Oplus_131072

ಚಿತ್ತಾಪುರ ರೂ.86.79 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು, ಕ್ಷೇತ್ರದ ಗ್ರಾಮೀಣ ಭಾಗದ ಅಭಿವೃದ್ದಿಗೆ ರೂ 150 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ದ: ಸಚಿವ ಪ್ರಿಯಾಂಕ್ ಖರ್ಗೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕ್ಷೇತ್ರದ ಗ್ರಾಮೀಣ ಭಾಗದ ಹಳ್ಳಿಗಳ ಅಭಿವೃದ್ದಿಗಾಗಿ ರೂ. 150 ಕೋಟಿ ವೆಚ್ಚದ ಕ್ರಿಯಾಯೋಜನೆ ಈಗಾಗಲೇ ಸಿದ್ದವಾಗಿದೆ. ಇದರ ಅಡಿಯಲ್ಲಿ 87 ಹಳ್ಳಿಗಳಿಗೆ ಅಗತ್ಯ ಅನುದಾನ ಲಭ್ಯವಾಗಲಿದ್ದು ಮುಂದಿನ ಹದಿನೈದು ದಿನಗಳಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ‌ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಅಮೃತ್ ಯೋಜನೆಯಡಿಯಲ್ಲಿ ಚಿತ್ತಾಪುರ ಹಾಗೂ ವಾಡಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಅಡಿಗಲ್ಲು, ಚಿತ್ತಾಪುರ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಕ್ರೀಡಾಂಗಣ ಉದ್ಘಾಟನೆ ಸೇರಿದಂತೆ ರೂ 86.79 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಮೂಲಭೂತ ಸೌಕರ್ಯ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಒತ್ತು: ಮೂಲಭೂತ ಸೌಕರ್ಯ, ಕುಡಿಯುವ ನೀರು ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದ ಪ್ರಿಯಾಂಕ್ ಖರ್ಗೆ, ರೂ 25 ಕೋಟಿ ವೆಚ್ಚದಲ್ಲಿ ಗುಂಡಗುರ್ತಿ ಬಳಿ ಸೋಲಾರ್ ಎನರ್ಜಿ ವಿದ್ಯುತ್ ಉತ್ಪಾದನಾ ಕೆಂದ್ರ ಸ್ಥಾಪಿಸಲಾಗುತ್ತಿದೆ. ಪ್ರಗತಿ ಪಥ ಹಾಗೂ ಕಲ್ಯಾಣ ಪಥ ಯೋಜನೆಗಳ ಅಡಿಯಲ್ಲಿ ಜಿಲ್ಲೆಯ ರಸ್ತೆ ಅಭಿವೃದ್ದಿ ಪಡಿಸಲಾಗುತ್ತಿದೆ. ಜೊತೆಗೆ ವಾಡಿ ಹಾಗೂ ಚಿತ್ತಾಪುರ ಪಟ್ಟಣದ ಅಭಿವೃದ್ದಿಗೆ ನೀಲ ನಕ್ಷೆ ತಯಾರಿಸಲಾಗುತ್ತಿದೆ‌ ಎಂದು ಹೇಳಿದರು.

ಅರಿವು ಕೇಂದ್ರ ಹಾಗೂ ಕೂಸಿನ ಮನೆಗಳ ಸ್ಥಾಪನೆ: ಗ್ರಾಮೀಣಾಭಿವೃದ್ಧಿ ಇಲಾಖೆ ಅಡಿಯಲ್ಲಿ ಕೈಗೊಂಡ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದ ಸಚಿವರು, ರಾಜ್ಯಾದ್ಯಂತ 5,770 ಅರಿವು ಕೇಂದ್ರಗಳನ್ನು ಸ್ಥಾಪಿಸಿ ಗ್ರಾಮೀಣ ಭಾಗದ ಯುವಕ ಯುವತಿಯರಿಗಾಗಿ ಜ್ಞಾನಾರ್ಜನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಈ ಸಲ ಒಟ್ಟು 1,281 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ. ಇದು ದಾಖಲೆಯ ಸಂಗ್ರಹವಾಗಿದೆ. ನರೇಗಾ ಯೋಜನೆಯಡಿಯಲ್ಲಿ ತಾಯಂದಿರು ಕೆಲಸ ಮಾಡಲು ಹೋದಾಗ ಅವರ ಮಕ್ಕಳನ್ನು ಬಿಟ್ಟು ಹೋಗಲು 3,867 ಕೂಸಿನ ಮನೆ ಗಳನ್ನು ಸ್ಥಾಪಿಸಲಾಗಿದ್ದು ಅಲ್ಲಿ ಸುಮಾರು 50,000 ಮಕ್ಕಳನ್ನು ಆರೈಕೆ ಮಾಡಲಾಗುತ್ತಿದೆ ಎಂದರು.

