Oplus_0

ಚಿತ್ತಾಪುರ ಪ್ರಜಾ ಸೌಧದಲ್ಲಿ ಅಧಿಕಾರಿಗಳ ಸಭೆ | ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಿ: ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಬೇಸಿಗೆ ಆರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ವಿಪರೀತ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು.

ಯಾವ ಯಾವ ಗ್ರಾಮಗಳಲ್ಲಿ ಪ್ರತಿವರ್ಷ ಕುಡಿಯುವ ನೀರಿಗೆ ತೊಂದರೆ ಉಂಟಾಗುತ್ತಿದೆಯೋ ಆ ಗ್ರಾಮಗಳಲ್ಲಿ ಶಾಶ್ವತ ಪರಿಹಾರಕ್ಕೆ ಬೇಕಾಗುವ ಸಿದ್ದತೆಗಳನ್ನು ಮಾಡಿಕೊಂಡು ನೀರಿನ ಭವಣೆ ತಪ್ಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಪ್ರಜಾಸೌಧದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ನಡೆಸಿ ಮಾತನಾಡಿದ ಅವರು, ಕ್ಷೇತ್ರದ ಯಾವ್ಯಾವ ಗ್ರಾಮಗಳಲ್ಲಿ ಪ್ರತಿವರ್ಷ ಕುಡಿಯುವ ನೀರಿಗೆ ತೊಂದರೆ ಉಂಟಾಗುತ್ತಿದೆಯೋ ಆ ಗ್ರಾಮಗಳಲ್ಲಿ ಶಾಶ್ವತ ಪರಿಹಾರಕ್ಕೆ ಬೇಕಾಗುವ ಸಿದ್ದತೆಗಳನ್ನು ಮಾಡಿಕೊಂಡು ನೀರಿನ ಭವಣೆ ತಪ್ಪಿಸಿ ಎಂದು ತಾಕೀತು ಮಾಡಿದರು.

ತಾಲೂಕಿಗೆ ಕುಡಿಯುವ ನೀರಿಗಾಗಿ ನಾನು ಪ್ರಥಮ ಆದ್ಯತೆಯನ್ನು ನೀಡಿ 3.68 ಕೋಟಿಗೂ ಹೆಚ್ಚಿನ ಅನುದಾನವನ್ನು ಒದಗಿಸಿದ್ದೇನೆ, ಆದರೂ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ನಿಗದಿತ ಸಮಯದಲ್ಲಿ ಕಾಮಗಾರಿಗಳು ಪೂರ್ಣಗೊಳ್ಳುತ್ತಿಲ್ಲ. ಕ್ಷೇತ್ರದ ಸನ್ನತಿ ಗ್ರಾಮದ ಜನರು ನದಿ ದಂಡೆಯ ಮೇಲಿದ್ದರೂ ಅವರಿಗೆ ಕುಡಿಯುವ ನೀರಿನ ತೊಂದರೆ ಇದೆ ಎಂದಾದರೆ ನಮ್ಮ ಅಧಿಕಾರಿಗಳ ಕಾರ್ಯವೈಖರಿ ಹೇಗಿದೆ ಎನ್ನುವುದು ಗೊತ್ತಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನದ ಕೊರತೆಯಿಲ್ಲ. ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನಿದ್ದೇನೆ, ನಮ್ಮವರೇ ಲೋಕಸಭೆ ಸದಸ್ಯರು, ರಾಜ್ಯಸಭೆ ಸದಸ್ಯರು ಇದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಅನುಮೊದನೆಗೆ ಇರುವ ಕಾಮಗಾರಿಗಳನ್ನು ಮಂಜೂರಿಮಾಡಿಸಿಕೊಂಡು ಬರಲು ಯಾವುದೇ ತೊಂದರೆ ಇಲ್ಲಾ ಆದರೂ ನಮ್ಮಲ್ಲಿನ ಅಧಿಕಾರಿಗಳಿಗೆ ಅಭಿವೃದ್ದಿ ಕೆಲಸ ಮಾಡುವ ಆಸಕ್ತಿಯೇ ಎದ್ದು ಕಾಣುತ್ತಿಲ್ಲಾ. ಕಾಮಗಾರಿ ಪ್ರಗತಿಯ ಕುರಿತು ಮಾಹಿತಿ ನೀಡುತ್ತಿಲ್ಲಾ ನಾವುಗಳೇ ಕೇಳಿ ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ, ಹೀಗಾದರೆ ಅಭಿವೃದ್ದಿ ಹಿನ್ನಡೆಯಾಗುವುದಿಲ್ಲವೇ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ತಾಲೂಕಿನಲ್ಲಿ ಅಧಿಕಾರಿಗಳು ಸಮಸ್ಯೆಗಳನ್ನು ಕೇಳಿಕೊಂಡು ಬರುವ ಸಾರ್ವಜನಿಕರೊಂದಿಗೆ ಅಸಭ್ಯವರ್ತಿಸಿ ಕೆಲಸ ಮಾಡಿಕೊಡಲು ಓಡಾಡಿಸುತ್ತಿರುವ ಕುರಿತು ದೂರುಗಳು ಹೆಚ್ಚಾಗಿ ಬರುತ್ತಿವೆ. ಇಂತಹ ದೂರುಗಳು ಮುಂದೆ ಬರದಂತೆ ಎಚ್ಚರಿಕೆ ವಹಿಸಿ ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಕೈಗೊಳ್ಳಲು ಶಿಕ್ಷಣ ಇಲಾಖೆ ಕೈಗೊಂಡಿರುವ ಕ್ರಮಗಳ ಮಾಹಿತಿ ಪಡೆದರು. ಅಕ್ರಮ ಮದ್ಯ ಮಾರಾಟ ಮತ್ತು ಮಧ್ಯರಾತ್ರಿಯವರೆಗೂ ದಾಭಾಗಳು ತೆರೆದಿರುವ ಕುರಿತು ದೂರುಗಳು ಬರುತ್ತಿದ್ದು ಇವುಗಳ ಕಡಿವಾಣಕ್ಕೆ ಅಬಕಾರಿ ಮತ್ತು ಪೊಲೀಸ್ ಇಲಾಖೆಗೆ ಸೂಚಿಸಿದರು.

