ಚಿತ್ತಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ವಿಶ್ವರಾಜ್ ನೆನೆಕ್ಕಿ, ಉಪಾಧ್ಯಕ್ಷರಾಗಿ ಅರ್ಜುನ್ ಸಾಲಹಳ್ಳಿ ಅವಿರೋಧ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ವಿಶ್ವರಾಜ್ ಹೊನ್ನಪ್ಪ ನೆನೆಕ್ಕಿ ಹಾಗೂ ಉಪಾಧ್ಯಕ್ಷರಾಗಿ ಅರ್ಜುನ್ ಮಹಾದೇವ ಸಾಲಹಳ್ಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ, ಕಾರ್ಯದರ್ಶಿ ಸಂತೋಷ್ ಸುಗಂಧಿ ಘೋಷಣೆ ಮಾಡಿದ್ದಾರೆ.
ಪಟ್ಟಣದ ಎಪಿಎಂಸಿ ಆವರಣದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಶನಿವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಒಟ್ಟು 12 ಸದಸ್ಯರ ಪೈಕಿ ವಿಶ್ವರಾಜ ಹೊನ್ನಪ್ಪ ನೆನೆಕ್ಕಿ, ಅರ್ಜುನ್ ಮಹಾದೇವ ಸಾಲಹಳ್ಳಿ, ನಾಗರಾಜ ರೇಷ್ಮಿ, ಶ್ರೀಶೈಲ್ ನಾಗಣ್ಣ ಸುಬೇದಾರ್, ಅಶ್ವಥರಾಮ್ ರಾಠೋಡ, ಸಿದ್ದಣ್ಣ ಶಿವಶರಣಪ್ಪ ಸಜ್ಜನಶೆಟ್ಟಿ, ಮಲ್ಲರೆಡ್ಡಿ ಗೋಪಸೇನ್, ಸೋಮಶೇಖರ ಅಜಲಾಪೂರ, ಸಿದ್ರಾಮ ಬಸವರಾಜ ರೇಷ್ಮಿ, ಸುಮಿತ್ರಾಬಾಯಿ ಶರಣಪ್ಪ ಅಲ್ಲೂರಕರ್ 10 ಜನ ಸದಸ್ಯರು ಹಾಜರಿದ್ದರೆ, ಸುವನರೆಡ್ಡಿ ಗೌಡಪ್ಪ ಪೋತರೆಡ್ಡಿ ಮತ್ತು ಶರಣಮ್ಮ ನರಸಪ್ಪ ಹೋಳಿಕಟ್ಟಿ ಇಬ್ಬರು ಸದಸ್ಯರು ಗೈರು ಹಾಜರಾಗಿದ್ದರು.
ಚುನಾವಣೆ ಶನಿವಾರ ನಿಗದಿಯಾಗಿದ್ದರೂ ಸಹ ಚುನಾವಣಾಧಿಕಾರಿ ದತ್ತಾತ್ರೇಯ ಅವರು ಬರದೆ ಇರುವುದನ್ನು ಖಂಡಿಸಿ ಆಡಳಿತ ಮಂಡಳಿಯ ಸದಸ್ಯರು ಎಪಿಎಂಸಿ ಆವರಣದಲ್ಲಿ ಇರುವ ಸಂಘದ ಕಚೇರಿ ಮುಂದುಗಡೆ ಕುಳಿತು ಧರಣಿ ನಡೆಸಿದ ಪ್ರಸಂಗ ಬೆಳಿಗ್ಗೆ ನಡೆದಿತ್ತು. ಇಷ್ಟಾದರೂ ಸಹ ಕೊನೆಗೂ ಚುನಾವಣಾಧಿಕಾರಿ ಬರಲೇ ಇಲ್ಲ, ಇದರಿಂದ ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡದೆ ಯಥಾಪ್ರಕಾರ ನಡೆಸಬೇಕು ಎಂದು ಬಿಜೆಪಿ ಮುಖಂಡರು ಪಟ್ಟು ಹಿಡಿದಾಗ ಸಹಾಯಕ ಚುನಾವಣಾಧಿಕಾರಿ ಇಕ್ಕಟ್ಟಿಗೆ ಸಿಲುಕಿದರು. ಈ ಸಂದರ್ಭದಲ್ಲಿ ನೀ ಕೊಡೆ ನಾ ಬಿಡೆ ಎಂಬ ಪರಿಸ್ತಿತಿ ನಿರ್ಮಾಣವಾಗಿತ್ತು ಹೀಗಾಗಿ ಮಧ್ಯಾಹ್ನ 1.30 ಮುಗಿಯಬೇಕಾದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ಮಧ್ಯಾಹ್ನ 3.30 ಕ್ಕೆ ಮುಗಿಯಿತು.
