ಪೌರ ನೌಕರರ ಸಂಘದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪುರಸಭೆ ಎದುರು ಪೌರ ನೌಕರರಿಂದ ಮುಷ್ಕರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಎಲ್ಲಾ ನಗರ ಸ್ಥಳಿಯ ಸಂಸ್ಥೆಯ ನೌಕರರನ್ನು ರಾಜ್ಯ ಸರ್ಕಾರ ನೌಕರರೆಂದು ಪರಿಗಣಿಸಿ ಹಾಗೂ ಜ್ಯೋತಿ ಸಂಜೀವಿನಿ, ಕೆ.ಜಿ.ಐ.ಡಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯವನ್ನು ನೀಡಬೇಕೆಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ನೇತೃತ್ವದಲ್ಲಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಪ್ರಯುಕ್ತ ಚಿತ್ತಾಪುರ ಶಾಖೆ ವತಿಯಿಂದ ಮಂಗಳವಾರ ಪುರಸಭೆ ಕಚೇರಿ ಎದುರು ಪೌರಕಾರ್ಮಿಕರು ಮುಷ್ಕರ ನಡೆಸಿದ್ದಾರೆ.
ಸಂಘದ ತಾಲೂಕು ಅಧ್ಯಕ್ಷ ಸಾಬಣ್ಣ ಸಿ.ಕಾಶಿ ಮಾತನಾಡಿ, ರಾಜ್ಯಾದ್ಯಂತ ಕರ್ತವ್ಯಕ್ಕೆ ಪೌರ ನೌಕರರು ಗೈರು, ಕಸ ಸಂಗ್ರಹ ವಿಲೇವಾರಿ, ಸ್ವಚ್ಛತೆ, ನೀರು ಪೂರೈಕೆ, ಒಳಚರಂಡಿ, ನಿರ್ವಹಣೆ ಸ್ಥಗಿತಗೊಳಿಸಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಂಘದ ಬೇಡಿಕೆಗಳನ್ನು ಈಡೇರಿಸುವವರಿಗೆ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ಸೂಚಿಸಿದಂತೆ ಚಿತ್ತಾಪುರ ಪುರಸಭೆಗೆ ಸಂಬಂಧ ಪಟ್ಟ ಕೆಲಸಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುತ್ತಿದೆ ಎಂದರು.
ರಾಜ್ಯ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು, ಚಾಲಕರು, ಲೋಡರ್ಸ, ಕ್ಲಿನರ್ಸ್, ಸ್ಯಾನಿಟರಿ ಸುಪರವೈಸರ್, ಯುಜಿಡಿ ಸಹಾಯಕರು ಸೇರಿದಂತೆ ವಿವಿಧ ವೃಂದದ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸುವುದು, ದಿನಗೂಲಿ ಕ್ಷೇಮಾಭಿವೃದ್ಧಿ, ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರನ್ನು ಖಾಯಂ ಮಾಡುವುದು, ಎಲ್ಲಾ ನೌಕರರಿಗೆ ಎಸ್.ಎಫ್.ಸಿ ಮುಕ್ತ ನಿಧಿಯಿಂದ ವೇತನ ನೀಡಬೇಕು ಎಂಬ ಬೇಡಿಕೆಗಳ ಮನವಿ ಪತ್ರವನ್ನು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಅವರಿಗೆ ಹಾಗೂ ತಹಸೀಲ್ದಾರ್ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವೆಂಕಟೇಶ್ ಜೈಗುರು, ಖಜಾಂಚಿ ಕ್ರಾಂತಿದೇವಿ ಸೇರಿದಂತೆ ಪೌರ ನೌಕರರ ಉಪಸ್ಥಿತರಿದ್ದರು.