Oplus_0

ಚಿತ್ತಾಪುರದಲ್ಲಿ ರೂ.1069 ಕೋಟಿ ವೆಚ್ಚದ ಕಾಮಗಾರಿಗಳ ಅಡಿಗಲ್ಲು ಹಾಗೂ ಉದ್ಘಾಟನೆ | ಮೋದಿ ದೇಶದ ಮರ್ಯಾದೆ ಹಾಳು‌‌ ಮಾಡುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ಕಟು‌ಟೀಕೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ನಾವು ದೇಶವನ್ನು ಕಟ್ಟುವ ಕೆಲಸ ಮಾಡುತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದೇಶಾಂಗ ನೀತಿಯಿಂದಾಗಿ ನಮ್ಮ ದೇಶದ ಮರ್ಯಾದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟುವಾಗಿ ಟೀಕಿಸಿದರು.

ಪಟ್ಟಣದ ಸೇಂದಿ ಡಿಪೋ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೂ.1069 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಟ್ರಂಪ್ ಒಬ್ಬ ಡಿಕ್ಟೇಟರ್, ಮೋದಿ ಅವರ ಗುಲಾಮ ಎಂದು ಕಟು ಟೀಕಿಸಿದ ಖರ್ಗೆ, ರಷ್ಯಾದಿಂದ ಈಗ ಒಂದು ತಿಂಗಳ ಮಾತ್ರ ತೈಲ ಖರೀದಿಗೆ ಅಮೆರಿಕ ಅನುಮತಿ ನೀಡಿದೆ. ಅಮೇರಿಕದವರು ಹೇಳಿದಂತೆ ಮೋದಿ ಕೇಳುತ್ತಿದ್ದಾರೆ. ಟ್ರಂಪ್ ಜೊತೆ ಸ್ನೇಹ ಮಾಡಿಕೊಂಡು ನಮ್ಮ ದೇಶವನ್ನು ಗಿರಿವಿ ಇಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಧ್ಯಪ್ರಾಚ್ಯ ನಲ್ಲಿ ನಡೆಯುತ್ತಿರುವ ಯುದ್ದದ ಬಗ್ಗೆ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ, ಜವಾಹರ್ ಲಾಲ್ ನೆಹರು ಪ್ರಧಾನಿಯಾಗಿದ್ದಾಗ ನಾನ್ ಅಲೈನ್ ಮೆಂಟ್ ಒಪ್ಪಂದ ಮಾಡಿಕೊಂಡಿದ್ದರಿಂದ ಅದು ವಿಶ್ವಶಾಂತಿಗೆ ಕಾರಣವಾಗಿತ್ತು. ಆದರೆ, ಮೋದಿ ಈಗ ಮಾಡುತ್ತಿರುವುದೇನು? ಮೋದಿ ಇಸ್ರೇಲ್ ಗೆ ಹೋಗಿ ಬಂದ‌ ನಂತರ ಅದು ಇರಾನ್ ಮೇಲೆ‌ ಬಾಂಬ್ ಹಾಕಿತು. ದೇಶದ ಮಖ್ಯಸ್ಥ ಖೋಮೇನಿ ಯನ್ನು ಅಮೇರಿಕಾ ದವರು ಹತ್ಯೆ ಮಾಡಿದರು.‌ ಒಂದು ದೇಶದ ಮುಖ್ಯಸ್ಥನನ್ನು ಹತ್ಯೆ ಮಾಡಿದರೆ ಆ ದೇಶ ಶಾಂತಿಯಿಂದ ಇರುತ್ತದಯೇ? ಇದು ವಿಶ್ವ ಶಾಂತಿಯಿಂದ ಇರಲು ಸಾಧ್ಯವಾಗುತ್ತದೆಯಾ? ಎಂದು ಖರ್ಗೆ ಪ್ರಶ್ನಿಸಿದರು‌.

