ಚಿತ್ತಾಪುರ ಪುರಸಭೆ ಸಾಮಾನ್ಯ ಸಭೆ | ನೈರ್ಮಲ್ಯ ನಿರೀಕ್ಷಕರ ವಿರುದ್ಧ ಸದಸ್ಯರ ಆಕ್ರೋಶ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದಲ್ಲಿ ರಸ್ತೆ, ಚರಂಡಿಗಳು ಹದಗೆಟ್ಟು ಹೋಗಿವೆ ಇದನ್ನು ಮೇಲುಸ್ತುವಾರಿ ಮಾಡಬೇಕಾದ ನೈರ್ಮಲ್ಯ ನಿರೀಕ್ಷಕರು ಏನು ಮಾಡುತ್ತಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಚಂದ್ರಶೇಖರ್ ಕಾಶಿ ಸೇರಿದಂತೆ ಸರ್ವ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ, ಪಟ್ಟಣದಲ್ಲಿ ಚರಂಡಿ ಹಾಗೂ ರಸ್ತೆಗಳು ಹದಗೆಟ್ಟು ಹೋಗಿವೆ ನೈರ್ಮಲ್ಯ ನಿರೀಕ್ಷಕರು ದಿನನಿತ್ಯ ಬರುವುದಿಲ್ಲ ಏನು ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ ಆಗಿದ್ದರಿಂದ ನಾವು ಜನರಿಂದ ಬೈಯಿಸಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಚಂದ್ರಶೇಖರ ಕಾಶಿ ಹೇಳಿದಾಗ ಮುಖ್ಯಾಧಿಕಾರಿ ಮಾತನಾಡಿ, ಪೈಪ್ ಲೈನ್ ಗಾಗಿ 11 ಲಕ್ಷದ ಟೆಂಡರ್ ಕರೆಯಲಾಗಿದೆ ಎಂದು ಉತ್ತರಿಸಿದರು.
ನಗರ ಯೋಜನಾ ಪ್ರಾಧಿಕಾರದ ಅಧಿಕಾರಿ, ಪುರಸಭೆಯ ನಾಲ್ಕು ಸಾಮಾನ್ಯ ಸಭೆಗಳಿಗೆ ಗೈರು ಹಾಜರಾಗಿದ್ದಾರೆ ಹೀಗಾಗಿ ಅವರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿ ಎಂದು ಸರ್ವ ಸದಸ್ಯರು ಒತ್ತಾಯಿಸಿದರು. ಅವರಿಗೆ ಕೇಳಬೇಕಾದ ಹಲವು ಪ್ರಶ್ನೆಗಳಿವೆ, ಗೈರು ಆದರೆ ನಾವು ಯಾರಿಗೆ ಕೇಳಬೇಕು ಎಂದು ಶೀಲಾ ಕಾಶಿ, ನಾಗರಾಜ ಭಂಕಲಗಿ ಅವರು ಪ್ರಶ್ನೆ ಮಾಡಿದರು.
ಪಟ್ಟಣದಲ್ಲಿ ಸದಸ್ಯರ ಅನುಮತಿ ಇಲ್ಲದೆ ಅಕ್ರಮವಾಗಿ ನಳ ಸಂಪರ್ಕ ನೀಡುತ್ತಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ ಎಂದು ಚಂದ್ರಶೇಖರ ಕಾಶಿ ಆಕ್ರೋಶ ವ್ಯಕ್ತಪಡಿಸಿದರು. ಮನೆಗಳ ತೆರಿಗೆ ಕಟ್ಟದೆ ಇರುವವರಿಗೆ ನಳ ಸಂಪರ್ಕ ನೀಡುವ ಮೂಲಕ ಅಧಿಕಾರಿಗಳ ದುರ್ವರ್ತನೆ ಸಹಿಸಲಾಗದು, ಮನೆಗಳ ತೆರಿಗೆ ಕ್ಲೀಯರ್ ಮಾಡಿಕೊಳ್ಳದೇ ನಳ ಸಂಪರ್ಕ ನೀಡುತ್ತಾರೆ ಅದೇ, ಬಡವರಿಗೆ ನಳ ಸಂಪರ್ಕ ನೀಡಲು ಸತಾಯಿಸುತ್ತಾರೆ ಹಾಗೂ ಮನೆ ತೆರಿಗೆ ಕಟ್ಟುವಂತೆ ಒತ್ತಡ ಹೇರುತ್ತಾರೆ ಇದ್ಯಾವ ನ್ಯಾಯ ಎಂದು ತರಾಟೆಗೆ ತೆಗೆದುಕೊಂಡರು.
