ಭೇಟಿ ಬಚಾವೋ – ಭೇಟಿ ಪಢಾವೋ ದಶಮಾನೋತ್ಸವ, ಮಹಿಳೆಯರನ್ನು ಗೌರವ ಸ್ಥಾನದಲ್ಲಿ ಇರಿಸಿದ್ದರೂ ದೌರ್ಜನ್ಯ ನಿಲ್ಲದಕ್ಕೆ ನ್ಯಾಯಾಧೀಶರ ಕಳವಳ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮಹಿಳೆಯರನ್ನು ದೇವತೆಯ ಸ್ವರೂಪದಂತೆ ಗಂಗಾ, ಸರಸ್ವತಿ, ಲಕ್ಷ್ಮೀ ಎಂದು ವಿವಿಧ ನಾಮಗಳಿಂದ ಕರೆದು ಪೂಜಿಸುತ್ತೇವೆ ಉನ್ನತ ಸ್ಥಾನ ನೀಡಿದ್ದೇವೆ ಆದರೂ ದೌರ್ಜನ್ಯ, ಅತ್ಯಾಚಾರ ಹಲ್ಲೆಗಳು ನಿಂತಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕಿಶನ್ ಮಾಡಲಗಿ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ ಮತ್ತು ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಭೇಟಿ ಬಚಾವೋ ಭೇಟಿ ಪಢಾವೋ ಕಾರ್ಯಕ್ರಮ 10 ವರ್ಷ ಪೂರ್ಣಗೊಂಡ ನೆನಪಿಗಾಗಿ ಮಹಿಳೆ ಮತ್ತು ಮಕ್ಕಳ ಸುರಕ್ಷತೆ, ಭದ್ರತೆ ಮತ್ತು ಸಬಲೀಕರಣ ಸಮಾರಂಭ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸಿವಿಲ್ ನ್ಯಾಯಾಧೀಶ ಸಂತೋಷಕುಮಾರ ದೈವಜ್ಞ, ಸರ್ಕಾರಿ ಸಹಾಯಕ ಅಭಿಯೋಜಕ ಅಂಜನಾದೇವಿ, ನ್ಯಾಯವಾದಿ ಅಯ್ಯಣ್ಣ ಎಂ. ಅವಂಟಿ, ತಾ.ಪಂ. ವ್ಯವಸ್ಥಾಪಕ ಅಮೃತ ಕೆ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ತಾಲೂಕು ಆರೋಗ್ಯಾಧಿಕಾರಿ ಸಯ್ಯದ್ ಖಾದ್ರಿ, ಅರಣ್ಯಾಧಿಕಾರಿ ವಿಜಯಕುಮಾರ್ ಬಡಿಗೇರ್, ಜಿಲ್ಲಾ ಮಿಷನ್ ಶಕ್ತಿ ಸಂಯೋಜಕಿ ಲಕ್ಷ್ಮೀ, ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಇತರರು ಇದ್ದರು.
10 ನೇ ತರಗತಿಯಲ್ಲಿ ಉತ್ತಮ ಫಲಿತಾಂಶ ಪಡೆದ ಹತ್ತು ಮಕ್ಕಳಿಗೆ ಪ್ರಮಾಣ ಪತ್ರ ನೀಡಿ ಸತ್ಕರಿಸಲಾಯಿತು. ವಿಭಾಗೀಯ ಮಟ್ಟದ ಖೋ – ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬಾಲಕಿಯರನ್ನು ಸನ್ಮಾನಿಸಲಾಯಿತು. ಆಸ್ಪತ್ರೆಯಲ್ಲಿದ್ದ ಹೆಣ್ಣು ಮಗುವಿನ ತಾಯಂದರಿಗೆ ಸಸಿ ವಿತರಿಸಲಾಯಿತು. ಸಿಡಿಪಿಓ ಆರತಿ ತುಪ್ಪದ ಪ್ರಾಸ್ತಾವಿಕ ಮಾತನಾಡಿದರು. ರಮಾದೇವಿ ಸ್ವಾಗತಿಸಿದರು, ಕವಿತಾ ಪಾಟೀಲ್ ನಿರೂಪಣೆ ಮಾಡಿದರು, ಶೋಭಾ ಕಾಶೆಟ್ಟಿ ವಂದಿಸಿದರು.