ಚಿತ್ತಾಪುರ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯ ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಲು ಕಾಂಗ್ರೆಸ್ ನಿರ್ಧಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯ ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಲು ಕಾಂಗ್ರೆಸ್ ಪಕ್ಷ ನಿರ್ಧಾರ ಕೈಗೊಂಡಿದೆ ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸ್ಥಳೀಯ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ ಮೀಸಲಾತಿ ಬರುವುದಕ್ಕೆ ಒಂದು ವರ್ಷ ಆಯಿತು, ಈಗ ಮೀಸಲಾತಿ ಬಂದು ಆರು ತಿಂಗಳಾಯಿತು ಇದಕ್ಕೆ ಪುರಸಭೆ ಸದಸ್ಯ ವಿನೋದ ಗುತ್ತೇದಾರ ಅವರು ಕೋರ್ಟ್ ತಡೆಯಾಜ್ಞೆ ತಂದಿದ್ದರು. ಕೋರ್ಟ್ ಸ್ಟೇ ಬಂದು ಐದು ತಿಂಗಳಾಯಿತು ಆದರೂ ಯಾವುದೇ ಇತ್ಯರ್ಥ ಆಗದೆ ಇರುವುದರಿಂದ ಪಟ್ಟಣದ ಅಭಿವೃದ್ಧಿ ಕುಂಠಿತಗೊಂಡಿದೆ ಹೀಗಾಗಿ ಕೋರ್ಟ್ ಸ್ಟೇ ತೆರವುಗೊಳಿಸಲು ಪಕ್ಷದ ಮುಖಂಡರು ಸದಸ್ಯ ವಿನೋದ ಗುತ್ತೇದಾರ ಅವರಿಗೆ ಕೋರಿಕೊಂಡಿದ್ದು, ಅವರು ತಡೆಯಾಜ್ಞೆ ವಾಪಸ್ ಪಡೆಯಲು ಒಪ್ಪಿದ್ದಾರೆ ಎಂದು ಹೇಳಿದರು. ಮೊದಲಿನ ಮೀಸಲಾತಿಯಂತೆ ಮೂರು ಜನ ಆಕಾಂಕ್ಷಿಗಳಲ್ಲಿ ಅಧಿಕಾರ ಯಾರಿಗಾದರೂ ಸಿಗಲಿ ಸ್ಟೇ ತೆರವುಗೊಳಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ಇರುವುದರಿಂದ ಕೋರ್ಟ್ ಸ್ಟೇ ತೆರವುಗೊಳಿಸಲು ಸದಸ್ಯ ವಿನೋದ ಗುತ್ತೇದಾರ ಅವರ ಮನವೋಲಿಸಲಾಗಿದೆ. ಅವರು ಕೂಡ ಕೋರ್ಟ್ ತಡೆಯಾಜ್ಞೆ ಹಿಂಪಡೆಯಲು ಸಮ್ಮತಿ ಸೂಚಿಸಿದ್ದಾರೆ ಹೀಗಾಗಿ ಅವರಿಗೆ ಪಕ್ಷದ ಪರವಾಗಿ ಧನ್ಯವಾದಗಳು ಸಲ್ಲಿಸಿದರು.
ಈಗಾಗಲೇ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಪ.ಜಾ.ಮಹಿಳೆ ಘೋಷಣೆಯಾದಂತೆ ಯಥಾಪ್ರಕಾರ ಚುನಾವಣೆ ನಡೆಯಲು ಅನುವು ಮಾಡಿಕೊಡುವುದು ಅವಶ್ಯಕವಾಗಿದೆ ಎಂದರು. ಎಲ್ಲಕ್ಕಿಂತ ಪಕ್ಷ ದೊಡ್ಡದು ಪಕ್ಷಕ್ಕಿಂತ ವ್ಯಕ್ತಿ ದೊಡ್ಡವರಲ್ಲ ಈ ನಿಟ್ಟಿನಲ್ಲಿ ವಿನೋದ ಗುತ್ತೇದಾರ ಅವರು ತ್ಯಾಗ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ, ಸದಸ್ಯ ವಿನೋದ ಗುತ್ತೇದಾರ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್, ಯುವ ಅಧ್ಯಕ್ಷ ಸಂಜಯ ಬುಳಕರ್, ಮುಖಂಡರಾದ ಬಸವರಾಜ ಚಿನ್ನಮಳ್ಳಿ, ಮಹಾಂತೇಶ್ ಬೊಮ್ಮನಳ್ಳಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ನಾಗರೆಡ್ಡಿ ಗೋಪಸೇನ್, ಓಂಕಾರೇಶ್ವರ ರೇಷ್ಮೀ, ನಾಗು ಕಲ್ಲಕ್, ಭೀಮಣ್ಣ ಹೊತಿನಮಡಿ ಸೇರಿದಂತೆ ಇತರರು ಇದ್ದರು.