ತಾಳಿ ಹರಿಯಲಿಲ್ಲ ಶೀಲ ಉಳಿಯಲಿಲ್ಲ ಉಚಿತ ನಾಟಕ ಪ್ರದರ್ಶನ
ಚಿತ್ತಾಪುರ ನಾಟಕಗಳ ತವರೂರು: ಬೆಣ್ಣೂರಕರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲಬುರ್ಗಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ನಾಟಕಗಳು ಪ್ರದರ್ಶನವಾಗುವ ಎಕೈಕ ತಾಲೂಕು ಚಿತ್ತಾಪುರ ತಾಲೂಕು ಎಂದರೆ ತಪ್ಪಾಗಲಾರದು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವದ ನಿಮಿತ್ತ ನಾಗಾವಿ ನಾಡು ನಾಟ್ಯ ಸಂಘದ ವತಿಯಿಂದ ಸಂಜೀವಿನಿ ದೇವಸ್ಥಾನದ ಹತ್ತಿರ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ತಾಳಿ ಹರಿಯಲಿಲ್ಲ ಶೀಲ ಉಳಿಯಲಿಲ್ಲ ಉಚಿತ ನಾಟಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಚಿತ್ತಾಪುರ ತಾಲೂಕು ನಾಟಕಗಳ ತವರೂರು ಆಗಿದೆ ಎಂದು ಬಣ್ಣಿಸಿದರು.
ಸಿನಿಮಾಗಳ ಭರಾಟೆಯಲ್ಲಿಯೂ ನಾಟಕಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ, ಈಗಲೂ ನಾಟಕಗಳು ನೋಡಲು ಜನ ಉತ್ಸುಕರಾಗಿದ್ದಾರೆ ರಂಗಭೂಮಿ ಕಲಾವಿದರಿಗೆ ಜನರು ಪ್ರೋತ್ಸಾಹ ಮತ್ತು ಸಹಕಾರ ನೀಡುತ್ತಿದ್ದಾರೆ ಹೀಗಾಗಿ ಈ ಭಾಗದಲ್ಲಿ ನಾಟಕಗಳು ಜೀವಂತವಾಗಿ ಉಳಿಯಲು ಸಾಧ್ಯ ಆಗಿದೆ ಎಂದು ಹೇಳಿದರು. ಡಾ.ರಾಜಕುಮಾರ, ಉಮಾಶ್ರೀ, ಸುಧೀರ್ ಸೇರಿದಂತೆ ಅನೇಕ ಚಿತ್ರನಟರು ರಂಗಭೂಮಿ ಮೂಲಕವೇ ಸಿನಿಮಾ ರಂಗದಲ್ಲಿ ಮಿಂಚಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಸಾನಿಧ್ಯ ವಹಿಸಿದ್ದ ಕಂಬಳೇಶ್ವರ ಶೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಚಿತ್ತಾಪುರ ತಾಲೂಕಿನಲ್ಲಿ ನಾಟಕಗಳು ಜೀವಂತವಾಗಿ ಉಳಿಯಬೇಕಾದರೆ ಇಲ್ಲಿನ ಕಲಾವಿದರ ಪಾತ್ರ ಪ್ರಮುಖವಾಗಿದೆ ಎಂದರು.
ಯಾವುದೇ ಪಾತ್ರ ಕೊಟ್ಟರೂ ಸಮರ್ಥವಾಗಿ ಅಭಿನಯಿಸುವ ಸಾಮರ್ಥ್ಯ ಇಲ್ಲಿನ ಕಲಾವಿದರಲ್ಲಿ ಇದೆ, ರಂಗಭೂಮಿಯೇ ತಮ್ಮ ಅಸ್ತಿತ್ವ ಮತ್ತು ಬದುಕು ಎಂದು ತಿಳಿದುಕೊಂಡು ನಿರತರಾಗಿದ್ದಾರೆ ಹೀಗಾಗಿ ಸರ್ಕಾರ ಇಂತಹ ಕಲಾವಿದರನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು. ಈ ಬಾರಿ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವದ ನಿಮಿತ್ತ ಜನರಿಗೆ ಮನರಂಜನೆ ನೀಡಲು ನಾಗಾವಿ ನಾಡು ನಾಟ್ಯ ಸಂಘದವರು ಉಚಿತ ನಾಟಕ ಪ್ರದರ್ಶನ ಹಮ್ಮಿಕೊಂಡಿರುವ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕವಿ ಶಂಕರಜೀ ಹುವಿನಹಿಪ್ಪರಗಿ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ವಿಶೇಷವಾಗಿ ಸನ್ಮಾನಿಸಲಾಯಿತು.
ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಮಂಡಲ ಪ್ರದಾನ ಕಾರ್ಯದರ್ಶಿ ನಾಗರಾಜ್ ಹೂಗಾರ, ಮುಖಂಡರಾದ ಬಸವರಾಜ ಸಂಕನೂರ, ಬಸವರಾಜ ಹೂಗಾರ, ನಾಗುಬಾಯಿ ಜಿತುರೆ, ಅಕ್ಕಮಹಾದೇವಿ, ಸಿದ್ದಣ್ಣಗೌಡ ಆರ್.ಡಿ ಪಾಟೀಲ, ಶ್ರೀಮಂತ ಗುತ್ತೇದಾರ, ಕರಣಕುಮಾರ್ ಅಲ್ಲೂರು, ಶಾಮರಾವ್ ಕೊರವಿ, ಕಾಶಿನಾಥ ಬಿರಾದಾರ, ಶಿವಣ್ಣ ಹಿಟ್ಟಿನ್, ದತ್ತಾತ್ರೇಯ ಬುಕ್ಕಾ, ರವಿ ವಿಟ್ಕರ್, ಭೀಮಾಶಂಕರ ಕೊಲಕುಂದಿ, ಶಂಭುಲಿಂಗ ವಿಶ್ವಕರ್ಮ, ಶಿವಕುಮಾರ ಪಾಟೀಲ, ಗೂಳಿ ಡಿಗ್ಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನಾಟ್ಯ ಸಂಘದ ಅಧ್ಯಕ್ಷ ಚಂದರ್ ಚವ್ಹಾಣ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು.