ಚಿತ್ತಾಪುರ ಎನ್ಎಸ್ಎಸ್ ವಾರ್ಷಿಕ ಶಿಬಿರ, ಪುಸ್ತಕಗಳು ಓದಿ ಜ್ಞಾನ ಸಂಪಾದನೆ ಮಾಡಿಕೊಳ್ಳಿ: ಹಾಗರಗಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಿ ಹೆಚ್ಚೆಚ್ಚು ಪುಸ್ತಕಗಳು ಓದಿ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು ಎಂದು ಮಹಾಗಾಂವ್ ಕ್ರಾಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಅಂಬಾರಾಯ ಹಾಗರಗಿ ಕಿವಿಮಾತು ಹೇಳಿದರು.
ಪಟ್ಟಣದ ಶ್ರೀ ರೇವಣಸಿದ್ದಪ್ಪ ಕಾಂತಾ ಸರಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಹಾಗೂ ಸಂಶೋಧನಾ ಕೇಂದ್ರ ಚಿತ್ತಾಪುರ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ 2024-25 ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಬಂಗಾರದ ಜೀವನ ಆಗಬೇಕಾದರೆ, ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಬೇಕಾದರೆ ಪರಿಶ್ರಮ ಪಡುವುದು ಅಗತ್ಯ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಾರು ದಡ್ಡರಲ್ಲ ಎಲ್ಲರೂ ಬುದ್ಧಿವಂತರಾಗಿದ್ದಾರೆ ಎಂದು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಕಲಬುರಗಿ ಸರ್ಕಾರಿ ಸ್ವಾಯತ್ತ ಕಾಲೇಜಿನ ಪ್ರಾಧ್ಯಾಪಕ ಡಾ.ಶ್ರೀಮಂತ ಹೋಳಕರ್ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿಷಯ ಕುರಿತು ಮಾತನಾಡಿ, ಮನೆಯಲ್ಲಿನ ಜಗುಲಿ ಮೇಲೆ ಯಾವ ದೇವರನ್ನೂ ಕೂಡಿಸಿ ಪೂಜೆ ಮಾಡಿ ಅಭ್ಯಂತರವಿಲ್ಲ ಆದರೆ ಹೃದಯದಲ್ಲಿ ಮಾತ್ರ ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಪೂಜಿಸಬೇಕಿದೆ ಎಂದು ಹೇಳಿದರು. ಅಂಬೇಡ್ಕರ್ ಅವರು ಗ್ರಂಥಾಲಯ ಹಾಗೂ ಪುಸ್ತಕಗಳನ್ನು ಹೆಚ್ಚು ಪ್ರೀತಿಸುತ್ತಿದ್ದರು. ಹೀಗಾಗಿ ವಿದ್ಯಾರ್ಥಿಗಳು ಅಂಬೇಡ್ಕರ್ ಅವರನ್ನು ತಮ್ಮ ಆದರ್ಶವಾಗಿ ಇಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಂವಿಧಾನ ಇಲ್ಲದ ಪೂರ್ವದಲ್ಲಿ ಮಹಿಳೆಯರಿಗೆ ಸ್ವತಂತ್ರ ಮತ್ತು ಸಮಾನತೆ ಇರಲಿಲ್ಲ ಮತ್ತು ಉಚಿತ ಹಾಗೂ ಸಾರ್ವತ್ರಿಕ ಶಿಕ್ಷಣ ಇರಲಿಲ್ಲ ಆದರೆ ಸಂವಿಧಾನ ಜಾರಿಯಾದ ನಂತರ ಎಲ್ಲರಿಗೂ ಶಿಕ್ಷಣ ಸಿಗುತ್ತಿದೆ ಹಾಗೂ ಮಹಿಳೆಯರಿಗೆ ಎಲ್ಲಾ ರಂಗಗಳಲ್ಲಿ ಸ್ವತಂತ್ರ ಮತ್ತು ಸಮಾನತೆ ಸಿಕ್ಕಿದೆ ಇದು ಸಂವಿಧಾನದ ತಾಕತ್ತು ಎಂದು ಹೇಳಿದರು. ಭಾರತದ ಸಂವಿಧಾನ ಜಾಗತ್ತಿನ ಬಲಿಷ್ಠ ಹಾಗೂ ಮಾದರಿ ಸಂವಿಧಾನ ಆಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೇ ಇರಲಿ ಎಲ್ಲರಿಗೂ ಒಂದೇ ಮತ ಇದೆ ಈ ಮತಶಕ್ತಿ ಮೇಲೆಯೇ ಚುನಾವಣೆ ನಡೆದು ನಮ್ಮನ್ನು ಆಳುವವರನ್ನು ನಾವೇ ಆಯ್ಕೆ ಮಾಡಿಕೊಳ್ಳುತ್ತೇವೆ ಎಂದರು.