ಚುನಾವಣಾಧಿಕಾರಿ ಆರೋಗ್ಯ ಸಮಸ್ಯೆಯಿಂದ ಗೈರು ಹಾಜರಾಗಿದ್ದಾರೆ ಹೀಗಾಗಿ ಚುನಾವಣೆ ನಡೆಸದೆ ರದ್ದುಗೊಳಿಸಿ ಮುಂದೂಡುವಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಧಮ್ಕಿ ಹಾಕಿದ್ದಾರೆ ಹಾಗೂ ಮೇಲಾಧಿಕಾರಿಗಳು ನನ್ನ ಮೇಲೆ ಒತ್ತಡ ಹೇರಿದ್ದಾರೆ ಆದರೂ ನಾನು ನಿಯಮದಂತೆ ಚುನಾವಣೆ ಪ್ರಕ್ರಿಯೆ ಮಾಡಿದ್ದೇನೆ ಎಂದು ಸಹಾಯಕ ಚುನಾವಣಾಧಿಕಾರಿ ಕಾರ್ಯದರ್ಶಿ ಸಂತೋಷ್ ಸುಗಂಧಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಬಿಜೆಪಿ ಉಸ್ತುವಾರಿ ಶರಣಪ್ಪ ತಳವಾರ, ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಒಬಿಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್, ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಮುಖಂಡರಾದ ಸೋಮಶೇಖರ ಪಾಟೀಲ ಬೆಳಗುಂಪಾ, ಮಲ್ಲಿಕಾರ್ಜುನ ಪೂಜಾರಿ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಮಾಲಗತ್ತಿ, ಕೋಟೇಶ್ವರ ರೇಷ್ಮಿ, ರಮೇಶ್ ಬೊಮ್ಮನಳ್ಳಿ, ಶಾಮ್ ಮೇಧಾ, ಶಿವರಾಮ್ ಚವ್ಹಾಣ, ಸತ್ಯಾ ನಾರಾಯಣ ರೆಡ್ಡಿ ಭಂಕಲಗಿ, ಶರಣಗೌಡ ಭೀಮನಳ್ಳಿ, ಅಂಬರೀಷ್ ಸುಲೇಗಾಂವ, ಶ್ರೀಕಾಂತ್ ಸುಲೇಗಾಂವ್, ತಮ್ಮಣ್ಣ ಡಿಗ್ಗಿ, ದಶರಥ ದೊಡ್ಡಮನಿ, ಮಲ್ಲಿಕಾರ್ಜುನ ರೆಡ್ಡಿ ಇಜಾರ್, ರವೀಂದ್ರ ರೆಡ್ಡಿ ಭಂಕಲಗಿ, ಚನ್ನಪ್ಪ ಟೇಲರ್, ರಮೇಶ್ ಕಾಳನೂರ ಸೇರಿದಂತೆ ಇತರರು ಇದ್ದರು.
ಚುನಾವಣೆಯಿಂದ ದೂರ ಉಳಿದ ಕಾಂಗ್ರೆಸ್ ಮುಖಂಡರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ಸಮಯದಲ್ಲಿ ಬಹುತೇಕ ಬಿಜೆಪಿ ಮುಖಂಡರು ಹಾಜರಿದ್ದರು ಆದರೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿರದೇ ಚುನಾವಣೆಯಿಂದ ದೂರ ಉಳಿದಿರುವುದು ಒಂದೆಡೆ ಆದರೆ ಇನ್ನೊಂದೆಡೆ ಬಿಜೆಪಿಯ ಪುರಸಭೆ ವಿಪಕ್ಷ ನಾಯಕ ನಾಗರಾಜ ಭಂಕಲಗಿ ಗೈರು ತೀವ್ರ ಚರ್ಚೆಗೆ ಗ್ರಾಸವನ್ನುಂಟು ಮಾಡಿತ್ತು.
ಆದರೆ ಚುನಾವಣೆ ಪ್ರಕ್ರಿಯೆ ಮುಗಿದ ಮೇಲೆ ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ, ಬಿಜೆಪಿ ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು. ಆದರೆ ಕಾಂಗ್ರೆಸ್ ನ ಯಾವೊಬ್ಬ ಮುಖಂಡರು ಇರಲಿಲ್ಲ, ಬಿಜೆಪಿ ಬೆಂಬಲಿತ ವಿಶ್ವರಾಜ ಹೊನ್ನಪ್ಪ ನೆನೆಕ್ಕಿ ಹಾಗೂ ಕಾಂಗ್ರೆಸ್ ಬೆಂಬಲಿತ ಅರ್ಜುನ್ ಮಹಾದೇವ ಸಾಲಹಳ್ಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ವಿಜಯೋತ್ಸವ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿಕೊಳ್ಳುವ ಮೂಲಕ ವಿಜಯೋತ್ಸವ ಆಚರಿಸಿದರು.