ಗ್ರಾಹಕ ಬಾಡಿಗೆ ಕೇಂದ್ರಗಳ ಸ್ಥಾಪನೆ: ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 9 ಗ್ರಾಹಕ ಬಾಡಿಗೆ ಸೇವಾ ಕೇಂದ್ರ ಸ್ಥಾಪನೆ ಮಾಡಿದ್ದು ಕೃಷಿ ಚಟುವಟಿಕೆ ನಡೆಸಲು ಬಾಡಿಗೆ ಆಧಾರದ ಮೇಲೆ ಕೃಷಿ ಯಂತ್ರೋಪಕರಣಗಳನ್ನು ಪಡೆಯಬಹುದಾಗಿದೆ. ಖಾಸಗಿಯವರಿಗೆ ಹೋಲಿಸಿದರೆ ಯಂತ್ರೋಪಕರಣಗಳ ಬಾಡಿಗೆ ಕೂಡಾ ಕಡಿಮೆಯಾಗಿದೆ. ಚಿತ್ತಾಪುರ ತಾಲೂಕಿನಲ್ಲಿ ಇಂತಹ 2 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರೈತ ಬಾಂಧವರು ಈ ಕೇಂದ್ರಗಳ ಅನುಕೂಲ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕ್ಷೇತ್ರದ ಅಭಿವೃದ್ದಿ ನನ್ನ ಧರ್ಮ: ಚಿತ್ತಾಪುರ ಶಾಸಕನಾಗಿ ಹಾಗೂ ಸಚಿವನಾಗಿ ನಿಮ್ಮ ಕೆಲಸ ಮಾಡುವುದು ನನ್ನ ಧರ್ಮ. ಮೂಲಭೂತ ಸೌಕರ್ಯ, ಶೈಕ್ಷಣಿಕ ಪ್ರಗತಿ ಸೇರಿದಂತೆ ನೀರಾವರಿ ಯೋಜನೆಗಳ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ . ನನ್ನ ಅವಧಿಯಲ್ಲಿ ಶಕ್ತಿ‌ಮೀರಿ ಅಭಿವೃದ್ದಿ ಕೆಲಸ ಮಾಡಿದ್ದೇನೆ. ನೀವು ಎಷ್ಟು ಶಕ್ತಿ ತುಂಬುತ್ತಿರೋ‌ ಮತ್ತಷ್ಟು ಕೆಲಸ ಮಾಡುತ್ತೇನೆ. ನೀವು ಮಾಡುವ ಮತದಾನದ ಮೌಲ್ಯ ಅರಿತುಕೊಳ್ಳಬೇಕು ಎಂದು‌ ಮನವಿ ಮಾಡಿದ ಸಚಿವರು ಮತದಾರರ ಆಶೀರ್ವಾದದಿಂದ ಕ್ಷೇತ್ರದಲ್ಲಿ ಅಭಿವೃದ್ದಿಯಾಗುತ್ತಿವೆ. ನಾನು ಯಾವ ಉಪಕಾರ ಮಾಡುತ್ತಿಲ್ಲ, ಬದಲಿಗೆ ನಿಮ್ಮ ಋಣ ತೀರಿಸುತ್ತಿದ್ದೇನೆ ಎಂದು ಹೇಳಿದರು.

