಿ ಆಗಮಿಸಿದ್ದರು. ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶಶಿಕಾಂತ ಹೊಳಕರ್ ಅಧ್ಯಕ್ಷತೆ ವಹಿಸಿದ್ದರು.
ಸೂರ್ಯಕಾಂತ ಘಂಟಿ, ಯಾಕೂಬ್ ಸಾಬ ಮೂಲಗೆ, ಯಶ್ವಂತ ಬಾಳಿ, ಹಿರಗಪ್ಪ ಪೂಜಾರಿ, ಪ್ರಕಾಶ ಉಪಾಸೆ, ಶಿವಶರಣಪ್ಪ ಮಾವಿನ, ನಾಗಣ್ಣ ಹೂಗಾರ, ಸಾಬಯ್ಯ ಗುತ್ತೇದಾರ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
ನಂತರ ಮಲ್ಲಿಕಾರ್ಜುನ ದೊಡ್ಡಮನಿ ನಿರ್ದೇಶನದ ಕಲಬುರಗಿ ರಂಗ ವೃಕ್ಷ ನಾಟಕ ನೃತ್ಯ ಸೇವಾ ಸಂಘ ಪ್ರಸ್ತುತಪಡಿಸಿದ ರಮಾಬಾಯಿ ಅಂಬೇಡ್ಕರ್ ನಾಟಕ ಪ್ರದರ್ಶನಗೊಂಡಿತು.
“ದೇಹದ ಗುಲಾಮಗಿರಿಗಿಂತ ಮಾನಸಿಕ ಗುಲಾಮಗಿರಿ ಬಹಳ ಅಪಾಯ. ಧರ್ಮ, ದೇವರು ಮನುಷ್ಯನನ್ನು ಆಳುತ್ತಿವೆ. ಈ ಭಯದಿಂದ ಹೊರ ಬರಬೇಕು. ಬುದ್ಧ ತನು, ಬಸವ ಪ್ರಾಣ, ಅಂಬೇಡ್ಕರ್ ನಮ್ಮ ಭಾವ ಆಗಬೇಕು”.-ಪೂಜ್ಯ ನಿಜಗುಣ ಪ್ರಭು ಸ್ವಾಮೀಜಿ ನಿಷ್ಕಲ ಮಂಟಪ, ಬೈಲೂರು.