ಚಿತ್ತಾಪುರ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ 2025, ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ತರಬೇತಿ ಕಾರ್ಯಕ್ರಮ, ಪ್ರತಿಯೊಂದು ಮನೆಗೆ ಭೇಟಿ ನೀಡಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ: ಹಿರೇಮಠ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಕಾರ್ಯದ ಜವಾಬ್ದಾರಿ ಹೊತ್ತ ಶಿಕ್ಷಕರು ಪ್ರತಿಯೊಂದು ಮನೆ ಮನೆಗೆ ಖುದ್ದಾಗಿ ಭೇಟಿ ನೀಡಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗೌರವಾನ್ವಿತ ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನದಾಸ್ ಏಕೆ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ 2025 ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಮೀಕ್ಷೆ ಮೇ.5 ರಿಂದ 17 ವರೆಗೆ ನಡೆಯಲಿದ್ದು ಈ ಕುರಿತು ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ತರಬೇತಿ ನೀಡಲಾಗುತ್ತದೆ ಅದ್ದರಿಂದ ಶಿಕ್ಷಕರು ಚೆನ್ನಾಗಿ ತರಬೇತಿ ಪಡೆದುಕೊಂಡು ಯಾವುದೇ ಲೋಪ ದೋಷಗಳು ಆಗದಂತೆ ಎಚ್ಚರಿಕೆ ವಹಿಸಿ ಸಮೀಕ್ಷೆ ಕಾರ್ಯ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ 257 ಭೂತಗಳಿವೆ, ಈಗಾಗಲೇ ಪ್ರತಿಯೊಂದು ಭೂತಿನ ಮಾಹಿತಿ ಮೊಬೈಲ್ ಆಪ್ ನಲ್ಲಿ ಅಪ್ಲೋಡ್ ಮಾಡಲಾಗಿದೆ, ಹೀಗಾಗಿ ಗಣತಿದಾರರು ಮೊಬೈಲ್ ಆಪ್ ನಲ್ಲಿ ಪ್ರತಿ ಕುಟುಂಬದ ಮಾಹಿತಿ ಭರ್ತಿ ಮಾಡಬೇಕು ಎಂದು ಹೇಳಿದರು. ಪ್ರಸ್ತುತ ಬಿಸಿಲು ಹೆಚ್ಚಾಗಿರುವುದರಿಂದ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಣತಿ ಕಾರ್ಯ ಅಚ್ಚುಕಟ್ಟಾಗಿ ಮಾಡಬೇಕು ಎಂದು ತಿಳಿಸಿದರು. ಮೇ.5 ರಂದು ಸಮೀಕ್ಷೆ ಕಾರ್ಯ ಶುರು ಮಾಡಿ 17 ದೊಳಗೆ ಶೇ.100 ರಷ್ಟು ಪೂರ್ಣಗೊಳಿಸಬೇಕು ಎಂದು ಕರೆ ನೀಡಿದರು.
ಭೂಸ್ವಾಧೀನ ಅಧಿಕಾರಿ ಹಾಗೂ ನೋಡಲ್ ಅಧಿಕಾರಿ ರಾಮಚಂದ್ರ ಗಡದೆ ಮಾತನಾಡಿ, ಪರಿಶಿಷ್ಟ ಜಾತಿಗಳ ಸಮೀಕ್ಷೆ ಕಾರ್ಯ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಈ ಸಮೀಕ್ಷೆಯಿಂದ ಯಾವುದೇ ಕುಟುಂಬ ಹೊರಗುಳಿಯಬಾರದು ಮತ್ತು ವಂಚಿತ ಆಗದಂತೆ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಮಾತನಾಡಿ, ಶಿಕ್ಷಕರ ಮೇಲೆ ಅತ್ಯಂತ ಗುರುತರ ಜವಾಬ್ದಾರಿ ಇದೆ ಹೀಗಾಗಿ ಸಮೀಕ್ಷೆ ಕಾರ್ಯ ಎಲ್ಲೋ ಕುಳಿತುಕೊಂಡು ಸಮೀಕ್ಷೆ ಮಾಡದೇ ಮನೆ ಮನೆಗೆ ಭೇಟಿ ನೀಡಿ ನಿಖರವಾದ ಮಾಹಿತಿಯನ್ನು ಮೊಬೈಲ್ ಆಪ್ ನಲ್ಲಿ ಭರ್ತಿ ಮಾಡಬೇಕು ಎಂದು ಹೇಳಿದರು. ಹೆಚ್ಚು ಬಿಸಿಲು ಇರುವುದರಿಂದ ಆರೋಗ್ಯದ ಕಡೆ ಗಮನ ಹರಿಸಿ ಎಂದು ಕಿವಿಮಾತು ಹೇಳಿದರು.
ಸಮಾಜ ಕಲ್ಯಾಣಾಧಿಕಾರಿ ಚೇತನ್ ಗುರಿಕಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸಮೀಕ್ಷೆ ಕಾರ್ಯಕ್ಕೆ 257 ಗಣತಿದಾರರು, 27 ಮೇಲ್ವಿಚಾರಕರು ಹಾಗೂ 25 ಮೀಸಲು ಮೇಲ್ವಿಚಾರಕರನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಡಾ.ಶಿವಶರಣಪ್ಪ ಬಿರಾದಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ವಾಡಿ ಮುಖ್ಯಾಧಿಕಾರಿ ಫಕ್ರುದ್ದೀನ್ ಸಾಬ್, ಬಿಆರ್’ಸಿ ಮಲ್ಲಿಕಾರ್ಜುನ ಸೇಡಂ, ರವಿಕುಮಾರ್ ಸೇರಿದಂತೆ ಶಿಕ್ಷಕರು ಭಾಗವಹಿಸಿದ್ದರು. ಸಂತೋಷ ಶಿರನಾಳ ನಿರೂಪಿಸಿದರು. ಶಿವುಕುಮಾರ ಬಿರಾದಾರ ವಂದಿಸಿದರು.