ಚಿತ್ತಾಪುರ ತಾಲೂಕು ಆಡಳಿತ ವತಿಯಿಂದ ಬಾಬು ಜಗಜೀವನರಾಮ್ ಜಯಂತಿ ಆಚರಣೆ, ಜಗಜೀವನರಾಮ್ ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ನಾಯಕ: ಗೋಪಾಲರಾವ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬಾಬು ಜಗಜೀವನರಾಮ್ ಅವರು ಭಾರತ ದೇಶದ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸಿದ್ದ ಮಹಾನ್ ನಾಯಕರಾಗಿದ್ದಾರೆ ಎಂದು ಡಾ.ಜಿ.ಗೋಪಾಲರಾವ ತೆಲಂಗಿ ಹೇಳಿದರು.
ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರ 118 ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಅವರು, ಕೃಷಿ, ರಕ್ಷಣಾ ಹಾಗೂ ರೈಲ್ವೆ ಮಂತ್ರಿಯಾಗಿ ಅಲ್ಲದೆ ಉಪ ಪ್ರಧಾನಿಯಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಜಗಜೀವನರಾಮ್ ಅವರು ಹುಟ್ಟು ಹೋರಾಟಗಾರರಾಗಿದ್ದು ಅಸ್ಪೃಶ್ಯತೆ ಹೋಗಲಾಡಿಸಲು ನಿರಂತರ ಹೋರಾಟ ಮಾಡಿದ್ದರು ಎಂದು ಹೇಳಿದರು.
ಜಯಂತಿ ಸಮಿತಿ ಅಧ್ಯಕ್ಷ ರಾಜಣ್ಣ ಕರದಾಳ ಮಾತನಾಡಿ, ಬಾಬು ಜಗಜೀವನರಾಮ್ ಅವರು ಬಾಲ್ಯದಲ್ಲಿ ಅನೇಕ ಕಷ್ಟಗಳನ್ನು ಹಾಗೂ ಟೀಕೆ ಟಿಪ್ಪಣಿಗಳನ್ನು ಎದುರಿಸಿ ಶಿಕ್ಷಣ ಪಡೆದು ಕೆಳ ಹಂತದಿಂದ ದೇಶದ ಉಪ ಪ್ರಧಾನಿಯಾಗಿ, ಕೃಷಿ ಮಂತ್ರಿಯಾಗಿ ದೇಶಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ ಹೀಗಾಗಿ ಅವರ ಜೀವನ ಚರಿತ್ರೆ ತಿಳಿದುಕೊಳ್ಳಬೇಕು ಎಂದು ಹೇಳಿದರು. ಬಾಬು ಜಗಜೀವನರಾಮ್ ಮತ್ತು ಬಾಬಾಸಾಹೇಬ ಅಂಬೇಡ್ಕರ್ ಅವರು ಸೂರ್ಯ ಚಂದ್ರ ನಂತೆ ಪ್ರಕಾಶಿಸುತ್ತಿದ್ದಾರೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್ ಮಾತನಾಡಿ, ದಲಿತರನ್ನು ಮೇಲೆತ್ತುವ ಕೆಲಸ ಮಾಡಿದ್ದಾರೆ ಹಾಗೂ ದಲಿತರ ಉದ್ಧಾರಕ್ಕಾಗಿ ಅವಿರತವಾಗಿ ಹೋರಾಟ ಮಾಡಿದ ಮಹಾನ್ ಮಾನವತಾವಾದಿ ಆಗಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ, ಬಾಬು ಜಗಜೀವನರಾಮ್ ಅವರು ಆದರ್ಶ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಎಲ್ಲರೂ ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು, ಯಾವುದೇ ಸಾಧನೆ ಇರಲಿ ಅದಕ್ಕೆ ಶಿಕ್ಷಣವೇ ಅಡಿಪಾಯ ಹೀಗಾಗಿ ಶಿಕ್ಷಣ ಪಡೆದಾಗ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದರು.
ಸಮಾಜ ಕಲ್ಯಾಣಾಧಿಕಾರಿ ಚೇತನ್ ಗುರಿಕಾರ, ಪಿಎಸ್ಐ ಚಂದ್ರಾಮಪ್ಪ, ಸಮಿತಿ ಕಾರ್ಯದರ್ಶಿ ಸೂರ್ಯಕಾಂತ ಮುಗುಳಕರ್, ಹರಳಯ್ಯ ಸಮಾಜದ ಅಧ್ಯಕ್ಷ ಪರಶುರಾಮ ರಾಜಾಪುರ, ನ್ಯಾಯವಾದಿ ಸಾಬಣ್ಣ ಕನಗನಳ್ಳಿ, ರಮೇಶ್ ಕಟ್ಟಿ, ಹಣಮಂತ ಸುನ್ನತಿ, ಆದಪ್ಪ ಪಾಟೀಲ, ಮರೆಪ್ಪ ಸಂದ್ಯನ್, ಅಶ್ವಥ್ ನಾರಾಯಣ, ವಿಠಲ್ ರಾವ್ ಸೇರಿದಂತೆ ಇತರರು ಇದ್ದರು. ಶಿಕ್ಷಕ ಸಂತೋಷಕುಮಾರ ಶಿರನಾಳ್ ನಿರೂಪಿಸಿದರು, ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್ ವಂದಿಸಿದರು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಾಬು ಜಗಜೀವನರಾಮ್ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.