ಭಾರತ ದೇಶದ 65% ರೈತರು ಕೃಷಿ ಅವಲಂಬಿತರಾಗಿದ್ದರೆ ಅಮೇರಿಕಾದ ದಲ್ಲಿ 3% ಅವಲಂವಿತರಾಗಿದ್ದಾರೆ. ನಮ್ಮ ದೇಶದ ಉತ್ಪನ್ನಗಳಿಗೆ ಅಮೇರಿಕಾದಲ್ಲಿ ಟ್ಯಾಕ್ಸ್ ಇಲ್ಲ. ಆದರೆ, ಅಮೇರಿಕಾದ ಉತ್ಪನ್ನಗಳ ಮೇಲೆ ಮನಬಂದಂತೆ ಟ್ಯಾಕ್ಸ್ ಹಾಕಲಾಗುತ್ತಿದೆ. ಟ್ರಂಪ್ ನನ್ನ ಸ್ನೇಹಿತ ಎನ್ನುತ್ತಾರೆ. ಆದರೆ, ರಷ್ಯಾದಿಂದ ತೈಲ ಖರೀದಿ ಮಾಡಿದರೆ ನಿಮ್ಮ ಮೇಲೆ ಟ್ಯಾಕ್ಸ್ ಹಾಕುತ್ತೇನೆ ಟ್ರಂಪ್ ಹೇಳುತ್ತಾರೆ. ಟ್ರಂಪ್ ಜೊತೆ ದಿನಾಲೂ ಮಾತನಾಡುತ್ತಿರುವುದಾಗಿ ಮೋದಿ ಹೇಳುತ್ತಾರೆ. ಟ್ಯಾಕ್ಸ್ ಹಾಕುವ ಬಗ್ಗೆನೇ ಮಾತನಾಡುತ್ತಾರ? ಎಫ್ಟಿನ್ ಫೈಲ್ ನಲ್ಲಿ ಯಾರು ಯಾರು ಎಲ್ಲಿ ಹೋಗಿದ್ದರು ಎನ್ನುವ ಮಾಹಿತಿ ಇದೆ ಎನ್ನಲಾಗುತ್ತಿದೆ. ಅದನ್ನು ಇಟ್ಟುಕೊಂಡೆ ಟ್ರಂಪ್ ಮೋದಿಗೆ ಹೆದರಿಸುತ್ತಿದ್ದಾರೆ” ಎಂದರು.

ಕಾಂಗ್ರೆಸ್ ಅಧಿಕಾರದ 75 ವರ್ಷ ಆದರೂ ಕೂಡಾ ನಮ್ಮ‌ ದೇಶದ‌ ತಂಟೆಗೆ ಯಾರೂ ಬಂದಿರಲಿಲ್ಲ. ಪಾಕಿಸ್ತಾನವನ್ನು ಒಡೆದು‌ ಎರಡು‌ ಭಾಗ ಮಾಡಿದರು. ಅವರಿಗೆ ಇದ್ದಂತ ಧೈರ್ಯ ನಿಮಗೇಕಿಲ್ಲ? ಎಂದು ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರ ಮೇಲೆ ಹರಿಹಾಯ್ದರು.

ಬಿಜೆಪಿಯರವರಿಗಂತೂ ಕೆಲಸನೇ ಇಲ್ಲ. ಸೋನಿಯಾ ಗೆ, ರಾಹುಲ್ ಗೆ, ನನಗೆ, ಪ್ರಿಯಾಂಕ್ ಗೆ , ಸಿದ್ದರಾಮಯ್ಯ ಗೆ ಹಾಗೂ ಶಿವಕುಮಾರ್ ಗೆ ಬೈಯ್ಯುವುದೇ ಕೆಲಸವಾಗಿದೆ. ನಮ್ಮ ಸರ್ಕಾರ‌ ಇದ್ದಾಗ ಮಾಡಿರುವ ಕೆಲಸಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಗದಗ ವಾಡಿ ರೈಲ್ವೆ ಲೈನ್, ರಸ್ತೆಗಳು, ಹೈವೈ ಗಳು ಮಾಡಿದ್ದು ನಾವೇ ಹೊರತು ನೀವಲ್ಲ ಎಂದು ಬಿಜೆಪಿ ವಿರುದ್ದ ಟೀಕಿಸಿದರು.