ಸೆ.8 ರಂದು ಲಾಟರಿ ಮೂಲಕ ಮನೆಗಳ ಹಂಚಿಕೆಗೆ ನಿರ್ಧಾರ:
ನಾಗಾವಿ ದೇವಸ್ಥಾನದ ಸಾತನೂರು ರಸ್ತೆಯಲ್ಲಿ ನಿರ್ಮಾಣವಾದ ಸಾವಿರ ಮನೆಗಳನ್ನು ಲಾಟರಿ ಮೂಲಕ ಹಂಚಿಕೆ ಮಾಡಲು ಎಲ್ಲಾ ಸಿದ್ಧತೆ ಹಾಗೂ ಪ್ರಕ್ರಿಯೆ ಮಾಡಿಕೊಳ್ಳಲಾಗಿದೆ ಈಗಾಗಲೇ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕಾರ್ಯ ಮುಗಿಯುವ ಹಂತಕ್ಕೆ ತಲುಪಿದೆ. ಒಟ್ಟು 945 ಫಲಾನುಭವಿಗಳು ಡಿಡಿ ಕೊಟ್ಟಿದ್ದಾರೆ ಹೀಗಾಗಿ ಅವರು ಹಕ್ಕು ಪತ್ರ ರೆಡಿಯಾಗಿವೆ ಎಂದು ಕೊಳಚೆ ನಿರ್ಮೂಲನೆ ಮಂಡಳಿಯ ಎಇಇ ಶ್ರೀಧರ್ ಸಾರವಾಡ ಸಭೆಗೆ ಮಾಹಿತಿ ನೀಡಿದರು.
ಕೂಡಲೇ ಮನೆಗಳು ಹಂಚಿಕೆ ಮಾಡಿ ಎಂದು ಸದಸ್ಯರು ಆಗ್ರಹಿಸಿದಾಗ ಎಇಇ ಮಾತನಾಡಿ, ಲಾಟರಿ ಮೂಲಕ ಹಂಚಿಕೆ ಮಾಡಲು ಸ್ಕ್ರೀನ್ ಪರದೆ ಸಿದ್ದತೆ ಮಾಡಿ ನಾವು ಅದಕ್ಕೆ ಸಿದ್ದ ಎಂದಾಗ ಸೆ.8 ರಂದು ಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ಸಿದ್ದತೆ ಮಾಡಲಾಗುವುದು ಎಂದು ಸದಸ್ಯರ ಒಪ್ಪಿಗೆ ಮೇರೆಗೆ ಮುಖ್ಯಾಧಿಕಾರಿ ಹೇಳಿದರು.
ಅಂಗವಿಕಲರಿಗೆ ಮಾತ್ರ ಕೆಳಗಡೆಯ ಮನೆಗಳು ಹಂಚಿಕೆ ಮಾಡಿ ಉಳಿದಂತೆ ಎಲ್ಲಾ ಮನೆಗಳು ಲಾಟರಿ ಮೂಲಕವೇ ಹಂಚಿಕೆ ಮಾಡಬೇಕು ಎಂದು ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ನಾಗರಾಜ ಭಂಕಲಗಿ ಹಾಗೂ ಚಂದ್ರಶೇಖರ ಕಾಶಿ ಸೇರಿದಂತೆ ಇತರೆ ಸದಸ್ಯರು ಆಗ್ರಹಿಸಿದರು.
