ಚಿತ್ತಾಪುರ ಪುರಸಭೆ ಕಾಂಗ್ರೆಸ್ ತೆಕ್ಕೆಗೆ, ಅಧ್ಯಕ್ಷರಾಗಿ ಅನ್ನಪೂರ್ಣ ಕಲ್ಲಕ್, ಉಪಾಧ್ಯಕ್ಷರಾಗಿ ಅತೀಯಾಬೇಗಂ ಆಯ್ಕೆ, ಕಾಂಗ್ರೆಸ್ ಮುಖಂಡರಿಂದ ವಿಜಯೋತ್ಸವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪುರಸಭೆಯ ಅಧ್ಯಕ್ಷರಾಗಿ ಅನ್ನಪೂರ್ಣ ನಾಗಪ್ಪ ಕಲ್ಲಕ್ ಉಪಾಧ್ಯಕ್ಷರಾಗಿ ಅತೀಯಾ ಬೇಗಂ ನಜಿಮೋದ್ದಿನ್ ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಘೋಷಣೆ ಮಾಡಿದ್ದಾರೆ.
ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ.ಜಾ (ಮಹಿಳೆ) ಮೀಸಲಾತಿಯಡಿ ಕಾಂಗ್ರೆಸ್ ಪಕ್ಷದ ಸದಸ್ಯೆ ಅನ್ನಪೂರ್ಣ ನಾಗಪ್ಪ ಕಲ್ಲಕ್ ಹಾಗೂ ಬಿಜೆಪಿ ಯಿಂದ ಸದಸ್ಯೆ ಸುಶೀಲಾ ದೇವಸುಂದರ್ ನಾಮಪತ್ರ ಸಲ್ಲಿಸಿದರು. ಅನ್ನಪೂರ್ಣ ನಾಗಪ್ಪ ಕಲ್ಲಕ್ ಅವರು 18 ಸದಸ್ಯರ ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರೆ, ಪ್ರತಿಸ್ಪರ್ಧಿ ಸುಶೀಲಾ ದೇವಸುಂದರ್ ಅವರು 5 ಜನ ಸದಸ್ಯರ ಮತ ಪಡೆದು ಪರಾಭವಗೊಂಡಿದ್ದಾರೆ
ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎ (ಮಹಿಳೆ) ಮೀಸಲಾತಿಯಡಿ ಕಾಂಗ್ರೆಸ್ ಪಕ್ಷದಿಂದ ಅತೀಯಾ ಬೇಗಂ ನಜಿಮೋದ್ದಿನ್ ಅವರು ನಾಮಪತ್ರ ಸಲ್ಲಿಸಿದರು ಆದರೆ ಬಿಜೆಪಿಯಲ್ಲಿ ಬಿಸಿಎ ಮಹಿಳೆ ಸದಸ್ಯೆ ಇರದೆ ಕಾರಣಕ್ಕೆ ನಾಮಪತ್ರ ಸಲ್ಲಿಸಿರಲಿಲ್ಲ ಹೀಗಾಗಿ ಅತೀಯಾ ಬೇಗಂ ನಜಿಮೋದ್ದಿನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪುರಸಭೆಯ ಒಟ್ಟು 23 ಸದಸ್ಯರ ಪೈಕಿ ಕಾಂಗ್ರೆಸ್ 18 ಹಾಗೂ ಬಿಜೆಪಿ 5 ಸದಸ್ಯರು ಸೇರಿದಂತೆ ಎಲ್ಲಾ 23 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಹಾಜರಿದ್ದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ನಾಗಯ್ಯ ಹಿರೇಮಠ, ಸಹಾಯಕ ಚುನಾವಣಾಧಿಕಾರಿಯಾಗಿ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಅವರು ಚುನಾವಣೆ ಪ್ರಕ್ರಿಯೆ ನಡೆಸಿದರು.
ಕಾಂಗ್ರೆಸ್ ಮುಖಂಡರಿಂದ ವಿಜಯೋತ್ಸವ: ಪುರಸಭೆ ಅಧ್ಯಕ್ಷರಾಗಿ ಅನ್ನಪೂರ್ಣ ನಾಗಪ್ಪ ಕಲ್ಲಕ್ ಹಾಗೂ ಉಪಾಧ್ಯಕ್ಷರಾಗಿ ಅತೀಯಾ ಬೇಗಂ ನಜಿಮೋದ್ದಿನ್ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ತನ್ನಿ: ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ಪುರಸಭೆಯ ನೂತನ ಅಧ್ಯಕ್ಷ ಉಪಾಧ್ಯಕ್ಷರು ಕಾಂಗ್ರೆಸ್ ಪಕ್ಷದ 18 ಜನ ಸದಸ್ಯರ ಅಭಿಪ್ರಾಯದಂತೆ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ತರಬೇಕು ಎಂದು ಕಿವಿಮಾತು ಹೇಳಿದರು.
