Oplus_0

ಚಿತ್ತಾಪುರ ಕಸಾಪ ವತಿಯಿಂದ ನುಡಿನಮನ ಕಾರ್ಯಕ್ರಮ | ಎಸ್.ಎಲ್.ಭೈರಪ್ಪ ಶ್ರೇಷ್ಠ ಸಾಹಿತಿ: ನಾಲವಾರ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪಟ್ಟಣದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ನಾಡಿನ ಖ್ಯಾತ ಸಾಹಿತಿ, ಪದ್ಮಭೂಷಣ ಪುರಸ್ಕೃತ ದಿ.ಡಾ. ಎಸ್.ಎಲ್. ಭೈರಪ್ಪ ಅವರ ನುಡಿನಮನ ಕಾರ್ಯಕ್ರಮ ನಡೆಯಿತು.

ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ನಾಲವಾರ ಮಾತನಾಡ, ಡಾ. ಭೈರಪ್ಪ ಅವರ ಬರಹಗಳು ಸತ್ಯ ಮತ್ತು ಸೌಂದರ್ಯದ ಪರವಾಗಿವೆ. ಅವರು ಜನರು ಏನು ಅನ್ನುತ್ತಾರೆ ಎಂದು ಯಾವತ್ತೂ ತಲೆಕೆಡಿಸಿಕೊಂಡವರಲ್ಲ, ಅವರ ಬದುಕು ಮತ್ತು ಬರಹ ಎರಡೂ ಒಂದೇ ಆಗಿದೆ. ಅವರ ಬರಹಗಳಲ್ಲಿ ಜೀವಂತಿಕೆ ಇದೆ. ಅವರು ತಮ್ಮ ಪುಸ್ತಕ ಮಾರಾಟದ ಹಣವನ್ನು ಸಮಾಜಮುಖಿ ಕಾರ್ಯಕ್ರಮಗಳಿಗೆ ವಿನಿಯೋಗಿಸಿದ್ದಾರೆ ಈಗಲೂ ಅವರದು ಜೀರೊ ಬ್ಯಾಲೆನ್ಸ್ ಅಕೌಂಟ್ ಇದೆ. ಹೀಗಾಗಿ ಇವರೊಬ್ಬ ಉದಾತ್ತ ವ್ಯಕ್ತಿತ್ವದ ಶ್ರೇಷ್ಠ ಸಾಹಿತಿ ಎಂದು ಸ್ಮರಿಸಿದರು.

ಲಿಂಗಪ್ಪ ಮಲ್ಕನ್ ಮಾತನಾಡಿ, ಡಾ. ಭೈರಪ್ಪ ಅವರು ನೈಜ ಬರಹಗಾರರು. ಅವರ ಕಾದಂಬರಿಗಳು ಹಲವು ಭಾಷೆಗಳಿಗೆ ಭಾಷಾಂತರಗೊಂಡಿವೆ. ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬೇಕಾಗಿತ್ತು, ಮರಣೋತ್ತರವಾದರೂ ಆ ಪ್ರಶಸ್ತಿ ಲಭಿಸಲಿ ಎಂದು ಆಶಿಸಿದರು.

ಕಸಾಪ ಗೌರವಾಧ್ಯಕ್ಷ ವೀರೇಂದ್ರ ಕೊಲ್ಲೂರ್ ಮಾತನಾಡಿ, ಡಾ. ಭೈರಪ್ಪ ಅವರ ಕಾದಂಬರಿಗಳು ಚಲನಚಿತ್ರಗಳಾಗಿ, ನಮ್ಮ ಬದುಕಿಗೆ ದಾರಿದೀಪ ಆಗಿವೆ. ಅವರ ಪುಸ್ತಕಗಳನ್ನು ಓದುವ ಮೂಲಕ ನಾವು ನಮ್ಮ ಬದುಕನ್ನು ಸುಂದರ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗ ಬಾಳಿ ಮಾತನಾಡಿ, ಡಾ. ಭೈರಪ್ಪ ಅವರು 25 ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದು ಶ್ರೇಷ್ಠ ಕಾದಂಬರಿಕಾರರು ಎಂದು ಗುರುತಿಸಿಕೊಂಡಿದ್ದರು. ಅವರು ತಮ್ಮ ಬರಹದ ಮೂಲಕ ಅತೀ ಹೆಚ್ಚು ಓದುಗರನ್ನು ಸೃಷ್ಟಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ನುಡಿನಮನ ಸಲ್ಲಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ವೀರಭದ್ರಪ್ಪ ಗುರುಮಠಕಲ್ ಮಾತನಾಡಿ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಡಾ. ಭೈರಪ್ಪ ಅವರು ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು. ಅವರ ಬರಹಗಳು ನಮಗೆಲ್ಲ ಮಾರ್ಗದರ್ಶಕವಾಗಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ಕಾಶಿನಾಥ ಗುತ್ತೇದಾರ, ವೀರಭದ್ರಪ್ಪ ಪಾಟೀಲ ಹುಮನಾಬಾದ, ಶ್ರೀನಿವಾಸ್ ಪೆಂದು, ಕೋಟೇಶ್ವರ ರೇಶ್ಮಿ, ಅನಿಲ್ ವಡ್ಡಡಗಿ, ಬಸವರಾಜ್ ಎಂಬತ್ನಾಳ, ನಾಗೇಂದ್ರಪ್ಪ ಹೊಟ್ಟಿ, ಸಿದ್ದು ಕುಂಬಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಗಣ್ಯರು ದಿ. ಡಾ. ಎಸ್.ಎಲ್. ಭೈರಪ್ಪ ಅವರಿಗೆ ಗೌರವ ಸೂಚಿಸಿ ಒಂದು ನಿಮಿಷ ಮೌನಾಚರಣೆ ಮಾಡಿದರು. ಕಾರ್ಯಕ್ರಮವನ್ನು ನರಸಪ್ಪ ಚಿನ್ನಾಕಟ್ಟಿ ಅವರು ನಿರೂಪಿಸಿದರು, ಶಿಕ್ಷಕ ಕಾಶಿರಾಯ ಕಲಾಲ್ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!