15 ಪೇ ಹಣಕಾಸು ಅನುದಾನದ ಕಾಮಗಾರಿಗಳಿಗೆ ಅನುಮೋದನೆ:
2025-26 ಪೇ ಸಾಲಿನ 15 ಪೇ ಹಣಕಾಸು ಅನುದಾನದ ಕಾಮಗಾರಿಗಳಿಗೆ ಟೆಂಡರ್ ಗೆ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಿಸಿ ರಸ್ತೆ ಕಾಮಗಾರಿ ಅಂದಾಜು ಮೊತ್ತ 23 ಲಕ್ಷ, ವಾರ್ಡ್ ನಂ.21, 3, 8, 9 ಮತ್ತು 19 ದಿಲ್ಲಿ ಸಿಸಿ ರಸ್ತೆ ಕಾಮಗಾರಿ ಅಂದಾಜು ಮೊತ್ತ 22 ಲಕ್ಷ, ವಾರ್ಡ್ ನಂ. 2, 3, 4, 22 ರಲ್ಲಿ ಸಿಸಿ ರಸ್ತೆ ನಿರ್ಮಾಣ ಅಂದಾಜು ಮೊತ್ತ 23 ಲಕ್ಷ, ವಾರ್ಡ್ ನಂ. 7, 11, 3, 4, 5 ಮತ್ತು 16 ರಲ್ಲಿ ಆರ್’ಸಿಸಿ ಚರಂಡಿ ಕಾಮಗಾರಿ 20 ಲಕ್ಷ.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸದಸ್ಯರಾದ ಮಲ್ಲಿಕಾರ್ಜುನ ಕಾಳಗಿ, ಪಾಶಾಮಿಯ್ಯಾ ಖುರೇಷಿ, ರಸೂಲ್ ಮುಸ್ತಫಾ, ವಿನೋದ ಗುತ್ತೇದಾರ, ಶಾಮಣ್ಣ ಮೇಧಾ, ರಮೇಶ್ ಬೊಮ್ಮನಳ್ಳಿ, ಶ್ರೀನಿವಾಸ ರೆಡ್ಡಿ ಪಾಲಪ್, ಸಂತೋಷ ಚೌದರಿ, ಶಿವರಾಜ್ ಪಾಳೇದ್, ಪ್ರಭು ಗಂಗಾಣಿ, ಶೃತಿ ಪೂಜಾರಿ, ಕಾಶಿಬಾಯಿ ಬೆಣ್ಣೂರಕರ್, ಬೇಬಿ ಜಾಧವ, ಸುಮಂಗಲಾ ಸಣ್ಣೂರಕರ್, ಸುಶೀಲಾಬಾಯಿ ಹೊಸ್ಸುರಕರ್, ಶಹಾನಜಬೇಗಂ ಮಹ್ಮದ್ ಯಕ್ಬಾಲ್, ಖಾಜಾಬಿ ಆಡಕಿ, ಅಧಿಕಾರಿಗಳಾದ ಲೋಹಿತ್ ಕುಮಾರ್, ರವಿಶಂಕರ, ವಿಠಲ್ ಹಾದಿಮನಿ, ಶರಣಪ್ಪ, ರಾಕೇಶ್ ರೆಡ್ಡಿ, ನವೀನ್ ಕುಮಾರ್, ಕ್ರಾಂತಿ ದೇವಿ, ಪ್ರಮೀಳಾ, ಮಲ್ಲಿಕಾರ್ಜುನ, ಮುತ್ತಣ್ಣ ಭಂಡಾರಿ, ಗಿರೀಶ್, ಮರೇಪ್ಪ, ರಾಜಕುಮಾರ್ ಸೇರಿದಂತೆ ಇತರರು ಇದ್ದರು.