ಆರ್ಟಿಕಲ್ 371 ಜೆ ಜಾರಿಗೆ ತಂದಿದ್ದು ನಾವು. ನಮ್ಮ ಬೇಡಿಕೆಗೆ ಅಂದಿನ ಗೃಹ ಸಚಿವ ಅಡ್ವಾಣಿ ಸ್ಪಂದಿಸಲಿಲ್ಲ ಎಂದು ಅಂದಿನ ಬಿಜೆಪಿಯ ಪ್ರತಿರೋಧವನ್ನು ನೆನಪಿಸಿಕೊಂಡ ಖರ್ಗೆ, ನಾನು ಅಂದಿನ ಸಂದರ್ಭದಲ್ಲಿ ನಮ್ಮ ಪರವಾಗಿರಲು 130 ಜನ ಎಂ.ಪಿಗಳಿಗೆ ಹೇಗೆ ಮನವೊಲಿಸಿದ್ದೇನೆ ಅದು ನನಗೆ ಮಾತ್ರ ಗೊತ್ತು. ಆರ್ಟಿಕಲ್ 371 ಜೆ ನನಗೆ,‌ ನನ್ನ ಮಕ್ಕಳಿಗೆ ಹಾಗೂ ಮೊಮ್ಮಕ್ಕಳಿಗೆ ಅನುಕೂಲವಾಗಲ್ಲ. ಅದು ಅನುಕೂಲವಾಗುವುದು ಜನಸಾಮಾನ್ಯರಿಗೆ. ಇಂದು ಮೆಡಿಕಲ್, ಇಂಜಿನಿಯರಿಂಗ್ ಸೀಟು ಪಡೆದುಕೊಳ್ಳಲು ಅನುಕೂಲವಾಗಿದೆ ಎಂದರು.

ಕಲಬುರಗಿ ಗೆ ವಿಮಾನ ನಿಲ್ದಾಣ ಮಾಡಲು ಶ್ರೀನಿವಾಸ ಸರಡಗಿ ಗ್ರಾಮದ ಜನರು 1,000 ಎಕರೆ ಜಮೀನು ಕೊಟ್ಟಿದ್ದಾರೆ. ಅವರಿಗೆ ಇಲ್ಲಿಂದಲೆ ನಾನು ನಮಸ್ಕಾರ ಮಾಡುತ್ತೇನೆ. ವಿಮಾನ ನಿಲ್ದಾಣವನ್ನು ಖರ್ಗೆ ಜಾಸ್ತಿ ಓಡಾಡುತ್ತಾರೆ ಎಂದು ಬಂದ್ ಮಾಡಲಾಗಿದೆ. ನಾನು ದಿನಾಲು ಬರುತ್ತೇನಾ ? ಎಂದು ಪ್ರಶ್ನಿಸಿದರು.

ನಮ್ಮ ದೇಶದ ಯುವಕರ ಭವಿಷ್ಯ ಉಜ್ವಲವಾಗಬೇಕಾದರೆ ಯೋಜನೆಗಳು ಬರಬೇಕು ಹೇಳಿದ ಖರ್ಗೆ, ಯುವಕರಲ್ಲಿ ಜಗಳ ಹಚ್ಚುವುದು ಹಾಗೂ ದ್ವೇಷ ಹರಡುವುದೇ‌ ಇವರ ಕೆಲಸವಾಗಿದೆ. ಶ್ರೀಮಂತರು ಹೇಗೋ ಬಚಾವಾಗುತ್ತಾರೆ ಬಡವರು ಎಲ್ಲಿ ಹೋಗಬೇಕು. ? ಬಿಜೆಪಿ ಹಾಗೂ ಆರ್ ಎಸ್ ಎಸ್ ನ ಕೆಲವರು ಬ್ರಿಟಿಷ್‌ ರ ಕೆಳಗೆ ಕೆಲಸ ಮಾಡುತ್ತಿದ್ದವರು. ಅವರು‌ ದೇಶದ ಸ್ವಾತಂತ್ರ್ಯಕ್ಕಾಗಿ ಹನಿ‌ ರಕ್ತ ಹರಿಸಿಲ್ಲ. ನಾನು ಯಾರಿಗೂ ಬೈಯುತ್ತಿಲ್ಲ. ನಮ್ಮನ್ನು ಟೀಕಿಸುವವರು ಬಿಜೆಪಿ ಹಾಗೂ ಆರ್ ಎಸ್ ಎಸ್ ನವರು. ಅವರ ಬಗ್ಗೆ ನೀವು ಎಚ್ಚರದಿಂದ ಇರಬೇಕು ಅವರ ಮಾತಿಗೆ ಮರುಳಾಗಬಾರದು ಎಂದರು.

