ಚಿತ್ತಾಪುರ: ಕಳಪೆ ಮಟ್ಟದ ಕಾಮಗಾರಿ ಎನ್ನಲು ನೀವೇನು ಇಂಜಿನಿಯರಾ ಚಂದ್ರಶೇಖರ ಕಾಶಿ ಪ್ರಶ್ನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ರಾಯಪ್ಪ ಚಾಳಿಯಿಂದ ಅಂಬೇಡ್ಕರ್ ವೃತ್ತದವರೆಗೆ ನಡೆಯುತ್ತಿರುವ ರಸ್ತೆ ಕಾಮಗಾರಿ ಗುಣಮಟ್ಟ ಹಾಗೂ ನಿಯಮಬದ್ಧವಾಗಿ ನಡೆಯುತ್ತಿದೆ, ಕಳಪೆ ಮಟ್ಟದ ಕಾಮಗಾರಿ ಎನ್ನಲು ನೀವೇನು ಇಂಜಿನಿಯರಾ ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಚಂದ್ರಶೇಖರ ಕಾಶಿ ಪುರಸಭೆಯ ಬಿಜೆಪಿ ಸದಸ್ಯರಿಗೆ ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಪ್ಪ ಚಾಳಿಯಿಂದ ಅಂಬೇಡ್ಕರ್ ವೃತ್ತದವರೆಗೆ ರಸ್ತೆ ಕಾಮಗಾರಿ ಕಳಪೆ ಮಟ್ಟದಿಂದ ನಡೆಯುತ್ತಿದೆ ಎಂದು ಪುರಸಭೆ ಸದಸ್ಯರು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ. ಅಭಿವೃದ್ಧಿ ಕೆಲಸಗಳಿಗೆ ಅಡೆತಡೆ ಮತ್ತು ಆಕ್ಷೇಪಣೆ ಮಾಡುವುದೇ ಬಿಜೆಪಿ ಸದಸ್ಯರ ಚಾಳಿಯಾಗಿದೆ ಎಂದು ಟೀಕಿಸಿದ್ದಾರೆ.
ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಸಾಕಷ್ಟು ಅನುದಾನ ತಂದು ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಆದರೆ ಇದನ್ನು ಸಹಿಸಿಕೊಳ್ಳಕ್ಕಾಗದ ಬಿಜೆಪಿ ಮುಖಂಡರು ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ಹಾರಿಹಾಯ್ದರು.
ರಾಯಪ್ಪ ಚಾಳಿಯಿಂದ ಅಂಬೇಡ್ಕರ್ ವೃತ್ತದವರೆಗೆ ನಮ್ಮ ವಾರ್ಡ್ ಗೆ ಸಂಬಂಧಪಟ್ಟಿದೆ, ನಮ್ಮ ವಾರ್ಡಿನ ಚಿಂತೆ ನಿಮಗೇಕೆ ನಿಮ್ಮ ವಾರ್ಡ್ ಗಳಲ್ಲಿನ ಸಮಸ್ಯೆಗಳ ಕಡೆ ಹಾಗೂ ಅಭಿವೃದ್ಧಿ ಕಡೆ ಗಮನಹರಿಸಿ ಎಂದು ಬಿಜೆಪಿಯ ಪುರಸಭೆ ಸದಸ್ಯರಿಗೆ ತಿರುಗೇಟು ನೀಡಿದ್ದಾರೆ.
ರಸ್ತೆ ಕಾಮಗಾರಿ ಪ್ರಾರಂಭವಾಗುವ ಸಂದರ್ಭದಲ್ಲಿಯೇ ಲ್ಯಾಂಡ್ ಆರ್ಮಿ ಹಾಗೂ ಪುರಸಭೆ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದ್ದೇವೆ, ಎಸ್ಟಿಮೇಟ್ ಪ್ರಕಾರವೇ ಕಾಮಗಾರಿ ಗುಣಮಟ್ಟದಿಂದ ನಡೆಯುತ್ತಿದೆ. ಪರಿಶೀಲನೆ ಮಾಡಲು ಥರ್ಡ್ ಪಾರ್ಟಿ ಇರಲಿದೆ ಹೀಗಾಗಿ ವಿನಾಕಾರಣ ಅಭಿವೃದ್ಧಿ ಕೆಲಸಗಳಿಗೆ ಅಡೆತಡೆ ಮಾಡದೇ ಸಹಕರಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.