Oplus_0

ಚಿತ್ತಾಪುರ ಪುರಸಭೆ ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆಗಿದ್ದ ತಡೆಯಾಜ್ಞೆ ಹೈಕೋರ್ಟ್‌ ತೆರವು, ಆಕಾಂಕ್ಷಿಗಳಲ್ಲಿ ಹೆಚ್ಚಿದ ಪೈಪೋಟಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಚಿತ್ತಾಪುರ ಪುರಸಭೆ ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆಗಿದ್ದ ತಡೆಯಾಜ್ಞೆ ಹೈಕೋರ್ಟ್‌ ತೆರವುಗೊಳಿಸಿದ್ದರಿಂದ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ಆಕಾಂಕ್ಷಿಗಳಲ್ಲಿ ಪೈಪೋಟಿ ಹೆಚ್ಚಾಗಿದೆ.

ಕಳೆದ 5 ಆಗಸ್ಟ್ 2024 ರಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿಗಳು ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ಪ್ರಕಟ ಮಾಡಿ ಆದೇಶ ಹೊರಡಿಸಿತ್ತು. ಪುರಸಭೆಯ ಅಧ್ಯಕ್ಷ ಸ್ಥಾನ ಪ.ಜಾ (ಮಹಿಳೆ) ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಬಿಸಿಎ (ಮಹಿಳೆ)ಗೆ ಪ್ರಕಟವಾಗಿತ್ತು. ಪರಿಶಿಷ್ಟ ಜಾತಿ ಮಹಿಳೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನದ ವಿಚಾರವಾಗಿ ಪುರಸಭೆಯ ಸದಸ್ಯ ವಿನೋದ ಗುತ್ತೇದಾರ ನ್ಯಾಯಾಲಯದ ಮೊರೆ ಹೋಗಿದ್ದರಿಂದ ನ್ಯಾಯಾಲಯವು ಈ ಚುನಾವಣೆಗೆ ತಡೆಯಾಜ್ಞೆ ನೀಡಿತ್ತು. ಆದರೆ ಈಗ 6 ತಿಂಗಳ ಗತಿಸಿದ ನಂತರ ಕಲಬುರ್ಗಿ ಹೈಕೋರ್ಟ್ ತಡೆಯಾಜ್ಞೆ ತೆರುವುಗೊಳಿಸಿದೆ.

ಈ ನಡುವೆ ಕೋರ್ಟ್ ತಡೆಯಾಜ್ಞೆ ತಂದಿದ್ದ ಪುರಸಭೆ ಸದಸ್ಯ ವಿನೋದ ಗುತ್ತೇದಾರ ಅವರಿಗೆ ಇತ್ತೀಚೆಗಷ್ಟೇ ಕಾಂಗ್ರೆಸ್ ಮುಖಂಡರು ಮನವೊಲಿಸಿ ತಡೆಯಾಜ್ಞೆ ಹಿಂಪಡೆಯಲು ಒತ್ತಡ ಹೇರಿದಾಗ ಅದಕ್ಕೆ ವಿನೋದ ಗುತ್ತೇದಾರ ಸಮ್ಮತಿಸಿದ್ದರು.

ಹೀಗಾಗಿ ಈ ಮೊದಲು ಪ್ರಕಟವಾದ ಪುರಸಭೆಯ ಅಧ್ಯಕ್ಷ ಸ್ಥಾನ ಪ.ಜಾ (ಮಹಿಳೆ) ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಬಿಸಿಎ (ಮಹಿಳೆ) ಮೀಸಲಾತಿ ಪ್ರಕಾರವೇ ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನಕ್ಕೆ ಬೇಬಿ ಸುಭಾಷ್ ಜಾಧವ, ಅನ್ನಪೂರ್ಣ ನಾಗಪ್ಪ ಕಲ್ಲಕ್ ಹಾಗೂ ಕಾಶಿಬಾಯಿ ಮರೆಪ್ಪ ಬೆಣ್ಣೂರಕರ್ ಅವರು ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಶೀಲಾ ಕಾಶಿ, ಶೈನಾಜಬೇಗಂ ಯಕ್ಬಾಲ್, ರಫಾತ್ ಫರ್ದನಾ, ಖಾಜಾಬೀ ಗುಲಾಮ್ ರಸೂಲ್ ಅವರ ಹೆಸರುಗಳು ಕೇಳಿಬರುತ್ತಿವೆ.

ಪುರಸಭೆ ಇತಿಹಾಸದಲ್ಲಿ ಬಂಜಾರ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲ ಹೀಗಾಗಿ ಈ ಬಾರಿ ಬಂಜಾರ ಸಮಾಜದ ಬೇಬಿ ಸುಭಾಷ್ ಜಾಧವ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಸಮಾಜದ ಮುಖಂಡರು ಈಗಾಗಲೇ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಒತ್ತಡ ಹೇರಿದ್ದಾರೆ.

ಪುರಸಭೆಯಲ್ಲಿ ಒಟ್ಟು 23 ಸದಸ್ಯರ ಪೈಕಿ ಕಾಂಗ್ರೆಸ್ 18, ಬಿಜೆಪಿ 5 ಸ್ಥಾನಗಳ ಬಲಾಬಲ ಇದೆ. ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತವಿದೆ ಹೀಗಾಗಿ ಪುರಸಭೆ ಆಡಳಿತದ ಗದ್ದುಗೆ ಏರಲು ಆಕಾಂಕ್ಷಿಗಳು ಹರಸಾಹಸ ಪಡುತ್ತಿದ್ದಾರೆ‌. ಈಗಾಗಲೇ ತಮ್ಮ ತಮ್ಮ ರಾಜಕೀಯ ಗಾಢ ಫಾದರಗಳ ದುಂಬಾಲು ಬಿದ್ದು ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಅಲ್ಲದೇ ಅವರವರ ಬೆಂಬಲಿಗರ ಹಾಗೂ ಆಯಾ ಸಮಾಜಗಳ ಮುಖಂಡರೊಂದಿಗೆ ಬೆಂಗಳೂರಿಗೆ ಹೋಗಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಭೇಟಿ ಮಾಡಿ ಮನವಿ ಮಾಡಿದ್ದಾರೆ. ಆದರೂ ಅಂತಿಮವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕೃಪಾಕಟಾಕ್ಷ ಯಾರ ಮೇಲೆ ಆಗಲಿದೆ ಎಂಬುದು ಕಾದುನೋಡಬೇಕಿದೆ.

“ಚಿತ್ತಾಪುರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ ಇರುವುದರಿಂದ ಚುನಾವಣೆ ನೆನೆಗುದಿಯಲ್ಲಿತ್ತು, ಈಗ ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದೆ, ಜಿಲ್ಲಾಧಿಕಾರಿಗಳಿಂದ ತಹಸೀಲ್ದಾರ್ ಅವರಿಗೆ ಸೂಚನೆ ಬರಲಿದ್ದು ಅತಿ ಶೀಘ್ರದಲ್ಲಿ ಚುನಾವಣೆ ನಡೆಯಲಿದೆ”.-ಮನೋಜಕುಮಾರ ಗುರಿಕಾರ ಪುರಸಭೆ ಮುಖ್ಯಾಧಿಕಾರಿಗಳು ಚಿತ್ತಾಪುರ.

Spread the love

Leave a Reply

Your email address will not be published. Required fields are marked *

error: Content is protected !!