ಚಿತ್ತಾಪುರ ಪ್ರತಿಭಾ ಕಾರಂಜಿಯ ವಿಜೇತ ಮಕ್ಕಳಿಗೆ ಪ್ರಮಾಣಪತ್ರ ನೀಡದ ಅಧಿಕಾರಿಗಳು, ಪಾಲಕರು ಬೇಸರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣ ಸೇರಿದಂತೆ ತಾಲೂಕಿನ ಕೆಲವು ಕಡೆ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಕಾಟಾಚಾರಕ್ಕೆ ಎಂಬಂತೆ ನಡೆದಿವೆ ಎಂಬ ಆರೋಪಗಳು ಪಾಲಕ ಪೋಷಕರಿಂದ ಕೇಳಿಬಂದಿವೆ.
ಮಕ್ಕಳಲ್ಲಿನ ಪ್ರತಿಭೆಗಳನ್ನು ಹೊರತರುವ ಉದ್ದೇಶದಿಂದ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ, ಆದರೆ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಆಯೋಜಕರು ಉಸ್ತುವಾರಿಗಳು ಮಾತ್ರ ತಾರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಮುಗಿಸಿದ್ದಾರೆ. ಕಾರ್ಯಕ್ರಮ ದಿನದಂದೇ ವಿಜೇತ ಮಕ್ಕಳಿಗೆ ಪ್ರಮಾಣಪತ್ರ ನೀಡಿಲ್ಲ ನೀಡಿದರೂ ಕೇವಲ ಫೋಟೋ ಶೂಟ್ ಗಾಗಿ ಐದಾರು ಮಕ್ಕಳಿಗೆ ನೀಡಿರುವುದು ಕಂಡುಬಂದಿದೆ, ಉಳಿದ ಮಕ್ಕಳಿಗೆ ಪ್ರಮಾಣಪತ್ರ ನೀಡಿದೇ ಇರುವುದಕ್ಕೆ ಪಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.
ವಿಜೇತ ಮಕ್ಕಳ ಪ್ರಮಾಣಪತ್ರಗಳು ನಾಳೆ ಎಲ್ಲ ಶಾಲೆಗಳಿಗೆ ತಲುಪಿಸುವುದಾಗಿ ಹೇಳಿ 15 ದಿನಗಳು ಕಳೆದರೂ ಇಲ್ಲಿವರೆಗೆ ಪ್ರಮಾಣಪತ್ರಗಳು ತಲುಪಿಸಿಲ್ಲ ಇದೇನಾ ಶಿಕ್ಷಣ ಅಧಿಕಾರಿಗಳಲ್ಲಿನ ಕರ್ತವ್ಯ ಬದ್ಧತೆ ಎಂಬ ಪ್ರಶ್ನೆ ಉದ್ಭವಿಸಿದೆ.
ಕಾರ್ಯಕ್ರಮದ ದಿನದಂದೆ ವೇದಿಕೆಯ ಮೇಲೆ ಅತಿಥಿಗಳ ಸಮ್ಮುಖದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣಪತ್ರ ನೀಡಿದರೆ ಆ ಕ್ಷಣ ಮಕ್ಕಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಅದನ್ನು ಬಿಟ್ಟು ಎಲ್ಲ ಪ್ರಮಾಣ ಪತ್ರಗಳನ್ನು ಶಾಲೆಗಳಿಗೆ ಕಳುಹಿಸುವುದಾಗಿ ಹೇಳುತ್ತಾರಲ್ಲ ಇದೆಂಥ ಅಶಿಸ್ತು ಮತ್ತು ಬೇಜವಾಬ್ದಾರಿಯಾಗಿದೆ, ಇದಕ್ಕೆ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳೇ ಉತ್ತರ ನೀಡಬೇಕಿದೆ.
“ಪ್ರತಿಭಾ ಕಾರಂಜಿ ಮಕ್ಕಳಲ್ಲಿ ಅಡಗಿರುವ ವಿಭಿನ್ನ ಪ್ರತಿಭೆಗಳನ್ನು ಅನಾವರಣಗೊಳಿಸುವದು ಹಾಗೂ ಪ್ರೋತ್ಸಾಹ ನೀಡಿ ಬೆಳೆಸುವದು. ಅಂದೇ ವಿಜೇತ ಮಕ್ಕಳಿಗೆ ಪ್ರಮಾಣಪತ್ರ ನೀಡಬೇಕು, ಯಾವ ಕ್ಲಸ್ಟರ್ ಹಂತದಲ್ಲಿ ನೀಡಿಲ್ಲ ಪರಿಶೀಲನೆ ಮಾಡಿ ತಕ್ಷಣವೇ ಕ್ರಮವಹಿಸಿ ಮುಂದೆ ಮರುಕಳಿಸದಂತೆ ಕ್ರಮವಹಿಸಲಾಗುವುದು”.- ಶಶಿಧರ ಬಿರಾದಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಿತ್ತಾಪುರ.