ಚಿತ್ತಾಪುರದ ಒಬ್ಬ ಶಾಸಕ ಇಡೀ ದೇಶದ ಜನರ ಸಮಸ್ಯೆ ಬಗ್ಗೆ ಧ್ವನಿ ಎತ್ತಿ ಮಾತನಾಡುತ್ತಿರುವುದು ನೋಡಿದರೆ‌ ಹೆಮ್ಮೆ ಎನಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಕೊಂಡಾಡಿದರು.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನೀವು ಸದಾ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಗೆ ಇನ್ನು ಇಪ್ಪತ್ತು ಸೀಟ್ ಬಂದಿದ್ದರೆ ಮೋದಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ನಮ್ಮ ನಿರೀಕ್ಷೆಯಂತೆ ಸೀಟು ಬರಲಿಲ್ಲ ಅದು ನಮ್ಮ ದುರ್ದೈವ. ನಮ್ಮ ಸೋಲನ್ನು‌ ಬಿಜೆಪಿಯವರು ಟೀಕಿಸುತ್ತಾರೆ. ಆದರೆ, ನಾವು ಜನರ ಪ್ರೀತಿ ವಿಶ್ವಾಸದಿಂದ ಮುಂದುವರೆಯುತ್ತೇವೆ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ

ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರ್ಯಕ್ಷಮತೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಡಿಸಿಎಂ, ಮಲ್ಲಿಕಾರ್ಜುನ ಖರ್ಗೆ ಸಾಹೇಬರ ಮಾರ್ಗದರ್ಶನದಲ್ಲಿ‌ ಪ್ರಿಯಾಂಕ್ ಖರ್ಗೆ ಉತ್ತಮ‌ ಕೆಲಸ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದರು.

ಮರಕ್ಕೆ ಬೇರು ಮುಖ್ಯವಾದಂತೆ ಮನುಷ್ಯನಿಗೆ ನಂಬಿಕೆ ಮುಖ್ಯ. ಖರ್ಗೆ ಸಾಹೇಬರ ಕೆಲಸ ಹಾಗೂ ಸಾಧನೆ ಮುಂದಿನ ಶತಮಾನಕ್ಕೆ ಕೆಲಸವಾಗುವಂತೆ ಅಡಿಪಾಯ ಮಾಡಿಕೊಟ್ಟಿದ್ದಾರೆ. ಕ-ಕ ಜನರ ಬದುಕಿಗೆ ಅವರು ಕೊಟ್ಟಂತ ಕೆಲಸಗಳು ಇಡೀ ದೇಶದ ಜನರಿಗೆ ಗೊತ್ತು ಎಂದರು.

ಚಿತ್ತಾಪುರಕ್ಕೆ ಇಂದು ಸುಮಾರು 2000 ಮನೆಗಳನ್ನು ಕೊಳಚೆ ನಿರ್ಮೂಲನಾ ಮಂಡಳಿ ಕೊಟ್ಟಿದೆ. ರಾಜ್ಯದ 400 ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತೇವೆ ಆ ಮೂಲಕ ನೀರಾವರಿ ಗ್ಯಾರಂಟಿ ನೀಡುತ್ತಿದ್ದೇವೆ ಎಂದರು.