ವಿದ್ಯಾರ್ಥಿಗಳು ಮೊದಲು ತಮ್ಮಲ್ಲಿನ ಕೀಳರಿಮೆ ತೆಗೆಯಬೇಕು ಅಂದಾಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಜೀವನದಲ್ಲಿ ಹೆಚ್ಚು ಪರಿಶ್ರಮ ಪಡಬೇಕು ಕಾರಣ ಪ್ರಸ್ತುತ ಎಲ್ಲಾ ರಂಗಗಳಲ್ಲಿ ಸ್ಪರ್ಧೆ ಹಾಗೂ ಪೈಪೋಟಿ ಇದೆ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಶಿವಶರಣಪ್ಪ ಬಿರಾದಾರ ಮಾತನಾಡಿ, ಚಿತ್ತಾಪುರ ನಾಗಾವಿ ಘಟಿಕಾಸ್ಥಾನದಿಂದಾಗಿ ಹಾಗೂ ಅಶೋಕ ಚಕ್ರವರ್ತಿ ಕುಟುಂಬ ಸದಸ್ಯರಿರುವ ಸ್ತೂಪದಿಂದಾಗಿ ಸನ್ನತಿ ಪ್ರಸಿದ್ಧ ಪಡೆದಿದೆ ಎಂದು ಹೇಳಿದರು. ಕರ್ನಾಟಕದಲ್ಲಿ 21 ಕ್ಕೂ ಅಧಿಕ ಅಭ್ಯರ್ಥಿಗಳು ಐಎಎಸ್ ಪಾಸಾಗಿದ್ದಾರೆ ಇದು ಹೆಮ್ಮೆಯ ವಿಷಯ, ಅಂತಹ ಪೂರಕ ವಾತಾವರಣ ಕಾಲೇಜಿನಲ್ಲಿ ನಿರ್ಮಿಸುವ ಪ್ರಯತ್ನ ಮಾಡುತ್ತೇನೆ ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ತಾಳ್ಮೆ ಸಂಯಮ ಮತ್ತು ಪರಿಶ್ರಮ ಪ್ರಮುಖ ಎಂದು ಹೇಳಿದರು.
ಎನ್ಎಸ್ಎಸ್ ಕಾರ್ಯಕ್ರಮದ ಅಧಿಕಾರಿಗಳಾದ ಪ್ರೊ.ಸಾವಿತ್ರಿ ದೇಸಾಯಿ, ಪ್ರೊ. ಅನೀಲಕುಮಾರ್ ಮಂದೋಲಕರ್, ಡಾ.ಕೃಷ್ಣ, ಲಕ್ಷ್ಮೀ ರೆಡ್ಡಿ, ಮರೆಪ್ಪ ಮೇತ್ರಿ, ಕೈಲಾಸಪತಿ ವಿಶ್ವಕರ್ಮ ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಕವಿತಾ ಸಂಗಡಿಗರು ಪ್ರಾರ್ಥಿಸಿದರು, ತಾಯಮ್ಮ ಸಂಗಡಿಗರು ಭಾವಗೀತೆ ಹಾಡಿದರು, ಸಂಗೀತಾ ಸ್ವಾಗತಿಸಿದರು, ಮೋಹನ್ ನಿರೂಪಿಸಿದರು.