ಚಿತ್ತಾಪುರ ಅಂಬಿಗರ ಚೌಡಯ್ಯ ಜಯಂತಿಯ ಬ್ಯಾನ‌ರ್ ಹರಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕೋಲಿ ಸಮಾಜದ ಮುಖಂಡರಿಂದ ಪ್ರತಿಭಟನೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಪ್ರಯುಕ್ತ ಶುಭಾಶಯ ಕೋರಿ ಅಳವಡಿಸಿದ್ದ ಬ್ಯಾನರ್ ಹರಿದು, ಕಿತ್ತೊಯ್ದ ಘಟನೆಯು ಮಂಗಳವಾರ ನಡೆದಿದೆ. ಘಟನೆಯನ್ನು ಖಂಡಿಸಿ ಕೋಲಿ ಸಮಾಜದ ಮುಖಂಡರು ಪಟ್ಟಣದ ತಹಶೀಲ್ ಕಚೇರಿಯ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.

ಕೋಲಿ ಸಮಾಜದ ಹಿರಿಯ ಮುಖಂಡ ಭೀಮಣ್ಣ ಸಾಲಿ ಅವರ ನೇತೃತ್ವದಲ್ಲಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ ಸೇರಿದಂತೆ ಅನೇಕ ಮುಖಂಡರು ತಹಶೀಲ್ದಾ‌ರ್ ಕಚೇರಿ ಆವರಣದಲ್ಲಿ ಬೆಳ್ಳಂಬೆಳಗ್ಗೆಯೇ ಧರಣಿಗೆ ಕುಳಿತು ಘೋಷಣೆ ಕೂಗಿ ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿದರು.

ನಿಜಶರಣ ಅಂಬಿಗರ ಚೌಡಯ್ಯ ಹಾಗೂ ಮಾತೆ ಮಾಣಿಕೇಶ್ವರಿ ಅವರ ಭಾವಚಿತ್ರ ಹರಿದು ಅವಮಾನಿಸಿರುವ ದುಷ್ಕೃತ್ಯ ಅಕ್ಷಮ್ಯ ಅಪರಾಧವಾಗಿದೆ. ಸಮಾಜದ ಘನತೆ, ಗೌರವಕ್ಕೆ ಧಕ್ಕೆಯುಂಟಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಭಾವಚಿತ್ರ ಇದ್ದ ಬ್ಯಾನರ್‌ ಹರಿದು ಒಯ್ದಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.

ಇದೇ ವೇಳೆ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ ವಿಧಾನ ಪರಿಷತ್‌ ಸದಸ್ಯ ತಿಪ್ಪಣಪ್ಪ ಕಮಕನೂರ ಅವರು ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರತಿಭಟನೆಗೆ ಸಾಥ್ ನೀಡಿದರು. ಬಳಿಕ ಮಾತನಾಡಿ, ಭಾವಚಿತ್ರ ಹರಿದು ಅವಮಾನಿಸಿದ್ದು ತಪ್ಪು, ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿರಲಿ ಅವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ, ಮುಖಂಡರಾದ ರಾಮಲಿಂಗ ಬಾನರ್, ಬಸವರಾಜ ಚಿನ್ನಮಳ್ಳಿ, ಹಣಮಂತ ಸಂಕನೂರ, ಅಣ್ಣಾರಾವ ಸಣ್ಣೂರಕರ್, ಮಲ್ಲಿಕಾರ್ಜುನ ಎಮ್ಮೆನೋರ್, ಭೀಮಣ್ಣ ಸೀಬಾ, ದೇವಿಂದ್ರ ಅರಣಕಲ್, ಸುರೇಶ್ ಬೆನಕನಳ್ಳಿ, ಗುಂಡು ಐನಾಪುರ, ಭೀಮರಾಯ ಹೊತಿನಮಡಿ, ಸಾಬಣ್ಣ ಡಿಗ್ಗಿ, ಕಾಶಪ್ಪ ಡೋಣಗಾಂವ,  ಕರಣಕುಮಾರ್ ಅಲ್ಲೂರು, ಅಂಬು ಹೊಳಿಕಟ್ಟಿ, ಸಾಬಣ್ಣ ಹೊಳಿಕಟ್ಟಿ, ಮಲ್ಲಿಕಾರ್ಜುನ ಮಾಲಗತ್ತಿ, ಪ್ರಭು ಹಲಕಟ್ಟಿ, ದತ್ತು ಮೈನಾಳಕರ್, ಶರಣು ಅರಣಕಲ್  ಸೇರಿದಂತೆ ಅನೇಕರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!