ಚಿತ್ತಾಪುರದಲ್ಲಿ ಅಪರಾಧ ತಡೆ ಮಾಸಾಚರಣೆ, ಅಟೋ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸಿ: ಪಿಎಸ್ಐ ಶ್ರೀಶೈಲ್ ಅಂಬಾಟಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಆಟೊ ಚಾಲಕರು ಕಡ್ಡಾಯವಾಗಿ ತಮ್ಮ ವಾಹನಗಳ ಆರ್.ಸಿ, ವಿಮೆ, ಎಮಿಷನ್ ಟೆಸ್ಟ್ ಮತ್ತಿತರ ದಾಖಲೆಗಳನ್ನು ಇಟ್ಟುಕೊಳ್ಳಬೇಕು, ಸಮವಸ್ತ್ರ ಧರಿಸಬೇಕು. ಚಾಲನಾ ಪರವಾನಗಿ ಹೊಂದಿರಬೇಕು ಸೇರಿದಂತೆ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಪಿಎಸ್ಐ ಶ್ರೀಶೈಲ್ ಅಂಬಾಟಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಪೊಲೀಸ್ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಟೊಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಲೇಬೇಕು. ಅಕಸ್ಮಾತ್ ಅಪಘಾತವಾದರೆ ವಿಮೆ ಇಲ್ಲದಿದ್ದರೆ ತೀವ್ರ ತೊಂದರೆಯಾಗುತ್ತದೆ ಎಂದು ಚಾಲಕರಿಗೆ ಮನವರಿಕೆ ಮಾಡಿದರು.
ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ನಡೆದುಕೊಳ್ಳಬೇಕು. ನಿಗದಿತ ಸ್ಥಳಗಳಲ್ಲಿ ಮಾತ್ರ ವಾಹನಗಳ ಪಾರ್ಕಿಂಗ್ ಮಾಡಬೇಕು. ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅಪರಾಧಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು, ಅಪರಾಧಗಳು ಆಗದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲು ಪ್ರತಿ ವರ್ಷ ಡಿಸೆಂಬರ್ ಮಾಹೆಯನ್ನು ಅಪರಾಧ ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ದತ್ತು ಜಾನೆ, ರವಿ, ಬಸವರಾಜ ಸೇರಿದಂತೆ ಅಟೋ ಚಾಲಕರು ಉಪಸ್ಥಿತರಿದ್ದರು.