ಚಿತ್ತಾಪುರ ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ, ಆಕಾಂಕ್ಷಿಗಳಲ್ಲಿ ನಿರಾಶೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲಬುರ್ಗಿ ಉಚ್ಚ ನ್ಯಾಯಾಲಯ ಪೀಠದಿಂದ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಿದ್ದರಿಂದ ಇಲ್ಲಿಯ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆ ಮುಂದೂಡಿಕೆಯಾಗಿದೆ.
ಈಗಾಗಲೇ ಮೊದಲ ಅವಧಿ ಮುಗಿದು 15 ತಿಂಗಳಾಗಿದೆ ಈಗ ಕಳೆದ ಆಗಸ್ಟ್ 5 ರಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿಗಳು ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ಪ್ರಕಟ ಮಾಡಿ ಆದೇಶ ಹೊರಡಿಸಿತ್ತು. ಆಗ ಆಕಾಂಕ್ಷಿಗಳು ಬಹಳ ಉತ್ಸಾಹದಿಂದ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಇನ್ನೇನು ಅಧಿಕಾರದ ಗದ್ದುಗೆ ಹಿಡಿಯಬೇಕು ಎನ್ನುವಷ್ಟರಲ್ಲಿ ಏಕಾಏಕಿ ಕೋರ್ಟ್ ತಡೆಯಾಜ್ಞೆ ನೀಡಿದೆ ಇದರಿಂದ ಆಕಾಂಕ್ಷಿಗಳಲ್ಲಿ ನಿರಾಶೆಯನ್ನುಂಟು ಮಾಡಿದೆ ಹೀಗಾಗಿ ಅಧಿಕಾರದ ಗದ್ದುಗೆ ಹಿಡಿಯಲು ಆಕಾಂಕ್ಷಿ ಅಭ್ಯರ್ಥಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಸರ್ಕಾರ ಇತ್ತೀಚೆಗೆ ಹೊರಡಿಸಿದ್ದ ಮೀಸಲಾತಿ ಪಟ್ಟಿಯಲ್ಲಿ ಪುರಸಭೆಯ ಅಧ್ಯಕ್ಷ ಸ್ಥಾನ ಪ.ಜಾ (ಮಹಿಳೆ) ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಬಿಸಿಎ (ಮಹಿಳೆ)ಗೆ ಸಿಕ್ಕಿತ್ತು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಅವರನ್ನು ನೇಮಿಸಿ ಕಳೆದ ಆಗಸ್ಟ್ 16 ರಂದು ಜಿಲ್ಲಾಧಿಕಾರಿ ಆದೇಶ ಕೂಡ ಹೊರಡಿಸಿದ್ದರು.
ಪರಿಶಿಷ್ಟ ಜಾತಿ ಮಹಿಳೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನದ ವಿಚಾರವಾಗಿ ಪುರಸಭೆಯ ಸದಸ್ಯ ವಿನೋದ ಗುತ್ತೇದಾರ ನ್ಯಾಯಾಲಯದ ಮೊರೆ ಹೋಗಿದ್ದರಿಂದ ನ್ಯಾಯಾಲಯವು ಈ ಚುನಾವಣೆಗೆ ತಡೆಯಾಜ್ಞೆ ನೀಡಿ, ವಿಚಾರಣೆಯನ್ನು ಸೆ.24ಕ್ಕೆ ಮುಂದೂಡಿದೆ.
ಸರದಿ ಪ್ರಕಾರ ಪುರಸಭೆ ಅಧ್ಯಕ್ಷ ಸ್ಥಾನ ಈ ಬಾರಿ ಬಿಸಿಎ ವರ್ಗಕ್ಕೆ ಮೀಸಲಾಗಬೇಕಿತ್ತು ಎಂದು ಪುರಸಭೆ ಸದಸ್ಯ ವಿನೋದ ಗುತ್ತೇದಾರ ಅವರ ವಾದವಾಗಿದೆ.
ನ್ಯಾಯಾಲಯ ನೀಡಿದ ತಡೆಯಾಜ್ಞೆಯನ್ನು ಶೀಘ್ರದಲ್ಲೇ ತೆರವುಗೊಳಿಸಿ ಈಗಾಗಲೇ ಪ್ರಕಟವಾದ ಮೀಸಲಾತಿಯಡಿ ಬರುವ ದಿನಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಕೆಲ ಪುರಸಭೆ ಸದಸ್ಯರ ಅಭಿಪ್ರಾಯವಾಗಿದೆ.
ಪುರಸಭೆಯಲ್ಲಿ ಒಟ್ಟು 23 ಸದಸ್ಯರ ಪೈಕಿ ಕಾಂಗ್ರೆಸ್ 18, ಬಿಜೆಪಿ 5 ಸ್ಥಾನಗಳ ಬಲಾಬಲ ಇದೆ. ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತವಿದ್ದರೂ ಪುರಸಭೆ ಆಡಳಿತದ ಗದ್ದುಗೆ ಏರಲು ಆಗುತ್ತಿಲ್ಲ. ನ್ಯಾಯಾಲಯ ನೀಡುವ ತೀರ್ಮಾನದ ಮೇಲೆ ಯಾರಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಒಲಿಯಲಿದೆ ಎಂಬುದು ಕಾದುನೋಡಬೇಕಿದೆ.
“ಪುರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ವಿಚಾರವಾಗಿ ಪುರಸಭೆ ಸದಸ್ಯರೊಬ್ಬರು ಕೋರ್ಟ್ ಮೊರೆ ಹೋಗಿದ್ದರಿಂದ ತಡೆಯಾಜ್ಞೆ ನೀಡಿದೆ, ಮುಂದಿನ ವಿಚಾರಣೆ ಸೆ.24 ರಂದು ಇದೆ ಅಂದು ಅಂತಿಮ ಆದೇಶ ಹೊರಬಿಳಬಹುದು”.-ಮನೋಜಕುಮಾರ ಗುರೀಕಾರ ಮುಖ್ಯಾಧಿಕಾರಿ ಪುರಸಭೆ ಚಿತ್ತಾಪುರ.
“ಪುರಸಭೆ ಅಧ್ಯಕ್ಷ ಸ್ಥಾನಕ್ಕೆ 2013 ರಲ್ಲಿ ಪ.ಜಾ, ಕಳೆದ 2018 ರಿಂದ 2020 ರವರಿಗೆ ಆಡಳಿತಾಧಿಕಾರಿ ನಂತರ 2020 ರಲ್ಲಿ ಪ.ಜಾ ಈಗ 2024 ರಲ್ಲಿ ಮತ್ತೇ ಪ.ಜಾ ಮೀಸಲಾತಿ ಬಂದಿದೆ ಹೀಗಾಗಿ ಒಂದೇ ಮೀಸಲಾತಿ ಪುನರಾವರ್ತನೆಯಾಗಿದೆ ಹೀಗಾಗಿ ಕೋರ್ಟ್ ಮೊರೆ ಹೋಗಲಾಗಿದೆ, ಈಗ ಕೋರ್ಟ್ ತಡೆಯಾಜ್ಞೆ ನೀಡಿ ಮುಂದಿನ ವಿಚಾರಣೆ ಸೆ.24 ಕ್ಕೆ ನಿಗದಿಪಡಿಸಿದೆ”.-ವಿನೋದ ಗುತ್ತೇದಾರ ಪುರಸಭೆ ಸದಸ್ಯರು ಚಿತ್ತಾಪುರ.