ಒಂದೇ ಸ್ಥಾನಕ್ಕೆ ಹಲವರು ಆಕಾಂಕ್ಷಿಗಳು ಇದ್ದಾಗ ಸ್ವಲ್ಪ ಅಸಮಾಧಾನ ಇದ್ದೆ ಇರುತ್ತದೆ ಹೀಗಾಗಿ ಸ್ವಲ್ಪ ತಾಳ್ಮೆಯಿಂದ ಇರಬೇಕು ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ, ಹೀಗಾಗಿ ಅಸಮಾಧಾನ ಬದಿಗಿಟ್ಟು ಎಲ್ಲರೂ ಒಗ್ಗೂಡಿ ಪಟ್ಟಣದ ಅಭಿವೃದ್ಧಿಗೆ ಶ್ರಮವಹಿಸಬೇಕು ಎಂದು ಹೇಳಿದರು.
ನೂತನ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರಿಗೂ ಮತ್ತು ಪುರಸಭೆ ಸದಸ್ಯರಿಗೂ ಯಾವುದೇ ದಕ್ಕೆ ಯಾಗದಂತೆ ಎಲ್ಲರ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದು ಹೇಳಿದರು. ಎನಾದರೂ ತಪ್ಪು ಆದರೂ ಅದನ್ನು ತಿದ್ದಿ ನಮಗೆ ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿದರು.
ವೀಕ್ಷಕರಾಗಿ ಕಲಬುರಗಿ ಜಿಡಿಎ ಅಧ್ಯಕ್ಷ ಮಜರ್ ಅಲ್ಲಾಂಖಾನ್, ಜಿಪಂ ಮಾಜಿ ಸದಸ್ಯ ಶರಣಗೌಡ ಪಾಟೀಲ ಚಿಂಚನಸೂರ, ಈರಣ್ಣ ಝಳಕಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಕಾರ್ಯದರ್ಶಿ ರಮೇಶ್ ಮರಗೋಳ, ಜಿಪಂ ಮಾಜಿ ಸದಸ್ಯ ಶಿವರುದ್ರಪ್ಪ ಭೀಣ್ಣಿ, ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಮಲ್ಲಿಕಾರ್ಜುನ ಕಾಳಗಿ, ವಿನೋದ ಗುತ್ತೇದಾರ, ಅಣ್ಣಾರಾವ್ ಸಣ್ಣೂರಕರ್, ಶ್ರೀನಿವಾಸ ರೆಡ್ಡಿ ಪಾಲಪ್, ಜಗದೀಶ್ ಚವ್ಹಾಣ, ಶಿವಕಾಂತ್ ಬೆಣ್ಣೂರಕರ್, ಪಾಶಾಮಿಯ್ಯಾ ಖುರೇಷಿ, ಸಂತೋಷ್ ಚೌದರಿ, ಶಿವರಾಜ್ ಪಾಳೇದ್, ರಸೂಲ್ ಮುಸ್ತಫಾ, ಮಹ್ಮದ್ ಯಕ್ಬಾಲ್, ಜಗದೇವರೆಡ್ಡಿ ಪಾಟೀಲ, ನಾಗರೆಡ್ಡಿ ಗೋಪಸೇನ್, ಅಹ್ಮದ್ ಸೇಟ್, ನಾಗು ಕಲ್ಲಕ್, ಸಿದ್ದುಗೌಡ ಅಫಜಲಪುರಕರ್, ಇಸ್ಮಾಯಿಲ್ ಕಮರವಾಡಿ, ಮಹಾಂತೇಶ್ ಬೊಮ್ಮನಳ್ಳಿ, ಭೀಮರಾಯ ಹೊತಿನಮಡಿ, ರಾಜಣ್ಣ ಕರದಾಳ, ಸಂಜಯ ಬುಳಕರ್, ಸಂತೋಷ ಪೂಜಾರಿ, ನಜೀರ್ ಆಡಕಿ, ರವಿಸಾಗರ ಹೊಸಮನಿ, ಸೂರಜ್ ಕಲ್ಲಕ್, ಶರಣಪ್ಪ ಕೋರವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್ ನಿರೂಪಿಸಿದರು, ಯುವ ಕಾಂಗ್ರೆಸ್ ಅಧ್ಯಕ್ಷ ದೇವಿಂದ್ರ ಯಾಬಾಳ ದಿಗ್ಗಾಂವ ವಂದಿಸಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೂತನ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್ ಅವರ ಮೆರವಣಿಗೆ ನಡೆಯಿತು.
ಸಾಮಾಜಿಕ ನ್ಯಾಯದಡಿಯಲ್ಲಿ ಬಂಜಾರ ಸಮಾಜಕ್ಕೆ ಈ ಬಾರಿ ಪುರಸಭೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಬಂಜಾರ ಸಮಾಜದ ಮುಖಂಡರು ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಎಲ್ಲಾ ರೀತಿಯ ಒತ್ತಡ ಹೇರಿದ್ದರು. ಆದರೆ ಕೊನೆಗೂ ಬಂಜಾರ ಸಮಾಜಕ್ಕೆ ಅಧ್ಯಕ್ಷ ಸ್ಥಾನ ಕೈ ತಪ್ಪಿರುವುದಕ್ಕೆ ಸಮಾಜದ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಈ ಅಸಮಾಧಾನವನ್ನು ಯಾವ ರೀತಿ ಮ್ಯಾನೇಜ್ ಮಾಡುತ್ತಾರೆ ಎನ್ನುವುದು ಕಾದುನೋಡಬೇಕಿದೆ.