ದಿ. 20 ರಂದು ಚಿತ್ತಾಪುರ ಕೋಲಿ ಸಮಾಜದ ತಾಲೂಕು ಹಾಗೂ ನಗರಾಧ್ಯಕ್ಷರ ಆಯ್ಕೆ, ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕೋಲಿ ಸಮಾಜದ ತಾಲೂಕು ಘಟಕ ಮತ್ತು ನಗರ ಘಟಕದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇದೇ ಡಿಸೆಂಬರ್ 20 ರಂದು ಮಾಡಲಾಗುತ್ತಿದೆ. ಅಂದು ಚಿತ್ತಾಪುರ ಪಟ್ಟಣದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 11ಕ್ಕೆ ಸಮಾಜದ ಸಭೆ ಕರೆಯಲಾಗಿದೆ ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಭೀಮಣ್ಣ ಸಾಲಿ, ಸಮಾಜದ ಮಾಜಿ ತಾಲೂಕು ಅಧ್ಯಕ್ಷ ರಾಮಲಿಂಗ ಬಾನರ, ಮಾಜಿ ಗೌರವಾಧ್ಯಕ್ಷ ಹಣಮಂತ ಸಂಕನೂರು ಅವರು ತಿಳಿಸಿದ್ದಾರೆ.
ಸಮಾಜದ ತಾಲೂಕು ಘಟಕದ ಮತ್ತು ನಗರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದವರ ಪೈಕಿ ಯಾರು ಸಮರ್ಥರು ಎಂಬುದರ ಕುರಿತು ಕೂಲಂಕೂಷವಾಗಿ ಚರ್ಚೆ ಮಾಡಲಾಗುತ್ತದೆ. ಸಮಾಜದ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಕುರಿತು ಪರಾಮರ್ಶೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ವ್ಯಕ್ತಿಗಿಂತ ಸಮಾಜ ದೊಡ್ಡದ್ದು. ಸಮಾಜಕ್ಕಿಂತ ಯಾರೂ ದೊಡ್ಡವರಲ್ಲ. ಅಧ್ಯಕ್ಷರ ಆಯ್ಕೆ ವಿಯಷದಲ್ಲಿ ಯಾರೂ ಒತ್ತಡ ತರುವ, ವಿರೋಧ ವ್ಯಕ್ತ ಮಾಡುವುದನ್ನು ಸಹಿಸುವುದಿಲ್ಲ. ಸಮಾಜದ ಸಂಘಟನೆಗೆ ಒಗ್ಗಟ್ಟು ಮುಖ್ಯ. ಸಮಾಜಕ್ಕಿಂತ ತಮ್ಮ ಹಿತಾಸಕ್ತಿಯ ಮುಖ್ಯ ಎಂದು ನಡೆದುಕೊಂಡು ಅಸಹಕಾರ ಮನೋಭಾವನೆಯಿಂದ ನಡೆದುಕೊಳ್ಳಬಾರದು ಎಂದು ಅವರು ತಿಳಿಸಿದ್ದಾರೆ.
ಹುದ್ದೆಗಿಂತ ಮತ್ತು ಸಮಾಜ ಸೇವೆಗಿಂತ ದೊಡ್ಡದ್ದು ಯಾವುದೂ ಇಲ್ಲ. ಸೇವಾ ಮನೋಭಾವನೆಯಿಂದ ಮಾತ್ರ ಸಮಾಜದ ಸಂಘಟನೆ ಬಲಗೊಳ್ಳುತ್ತದೆ. ಸಾಮಾಜಿಕ ಕಳಕಳಿ, ಸಮಾಜದ ಹಿತಾಸಕ್ತಿ ಮುಖ್ಯವೇ ಹೊರತು ಯಾರದೆ ಸ್ವಯಂ ಸ್ಥಾನಮಾನ ಮುಖ್ಯವಲ್ಲ. ಆಕಾಂಕ್ಷಿಗಳು ಗುಂಪುಗಾರಿಕೆ ಮಾಡುವ ಮೂಲಕ ಸಮಾಜದ ಸಂಘಟನೆಗೆ ಧಕ್ಕೆ ತರುವ ಕೆಲಸ ಮಾಡಬಾರದು. ಸಮಾಜದ ಮುಖಂಡರು ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಅವರು ತಿಳಿಸಿದ್ದಾರೆ.
ತಾಲೂಕು ಘಟಕ ಮತ್ತು ನಗರ ಘಟಕದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದ ನಂತರ ನೂತನ ಅಧ್ಯಕ್ಷರ ನೇತೃತ್ವದಲ್ಲಿ ತಾಲೂಕು ಯುವ ಘಟಕ, ನಗರ ಯುವ ಘಟಕದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಜನರು ಸಭೆಯಲ್ಲಿ ಭಾಗವಹಿಸುವ ಮೂಲಕ ಸಮಾಜದ ಸಂಘಟನೆಗೆ ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.