ಚಿತ್ತಾಪುರ ತಾಲೂಕು ಮರಳು ಟಾಸ್ಕ್ ಫೋರ್ಸ್ ಸಮಿತಿ ಸಭೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ತಾಲೂಕು ಪಂಚಾಯಿತ್ ಸಭಾಂಗಣದಲ್ಲಿ ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ ರವರ ಅಧ್ಯಕ್ಷತೆಯಲ್ಲಿ ಸೋಮವಾರ ಚಿತ್ತಾಪುರ ತಾಲೂಕು ಮರಳು ಟಾಸ್ಕ್ ಫೋರ್ಸ್ ಸಮಿತಿಯ ಸಭೆ ನಡೆಯಿತು.
ಸದರಿ ಸಭೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಯಲು ವಿವಿಧ ಇಲಾಖೆಯ ಸಿಬ್ಬಂದಿಗಳ ತಂಡವನ್ನು ರಚಿಸಲು ತೀರ್ಮಾನಿಸಲಾಯಿತು, ತಾಲೂಕಿನಲ್ಲಿ ಪರವಾನಗಿ ಪಡೆದ 12 ಮರಳು ತೆಗೆಯುವ ಕೇಂದ್ರದಲ್ಲಿ ನಿಯಮಾನುಸಾರ ತೂಕದ ಮೂಲಕ ರಾಯಲ್ಟಿ ನೀಡುವುದು, ಅತಿ ಹೆಚ್ಚು ತೂಕದ ಮರಳು ಲಾರಿಯನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸಹಾಯಕ ಆಯುಕ್ತರು ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ ನಾಗಯ್ಯ ಹಿರೇಮಠ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಕ್ರಂ ಪಾಷಾ ಸೇರಿದಂತೆ ಸಾರಿಗೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಕಂದಾಯ ಇಲಾಖೆಯ ಸಿಬ್ಬಂದಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.