ಚಿತ್ತಾಪುರ ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ ಬಗೆಹರಿಸಲು ಧನರಾಜ್ ಯಾದವ್ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಅಕ್ಟೋಬರ್ ತಿಂಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ನಲ್ಲಿ ಪಡಿತರ ಆಹಾರ ಧಾನ್ಯಗಳನ್ನು ನ್ಯಾಯಬೆಲೆ ಅಂಗಡಿ ಮುಖಾಂತರ ವಿತರಣೆ ಮಾಡುವುದಕ್ಕಾಗಿ ಸರ್ವರ್ ಸಮಸ್ಯೆ ತುಂಬಾ ಕಾಡುತ್ತಿದೆ, ಇದರಿಂದ ಪಡಿತರ ಫಲಾನುಭವಿಗಳಿಗೆ ತೀವ್ರ ತೊಂದರೆಯಾಗಿದೆ ಕೂಡಲೇ ಸರ್ವರ್ ಸಮಸ್ಯೆ ಬಗೆಹರಿಸಬೇಕು ಎಂದು ಪಡಿತರ ವಿತರಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಹಾಗೂ ತಾಲೂಕು ಅಧ್ಯಕ್ಷ ಧನರಾಜ್ ಯಾದವ್ ಆಗ್ರಹಿಸಿದ್ದಾರೆ.
ಪಟ್ಟಣದ ಎಪಿಎಂಸಿ ಯಾರ್ಡ್ ನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಮೊದಲು ಎನ್.ಐ.ಸಿ ಸರ್ವರ್ ಮುಖಾಂತರ ಪಡಿತರ ವಿತರಣೆ ಮಾಡಲಾಗುತ್ತಿತ್ತು. ಆದರೆ ಈಗ ಆಹಾರ ಇಲಾಖೆಯವರು ಹೊಸದಾಗಿ ಕೆ.ಎಸ್.ಡಿ.ಸಿ (ಕರ್ನಾಟಕ ಸ್ಟೇಟ್ ಡಾಟಾ ಸೆಂಟರ್) ಸರ್ವರ್ ಅಳವಡಿಸಲಾಗಿದ್ದರಿಂದ ಸರ್ವರ್ ಸಮಸ್ಯೆ ಉಂಟಾಗಿದೆ ಎಂದು ಹೇಳಿದರು.
ಅಕ್ಟೋಬರ್ ತಿಂಗಳ ಪಡಿತರ ವಿತರಣೆ ಮಾಡಲಾಗುತ್ತಿದ್ದು ದಿನಕ್ಕೆ ಒಂದು ಅಥವಾ ಎರಡು ಕಾರ್ಡುಗಳನ್ನ ವಿತರಣೆ ಮಾಡಲು ಸಾಧ್ಯವಾಗುತ್ತಿದೆ. ಇದರಿಂದ ಸಾರ್ವಜನಿಕರು ಪಡಿತರ ವಸ್ತುಗಳನ್ನು ಪಡೆಯಲು ನ್ಯಾಯ ಬೆಲೆ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ಹೆಣ್ಣು ಮಕ್ಕಳು, ಗಂಡು ಮಕ್ಕಳು ಹಾಗೂ ವೃದ್ಧರು ಬಿಸಿಲಿನಲ್ಲಿ ನಿಂತು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಮತ್ತು ಆಹಾರ ಇಲಾಖೆ ಅಧಿಕಾರಿಗಳಿಗೂ, ಸರ್ಕಾರಕ್ಕೂ ಹಿಡಿ ಶಾಪ ಹಾಕುತ್ತಿದ್ದಾರೆ. ಇದರಿಂದ ನ್ಯಾಯ ಬೆಲೆ ಅಂಗಡಿ ಮಾಲೀಕರು ತುಂಬಾ ಮನ ನೊಂದಿದ್ದಾರೆ ಮತ್ತು ಸದರಿ ಫೋಟೊಗಳನ್ನು ವಾಟ್ಸಪ್‌ನಲ್ಲಿ, ಪಡಿತರ ವಿತರಕರ ಗ್ರೂಪ್‌ನಲ್ಲಿ ಪ್ರತಿಯೊಂದು ನ್ಯಾಯ ಬೆಲೆ ಅಂಗಡಿಯಿಂದ ಶೇರ್ ಮಾಡುತ್ತಿದ್ದಾರೆ, ಸದರಿ ವಾಟ್ಸಪ್ ಗ್ರೂಪ್‌ನಲ್ಲಿ ಆಹಾರ ಇಲಾಖೆ ಅಧಿಕಾರಿಗಳಿದ್ದು ಮೂಕ ವಿಸ್ಮಯರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಒಂದು ವಾರದೊಳಗಾಗಿ ದೀಪಾವಳಿ ಹಬ್ಬ ಇರುವ ಕಾರಣ ಸಾರ್ವಜನಿಕರಿಗೆ ಪಡಿತರ ವಿತರಣೆ ಮಾಡಲು ಸಮಯ ಬಹಳ ಕಡಿಮೆ ಇರುವುದರಿಂದ ಅತೀ ಶೀಘ್ರದಲ್ಲಿ ಸರ್ವರ್ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ಕಲಬುರಗಿ ಜಿಲ್ಲಾಧಿಕಾರಿಗಳು, ಕಲಬುರಗಿ ಜಿಲ್ಲೆಯ ಉಪ ನಿರ್ದೇಶಕರುಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇಲ್ಲದಿದ್ದರೆ ಸಾರ್ವಜನಿಕರು ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ರೊಚಿಗೆದ್ದು ಪ್ರತಿಭಟನೆ ಮಾಡುವುದರಲ್ಲಿ ಯಾವುದೆ ಅನುಮಾನವಿಲ್ಲ ಮತ್ತು ನ್ಯಾಯಬೆಲೆ ಅಂಗಡಿ ಮಾಲಿಕರಿಗೆ ಸಮಯದ ಅಭಾವದಿಂದ ಶೇ.100 ಪಡಿತರ ವಿತರಣೆ ಮಾಡಲು ಸಾಧ್ಯವಾಗುವುದಿಲ್ಲ ಇದರಿಂದ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಂಭವವಿದೆ. ಆದ್ದರಿಂದ ಅತೀ ಶೀಘ್ರದಲ್ಲಿ ಸರ್ವರ್ ಸಮಸ್ಯೆ ಬಗೆಹರಿಸಿ ಸುಗಮವಾಗಿ ಪಡಿತರ ವಿತರಣೆಗೆ ಅನೂಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪಡಿತರ ವಿತರಕರಾದ ಅಬ್ದುಲ್ ರಹೇಮಾನ್, ನಾಗರಾಜ ಹೂಗಾರ, ಸಂಜೀವಕುಮಾರ ಕೊಟ್ರಕಿ, ನಾಗರಾಜ ಚಕಡಿ, ಮಲ್ಲಿಕಾರ್ಜುನ ಸೂಲಹಳ್ಳಿ, ಸಂತೋಷ ಸುಗಂಧಿ, ಶ್ರೀಧರ ಪೂಜಾರಿ ಇದ್ದರು.