ಶಿಕ್ಷಣ ಇಲಾಖೆ ಅಡಿಯಲ್ಲಿ ರಾಜ್ಯದಲ್ಲಿ 2000 ಕೆಪಿ ಶಾಲೆಗಳನ್ನು ಕೊಡಲು ತೀರ್ಮಾನ ಮಾಡಿದ್ದೇವೆ. ಕ-ಕ ಭಾಗದಲ್ಲಿ 330 ಶಾಲೆಗಳನ್ನು ಸ್ಥಾಪಿಸಲಾಗುತ್ತದೆ. ಜೊತೆಗೆ 2.50 ಲಕ್ಷ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ತುಂಬಲಾಗುವುದು. ಸಧ್ಯ 50,000 ಕ್ಕೂ ಅಧಿಕ ಖಾಲಿ ಹುದ್ದೆ ತುಂಬಲು ಈಗಾಗಲೇ ಕ್ರಮವಹಿಸಲಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನರಿಗೆ ನೆಮ್ಮದಿ ಜೀವನ ನಡೆಸಲು ಸರ್ಕಾರ ಪ್ರತಿ ವರ್ಷ ರೂ‌. 52,000 ಕೋಟಿಗೂ ಅಧಿಕ ವೆಚ್ಚ ಮಾಡುತ್ತಿದೆ. ಇದು ನಮ್ಮ ಬದ್ದತೆ ಹಾಗೂ ನಮ್ಮ ಸರ್ಕಾರದ ಬದ್ದತೆಯಾಗಿದೆ ಎಂದರು.

ವಿಶ್ವ ಮಹಿಳಾ ದಿನದಂದು ಸಿಲಿಂಡರ್ ಬೆಲೆ ಏರಿಕೆ, ಇದು ಅಚ್ಚೇ‌ದಿನ್- ಕೇಂದ್ರದ ವಿರುದ್ದ ಹರಿಹಾಯ್ದ ಸಚಿವ ಪ್ರಿಯಾಂಕ್ ಖರ್ಗೆ

ಇಂದು ವಿಶ್ವ ಮಹಿಳಾ ದಿನವಾಗಿದೆ. ಇದೇ ದಿನದಂದೇ ಕೇಂದ್ರ ಸರ್ಕಾರ ಅಡುಗೆ ಅನಿಲದ ಬೆಲೆ ಏರಿಸಿದೆ. ಇದು ಅಚ್ಛೇ ದಿನ್ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಜನರು ನೆಮ್ಮದಿಯ ಹಾಗೂ ಸ್ವಾಭಿಮಾನದ ಜೀವನ‌ ನಡೆಸುತ್ತಿದ್ದಾರೆ. ನಿಮ್ಮ ದುಡ್ಡನ್ನು ಗ್ಯಾರಂಟಿ ಯೋಜನೆಗಳ ಮೂಲಕ ನಿಮಗೆ ವಾಪಸ್ ಕೊಟ್ಟರೆ, ಬಿಜೆಪಿಯವರು ಟೀಕಿಸುತ್ತಿದ್ದಾರೆ. ಅವರಿಗೆ ಜನರ ದುಡ್ಡು ಜನರಿಗೆ ಮರುಬಳಕೆಯಾಗುವುದು ಬೇಕಾಗಿಲ್ಲ ಎಂದು ಪ್ರಿಯಾಂಕ್ ಹರಿಹಾಯ್ದರು.

ಚುನಾವಣೆ ಸಂದರ್ಭದಲ್ಲಿ ನಾನು ಕೊಟ್ಟಿರುವ ಭಾಷೆಯಂತೆ ಮನೆಯ ಮಗನಂತೆ ಕೆಲಸ ಮಾಡುತ್ತಿದ್ದೇನೆ. ಇಂದು ರೂ 1069 ಕೋಟಿ ವೆಚ್ಚದ ಕಾಮಗಾರಿಗಳನ್ನು ಜಾರಿಗೊಳಿಸಲಾಗುತ್ತಿದೆ. ಸಣ್ಣ ಹಳ್ಳಿಗೆ ಒಂದು ಕೋಟಿ ಹಾಗೂ ದೊಡ್ಡ ಹಳ್ಳಿಗೆ 3.50 ಕೋಟಿ ಅನುದಾನ ಬಳಕೆಯಾಗಲಿದೆ ಎಂದು ಡಿಸಿಎಂ ಅವರಿಗೆ ಮನವರಿಕೆ ಮಾಡಿದರು.

