ಚಿತ್ತಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ಫಲಿತಾಂಶಕ್ಕೆ ತಡೆಯಾಜ್ಞೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ಫಲಿತಾಂಶಕ್ಕೆ ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯ ಉಪವಿಭಾಗ ಸೇಡಂ ಸೋಮವಾರ ತಡೆಯಾಜ್ಞೆ ನೀಡಿದೆ.
ಚಿತ್ತಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಮಲ್ಲಿಕಾರ್ಜುನ ಅಂಬಣ್ಣ ಸಲ್ಲಿಸಿದ ಚುನಾವಣಾ ತಕರಾರಿಗೆ ಸಂಬಂಧಿಸಿದ ಮೂಲ ಅರ್ಜಿ ಮತ್ತು ಮಧ್ಯಂತರ ಅರ್ಜಿಯನ್ನು ಕಡತದ ಮೇಲೆ ತೆಗೆದುಕೊಳ್ಳಲಾಯಿತು.
ಡಿಸೆಂಬರ್ 5 ರಂದು ನ್ಯಾಯಾಲಯದಿಂದ ಮಧ್ಯಂತರ ಆದೇಶ ನೀಡುವ ಕುರಿತು ವಿಚಾರಣೆಯ ನೋಟಿಸು ಜಾರಿ ಮಾಡಿ ಡಿ.9 ರಂದು 12 ಗಂಟೆಗೆ ವಿಚಾರಣೆ ಜರುಗಿಸಲಾಯಿತು. ಅರ್ಜಿದಾರ ಸಂಘದ ಸದಸ್ಯ ಮಲ್ಲಿಕಾರ್ಜುನ ಅಂಬಣ್ಣ ಹಾಜರಾದರು ಎದುರು ಅರ್ಜಿದಾರ ಸಂಘದ ನಿರ್ದೇಶಕ ಮಲ್ಲರೆಡ್ಡಿ ಗೋಪಸೇನ್ ಗೈರು ಹಾಜರಾದರು. ಅರ್ಜಿದಾರರು ಸಲ್ಲಿಸಿದ ಮೂಲ ಅರ್ಜಿ ಮತ್ತು ಮಧ್ಯಂತರ ಅರ್ಜಿಯಲ್ಲಿ ನಮೂದಿಸಿರುವ ಅಂಶಗಳನ್ನು ಈ ನ್ಯಾಯಾಲಯ ಕೂಲಂಕುಶವಾಗಿ ಪರಿಶೀಲಿಸಲಾಯಿತು.
ಪರಿಶೀಲನೆ ಸಂದರ್ಭದಲ್ಲಿ ಎದುರು ಅರ್ಜಿದಾರರು ಅದರಲ್ಲೂ ವಿಶೇಷವಾಗಿ ಅರ್ಜಿದಾರರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚುನಾವಣೆಗೊಸ್ಕರ ಕೈಕೊಳ್ಳಬೇಕಾದ ಪೂರ್ವ ತಯಾರಿ ಅಂದರೆ ಕಡ್ಡಾಯವಾಗಿ ಪಾಲಿಸಬೇಕಾದ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳನ್ನು ಪಾಲಿಸದೇ ಉಲ್ಲಂಘಿಸಿರುವುದು, ಅದರಲ್ಲೂ ವಿಶೇಷವಾಗಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 27ಎ 39ಎಎ (15)(ಎ) ಮತ್ತು ಕರ್ನಾಟಕ ಸಹಕಾರ ಸಂಘಗಳ ನಿಯಮ 1960 ನಿಯಮ 13ಡಿ (2ಎ) ಉಲ್ಲಂಘಿಸಿರುವುದು ಮೇಲನೋಟಕ್ಕೆ ಕಂಡು ಬರುತ್ತದೆ. ಹಾಗೂ ಮಾನ್ಯ ಉಚ್ಚ ನ್ಯಾಯಾಲಯ ಕರ್ನಾಟಕ ಕಲಬುರಗಿ ಪೀಠದ ರಿಟ್ ಅರ್ಜಿ ಸಂಖ್ಯೆ: 202121/2024 ಇದರ ತೀರ್ಪಿನ ದಿನಾಂಕ:22-08- 2024 ರ ಆದೇಶವನ್ನು ಗಮನಿಸಲಾಗಿ ಅರ್ಜಿದಾರರು ಮಾಡಿರುವ ಆರೋಪಗಳನ್ವಯ ಈ ಮೇಲಿನ ಶಾಸನ ಬದ್ಧ ಕರ್ತವ್ಯ ನಿರ್ವಹಿಸದೇ ತಯಾರಿಸಲಾದ ಸಂಘದ ದೋಷಪೋರಿತವಾದ ಅಂತಿಮ ಮತದಾರರ ಪಟ್ಟಿಯನ್ನು ಆಧರಿಸಿ ಅರ್ಜಿದಾರರ ಸಂಘಕ್ಕೆ ಜರುಗಿಸಿರುವ ಆಡಳಿತ ಮಂಡಳಿ ಚುನಾವಣೆ ಕಾನೂನು ಬಾಹಿರವಾಗಿದೆನ್ನುವ ಅಂಶಕೂಡ ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ಹಿನ್ನಲೆಯಲ್ಲಿ ಅರ್ಜಿದಾರರ ತಕರಾರು ಅರ್ಜಿಯನ್ನು ಪುರಸ್ಕರಿಸಿ ಈ ಕೆಳಗಿನಂತೆ ಆದೇಶಿಸಿದೆ.
ಮಧ್ಯಂತರ ಆದೇಶ: ಮೇಲೆ ವಿವರಿಸಿದ ಅಂಶಗಳನ್ನು ಆಧರಿಸಿ ಅರ್ಜಿದಾರರ ಮೂಲ ಅರ್ಜಿಯ ವಿಚಾರಣೆಯನ್ನು ಬಾಕಿ ಇಟ್ಟು ನವೆಂಬರ್ 18 ರಂದು ಜರುಗಿದ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ಫಲಿತಾಂಶಕ್ಕೆ ಈ ಕೂಡಲೇ ಜಾರಿಗೆ ಬರುವಂತೆ ತಡೆಯಾಜ್ಞೆ ನೀಡಲಾಗಿದೆ. ಈ ತಡೆಯಾಜ್ಞೆ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಸೇಡಂ ಉಪ ವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ.