ಅಂತರ್ ಶಾಲಾ ವಾಲಿಬಾಲ್ ಪಂದ್ಯಾವಳಿ, ಕ್ರೀಡೆಯಿಂದ ಶಾರೀರಿಕ ಮತ್ತು ಮಾನಸಿಕ ವೃದ್ಧಿ ಸಾಧ್ಯ: ಪಾಸೋಡಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮಕ್ಕಳು ಬಾಲ್ಯದಿಂದಲೇ ಕ್ರೀಡೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು, ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಅವರ ಶಾರೀರಿಕ ಮತ್ತು ಮಾನಸಿಕ ವೃದ್ಧಿ ಸಾಧ್ಯವಾಗುತ್ತದೆ ಎಂದು ಕೇಂದ್ರಿಯ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಎಂ.ಎಸ್ ಪಾಸೋಡಿ ಹೇಳಿದರು.
ಪಟ್ಟಣದ ಶ್ರೀಮತಿ ಮಹಾದೇವಮ್ಮ ಬಿ.ಪಾಟೀಲ ಸಿಬಿಎಸ್ಇ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತರ್ ಶಾಲಾ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯದ ಜೊತೆಗೆ ಕ್ರೀಡಾಸಕ್ತಿ ಬೆಳೆಸಿಕೊಂಡು ಮುನ್ನೆಡೆಯಬೇಕು, ಕ್ರೀಡೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದರೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಇದೆ ಎಂದು ಹೇಳಿದರು.
ಯೋಗ ಶಿಕ್ಷಕ ನಾಗರಾಜ ದೇವದುರ್ಗ ಮಾತನಾಡಿ, ಮಕ್ಕಳು ಕ್ರೀಡೆಯನ್ನು ಒಂದು ವೃತ್ತಿಯಾಗಿ ಆರಂಭಿಸಬೇಕು ಮತ್ತು ಅದಕ್ಕಾಗಿ ಶಾಲಾ ಹಂತದಿಂದಲೇ ಪ್ರಯತ್ನ ನಡೆಸಬೇಕು ಎಂದು ತಿಳಿಸಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ಈ ಒಂದು ಪಂದ್ಯಾವಳಿಯ ಮೂಲಕ ನಮ್ಮ ಶಾಲೆಯ ಮಕ್ಕಳು ಇತರ ಶಾಲೆಯ ಮಕ್ಕಳೊಂದಿಗೆ ಸ್ಪರ್ಧಿಸಲು ಸಹಕಾರಿಯಾಗುತ್ತದೆ ಹಾಗೂ ಮುಂದೆ ಇಂತಹ ಹಲವಾರು ಪಂದ್ಯಾವಳಿಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು. ಈಗಿನ ಎಲ್ಲಾ ರಂಗಗಳಲ್ಲೂ ಸ್ಪರ್ಧೆ ಇದ್ದೇ ಇದೆ ಹೀಗಾಗಿ ಸ್ಪರ್ಧೆ ಮನೋಭಾವ ಮೂಡಿಸಲು ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಸೋಮಶೇಖರ್ ಕಲಶೆಟ್ಟಿ ಹಾಗೂ ಡಾ. ಜಯಶ್ರೀ ಎಸ್. ರೆಡ್ಡಿ ಅವರು ಉಪಸ್ಥಿತರಿದ್ದರು. ನಂತರ ವಿಜೇತ ತಂಡಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಪಂದ್ಯಾವಳಿಯಲ್ಲಿ ಡಿಎವಿ ವಿದ್ಯಾಮಂದಿರ ವಾಡಿ, ಡಿಎವಿ ವಿದ್ಯಾಮಂದಿರ ವಿದ್ಯಾಮಂದಿರ ಸತ್ರ ಸಾಲ ಹಾಗೂ ಶ್ರೀಮತಿ ಮಹದೇವಮ್ಮ ಬಿ. ಪಾಟೀಲ ಸಿಬಿಎಸ್ಇ ಶಾಲೆಗಳು ಸೇರಿ ಒಟ್ಟು ನಾಲ್ಕು ಶಾಲೆಗಳು ಭಾಗವಹಿಸಿದ್ದವು ಈ ಪಂದ್ಯಾವಳಿಯಲ್ಲಿ ಬಾಲಕರ ಹಾಗೂ ಬಾಲಕಿಯರ ತಂಡಗಳು ಭಾಗವಹಿಸಿದ್ದವು. ಇಲ್ಲಿ ನಾಲ್ಕು ಶಾಲೆಗಳ ಮಾರ್ಕ್ಸ್ ಫಾಸ್ಟ್ ಸೆಳೆಯಿತು. ಕೊನೆ ಕ್ಷಣದವರೆಗೂ ಪಂದ್ಯ ತುಂಬಾ ರೋಮಾಂಚನಕಾರಿಯಾಗಿತ್ತು
ಈ ಒಂದು ವಾಲಿಬಾಲ್ ಪಂದ್ಯಾವಳಿಯಲ್ಲಿ ಡಿಎವಿ ವಿದ್ಯಾಮಂದಿರ ವಾಡಿ ಶಾಲೆಯು ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರೆ ಶ್ರೀಮತಿ ಮಹಾದೇವಮ್ಮ ಬಿ. ಪಾಟೀಲ ಶಾಲೆಯು ದ್ವಿತೀಯ ಸ್ಥಾನ ಗಳಿಸಿತು ಹಾಗೆಯೇ ಬಾಲಕಿಯರ ವಿಭಾಗದಲ್ಲಿ ಡಿಎವಿ ವಿದ್ಯಾಮಂದಿರ ಛತ್ರಸಾಲ್ ಶಾಲೆಯು ಪ್ರಥಮ ಸ್ಥಾನ ಗಳಿಸಿದರೆ ಶ್ರೀಮತಿ ಮಹದೇವಮ್ಮ ಬಿ. ಪಾಟೀಲ ಶಾಲೆಯು ದ್ವಿತೀಯ ಸ್ಥಾನ ಗಳಿಸಿತು. ಕುಮಾರಿ ಐಶ್ವರ್ಯ ಸ್ವಾಗತಿಸಿದರು, ಕುಮಾರಿ ಸಾನ್ವಿ ನಿರೂಪಿಸಿದರು, ಹಾಗೂ ಕುಮಾರಿ ಬೃಂದಾ ವಂದಿಸಿದರು.