ರಾಜ್ಯದ‌ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಂತರ  ನಾನೇ ಟಾರ್ಗೆಟ್ ಆಗಿದ್ದೇನೆ ಎಂದು‌ ಕೆಲವರು ಹೇಳುತ್ತಾರೆ. ಚಿತ್ತಾಪುರದ ಜನರ ಆಶೀರ್ವಾದ ಇರುವವರೆಗೆ ನನಗೆ ಏನು ಆಗುವುದಿಲ್ಲ ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ, ಶಾಸಕರಾದ ಕನೀಜ್ ಫಾತೀಮಾ, ಎಂ.ವೈ.ಪಾಟೀಲ, ಚೆನ್ನಾರೆಡ್ಡಿ ತುನ್ನೂರ್, ಅಲ್ಲಂಪ್ರಭು ಪಾಟೀಲ, ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಉಣ್ಣೆ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರತೂರ, ತೊಗರಿ ಮಂಡಳಿ ಅಧ್ಯಕ್ಷ ಮಹೀಮೂದ್ ಸಾಹೇಬ್, ಕೆಕೆಆರ್’ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಕಾಡಾ ಅಧ್ಯಕ್ಷ ಅಬ್ದುಲ್ ರಶೀದ್, ಜೆಸ್ಕಾಂ ಅಧ್ಯಕ್ಷ ಪ್ರವೀಣ ಹರವಾಳ, ಗ್ಯಾರಂಟಿ ಯೋಜನೆಗಳ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಎಸ್ಪಿ ಅಡ್ಡೂರು ಶ್ರೀನಿವಾಸಲು, ಎಎಸ್ಪಿ ಮಹೇಶ್ ಮೇಘಣ್ಣವರ್, ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್, ತಹಸೀಲ್ದಾರ್ ನಾಗಯ್ಯ ಹಿರೇಮಠ, ಕಾಂಗ್ರೆಸ್ ಮುಖಂಡರಾದ ಭೀಮಣ್ಣ ಸಾಲಿ, ರಮೇಶ್ ಮರಗೋಳ, ನಾಗರೆಡ್ಡಿ ಪಾಟೀಲ ಕರದಾಳ, ಶಿವಾನಂದ ಪಾಟೀಲ, ಸುನೀಲ್ ದೊಡ್ಡಮನಿ, ಲಚ್ಚಪ್ಪ ಜಮಾದಾರ್, ಮನ್ಸೂರ್ ಪಟೇಲ್, ನೀಲಕಠರಾವ್ ಮುಲಗೆ, ಶ್ರೀನಿವಾಸ ಸಗರ, ವೀರಣ್ಣಗೌಡ ಪರಸರೆಡ್ಡಿ, ರಾಜೇಶ್ ಗುತ್ತೇದಾರ, ಶಿವರುದ್ರಪ್ಪ ಭೀಣ್ಣಿ, ಜಯಪ್ರಕಾಶ್ ಕಮಕನೂರ, ಚಂದ್ರಶೇಖರ ಕಾಶಿ, ಮುಕ್ತಾರ್ ಪಟೇಲ್, ಶೀಲಾ ಕಾಶಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ನಾಮದೇವ ರಾಠೋಡ, ನಾಗಯ್ಯ ಗುತ್ತೇದಾರ, ಯಲ್ಲಾಲಿಂಗ ಪೂಜಾರಿ, ಶರಣು ಡೋಣಗಾಂವ, ದೇವು ಯಾಬಾಳ, ಸಂಜಯ್ ಬುಳಕರ್, ಜಗದೀಶ್ ಚವ್ಹಾಣ, ಹಣಮಂತ ಸಂಕನೂರ ಸೇರಿದಂತೆ ಇತರರು ಇದ್ದರು.

ಇದೇ ಸಂದರ್ಭದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ, ಲ್ಯಾಪಟ್ಯಾಪ್, ಹೊಲಿಗೆ ಯಂತ್ರ, ಪ್ರೋತ್ಸಾಹ ಧನ, ಸೇಫ್ಟಿ ಕಿಟ್ ಸೇರಿದಂತೆ ಇತರೆ ಸೌಲಭ್ಯಗಳ ಚೆಕ್ ವಿತರಣೆ ಮಾಡಲಾಯಿತು. ಜಿಪಂ ಸಿಇಒ ಭಂವರಸಿಂಗ್ ಮೀನಾ ಸ್ವಾಗತಿಸಿದರು, ಸೇಡಂ ಎಸಿ ಪ್ರಭು ರೆಡ್ಡಿ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!