ಅಧಿಕಾರಿಗಳ ಸಭೆಯಲ್ಲಿ, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ತೊಗರಿ ಮಂಡಳಿ ಅಧ್ಯಕ್ಷ ಮಹೀಮೂದ್ ಸಾಹೇಬ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಪಂ ಸಿಇಓ ಭಂವರಸಿಂಗ್ ಮೀನಾ, ಎಸ್‌ಪಿ ಅಡ್ಡೂರು ಶ್ರೀನಿವಾಸಲು, ತಹಸೀಲ್ದಾರ್ ನಾಗಯ್ಯ ಹಿರೇಮಠ, ಡಿವೈಎಸ್ಪಿ ಶಂಕರಗೌಡ ಪಾಟೀಲ, ತಾಪಂ ಇಓ ಮಹ್ಮದ್ ಅಕ್ರಂ ಪಾಷಾ ಸೇರಿದಂತೆ ಜಿಲ್ಲೆಯ ಹಾಗೂ ತಾಲೂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.

“ಕ್ಷೇತ್ರದ ಶಾಸಕರಾಗಿರುವ ಪ್ರಿಯಾಂಕ್ ಖರ್ಗೆರವರು ಅಭಿವೃದ್ದಿಯ ಚಿಂತಕರಾಗಿದ್ದು ಸಾವಿರಾರು ಕೋಟಿ ಅನುದಾನವನ್ನು ತಂದು ಮಾದರಿ ಚಿತ್ತಾಪುರ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಇದಕ್ಕೆ ಅಧಿಕಾರಿಗಳ ಸಹಕಾರ ಅಗತ್ಯವಾಗಿದೆ ಅವರಿಗೆ ಸಹಕಾರ ನೀಡಿದಲ್ಲಿ ಇನ್ನು ಹೆಚ್ಚಿನ ಅನುದಾನ ತಂದು ಅಭಿವೃದ್ದಿ ಮಾಡಲು ಸಾಧ್ಯವಾಗುತ್ತದೆ”. -ತಿಪ್ಪಣ್ಣಪ್ಪ ಕಮಕನೂರ, ವಿಧಾನ ಪರಿಷತ್ ಸದಸ್ಯರು.

Spread the love

Leave a Reply

Your email address will not be published. Required fields are marked *

error: Content is protected !!