ಚಿತ್ತಾಪುರ ತಾಲೂಕು ಕೋಲಿ ಸಮಾಜದ ಅಧ್ಯಕ್ಷರಾಗಿ ಶಿವುಕುಮಾರ ಯಾಗಾಪೂರ ಆಯ್ಕೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜದ ಸಂಘಟನೆಗೆ ಶ್ರಮವಹಿಸಿ: ನಾಟೀಕಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕೋಲಿ ಸಮಾಜದ ಹಿರಿಯ ಮುಖಂಡರ ಹಾಗೂ ಯುವಕರೆಲ್ಲರ ಒಪ್ಪಿಗೆ ಮೇರೆಗೆ ಸಮಾಜದ ಸಂಘಟನೆಯ ದೃಷ್ಟಿಯಿಂದ ಶಿವುಕುಮಾರ ಯಾಗಾಪೂರ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಈ ಕುರಿತು ವಿಧಾನ ಪರಿಷತ್ ಸದಸ್ಯ ಹಾಗೂ ಕೋಲಿ ಸಮಾಜದ ರಾಜ್ಯ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ ಆದೇಶ ಹೊರಡಿಸಿದ್ದಾರೆ ಎಂದು ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಮಾಜಿ ನಿರ್ದೇಶಕ ಮತ್ತು ಕೋಲಿ ಸಮಾಜದ ಮುಖಂಡ ಶರಣಪ್ಪ ನಾಟೀಕಾರ ಹೇಳಿದರು.
ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತಾಪುರ ತಾಲೂಕಿನಲ್ಲಿ ಕೋಲಿ ಸಮಾಜದ ಜನಸಂಖ್ಯೆ ಹೆಚ್ಚಿದೆ ಹೀಗಾಗಿ ನೂತನ ಅಧ್ಯಕ್ಷ ಶಿವುಕುಮಾರ ಯಾಗಾಪೂರ ಅವರು ಸಮಾಜಕ್ಕೆ ಹಾಗೂ ಆಯ್ಕೆ ಮಾಡಿದ ಮುಖಂಡರಿಗೂ ಯಾವುದೇ ಕೆಟ್ಟ ಹೆಸರು ತರದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗೂಡಿಸಿ ಸಮಾಜದ ಸಂಘಟನೆಗೆ ಶ್ರಮಿಸಬೇಕು ಎಂದು ಹೇಳಿದರು.
ಮುಖಂಡ ತಮ್ಮಣ್ಣ ಡಿಗ್ಗಿ ಮಾತನಾಡಿ, ಶಿವುಕುಮಾರ ಯಾಗಾಪೂರ ಕೋಲಿ ಸಮಾಜದ ಅಧಿಕೃತ ಅಧ್ಯಕ್ಷರಾಗಿದ್ದಾರೆ, ಆ ಬಣ ಈ ಬಣ ಅಂತ ಮಾಡದೇ ಎಲ್ಲರೂ ಶಿವಕುಮಾರ ಯಾಗಾಪೂರ ಅವರಿಗೆ ಸಹಕಾರ ಮಾಡುವ ನಿಟ್ಟಿನಲ್ಲಿ ಸಮಾಜ ಒಂದು ಮಾಡುವ ಕೆಲಸ ಮಾಡಬೇಕು, ಒಡೆಯುವ ಕೆಲಸ ಮಾಡಬಾರದು ಎಂದು ಹೇಳಿದರು.
ಯುವ ಮುಖಂಡ ಗುಂಡು ಐನಾಪುರ ಮಾತನಾಡಿ, ಸಮಾಜದ ಮುಖಂಡರ ಹಾಗೂ ಯುವಕರ ಸಹಮತದಿಂದ ಹಾಗೂ ಒಕ್ಕೊರಲಿನಿಂದ ಆಯ್ಕೆಯಾದ ಶಿವುಕುಮಾರ ಯಾಗಾಪೂರ ಅವರಲ್ಲಿ ಸಮಾಜದ ಸಂಘಟನೆ ಮತ್ತು ಎಲ್ಲರನ್ನೂ ಒಗ್ಗೂಡಿಸುವ ಸಾಮರ್ಥ್ಯ ಇದೆ ಎಂದು ಹೇಳಿದರು.
ಯುವ ಮುಖಂಡ ಶಿವುಕುಮಾರ ಸುಣಗಾರ ಮಾತನಾಡಿ, ಕೋಲಿ ಸಮಾಜ ಯಾರದೋ ಸ್ವತ್ತು ಅಲ್ಲ ಮಾಡಿದ ತಪ್ಪನ್ನು ತಿದ್ದಿಕೊಂಡು ನೂತನ ಅಧ್ಯಕ್ಷ ಶಿವುಕುಮಾರ ಯಾಗಾಪೂರ ಅವರಿಗೆ ಸಹಕಾರ ನೀಡಿ ಕೈಜೋಡಿಸಬೇಕು ಎಂದು ಹೇಳಿದರು. ಎಲ್ಲ ಭಾಗದವರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಸಮಾಜವನ್ನು ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕೋಲಿ ಸಮಾಜದ ನೂತನ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ ಮಾತನಾಡಿ, ಸಮಾಜದ ಹಿರಿಯ ಮುಖಂಡರು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ದಾರೆ ಹೀಗಾಗಿ ಮುಖಂಡರಿಗೆ ಹಾಗೂ ಸಮಾಜಕ್ಕೆ ಯಾವುದೇ ಧಕ್ಕೆಯಾಗದಂತೆ ಸಮಾಜದ ಸಂಘಟನೆಗೆ ಒತ್ತು ನೀಡುತ್ತೇನೆ ಎಂದು ಹೇಳಿದರು. ತಾಲೂಕು ಯುವ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಇದೇ ಜ.15 ರೊಳಗೆ ಮಹೇಶ್ ಸಾತನೂರು ಅವರಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೋಲಿ ಸಮಾಜದ ಮುಖಂಡರಾದ ಅಣ್ಣಾರಾವ್ ಸಣ್ಣೂರಕರ್, ಭೀಮಣ್ಣ ಸೀಬಾ, ಸಾಬಣ್ಣ ಡಿಗ್ಗಿ, ಸಂತೋಷ ಇವಣಿ, ಕಾಶಪ್ಪ ಡೋಣಗಾಂವ, ಮಹಾದೇವ ಬೋನಿ, ಸಾಬಣ್ಣ ಭರಾಟೆ, ದಶರಥ ದೊಡ್ಡಮನಿ, ದುರ್ಗಪ್ಪ ಯಾಗಾಪೂರ, ಸಂಜೀವಕುಮಾರ ಸಂಕನೂರ, ಪ್ರವೀಣ್ ನಾಮದಾರ, ಮಹೇಶ್ ಸಾತನೂರು, ಶರಣು ಭಾಗೋಡಿ, ಮಹಾದೇವ ಮುಗುಟಿ, ಸಂತೋಷ ಕೊಂಕನಳ್ಳಿ, ಅರುಣ್ ಯಾಗಾಪೂರ, ಕಿಶನ್ ಮುಕೆ, ಗೂಳಿ ಡಿಗ್ಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮುಖಂಡರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.