ನಿಮ್ಮ ಆಶೀರ್ವಾದದಿಂದ ಐಟಿ ಬಿಟಿಯಲ್ಲಿ ಪ್ರಗತಿ: ಮೊದಲ ಬಾರಿಗೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಸಂದರ್ಭದಲ್ಲಿ ನಮಗೆ ಟಿಕೇಟ್ ನೀಡಲು ವಿರೋಧ ವ್ಯಕ್ತವಾಗಿತ್ತು. ಪತ್ರಿಕೆಗಳು ಕೂಡಾ ನನ್ನ ಬಗ್ಗೆ ವ್ಯಂಗ್ಯವಾಡಿ ಹೆಡ್ ಲೈನ್ ಪ್ರಕಟಿಸಿದ್ದವು. ಆ ಸಂದರ್ಭದಲ್ಲಿ ಹಿರಿಯ ನಾಯಕ ಎಸ್ ಆರ್ ಪಾಟೀಲ್ ಐಟಿ‌,ಬಿಟಿ ಸಚಿವರಾಗಿದ್ದರು. ನಾನು ಐಟಿ ಬಿಟಿ ಸಚಿವನಾದ ನಂತರ ಕೆಲ ವರ್ಷಗಳಲ್ಲಿ ಪ್ರಿಯಾಂಕ್ ಅವರನ್ನೇ ಐಟಿ,ಬಿಟಿ ಸಚಿವರನ್ನಾಗಿ ಮಾಡಿ ಎಂದು ಎಲ್ಲರೂ ಒತ್ತಾಯಿಸಿದ್ದರು. ಇದಕ್ಕೆಲ್ಲಾ ನಿಮ್ಮ ಆಶೀರ್ವಾದವೇ ಕಾರಣ ಎಂದು ಖರ್ಗೆ ಹೇಳಿದರು.

ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಈ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಇದೆ ಎಂದರು.

ವೇದಿಕೆಯ ಮೇಲೆ ಎಂಎಲ್ಸಿ ಹಾಗೂ ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷೆ ಚಂದ್ರಲಾ ಪರಮೇಶ್ವರಿ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಜಿಲ್ಲಾಧಿಕಾರಿ‌ ಫೌಜಿಯಾ ತರನ್ನುಮ್, ಸಿಇಒ ಭಂವರ್ ಸಿಂಗ್ ಮೀನಾ, ಎಸ್.ಪಿ ಅಡ್ಡೂರು ಶ್ರೀನಿವಾಸಲು, ತಹಸೀಲ್ದಾರ್ ನಾಗಯ್ಯ ಹಿರೇಮಠ, ಡಾ.ಶಂಕರ ಕಣ್ಣಿ, ಸಂಜೀವಕುಮಾರ ಮಾನಕರ್, ಮುಖಂಡರಾದ ನಾಗರೆಡ್ಡಿ ಪಾಟೀಲ ಕರದಾಳ, ಭೀಮಣ್ಣ ಸಾಲಿ, ಶ್ರೀನಿವಾಸ ಸಗರ, ಶಿವಾನಂದ ಪಾಟೀಲ, ಮಹೆಬೂಬ್ ಸಾಬ್, ರಮೇಶ ಮರಗೋಳ, ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ, ಜಗದೀಶ್ ಚವ್ಹಾಣ, ನಾಗರೆಡ್ಡಿ ಗೋಪಸೇನ್, ಸುನೀಲ್ ದೊಡ್ಡಮನಿ, ಸಾಬಣ್ಣ ಕಾಶಿ, ಸೂರ್ಯಕಾಂತ ಪೂಜಾರಿ, ದೇವು ಯಾಬಾಳ, ಶರಣಪ್ಪ ನಾಟೀಕಾರ, ಸಂಜಯ ಬುಳಕರ್ ಸೇರಿದಂತೆ ಅಧಿಕಾರಿಗಳು ಇದ್ದರು. ಸಂತೋಷ ಶಿರನಾಳ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!