ಚಿತ್ತಾಪುರದಲ್ಲಿ ಕಾಂಗ್ರೆಸ್ ಮುಖಂಡರಿಂದ ಮಿಂಚಿನ ಪ್ರತಿಭಟನೆ, ಛಲವಾದಿ ನಾರಾಯಣಸ್ವಾಮಿ ಕ್ಷಮೆಯಾಚನೆಗೆ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಲಬುರಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆನೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಾಯಿಗೆ ಹೋಲಿಕೆ ಮಾಡಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಟ್ಟಣದಲ್ಲಿ ಮಿಂಚಿನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ತಿರಂಗಾ ಯಾತ್ರೆಯಲ್ಲಿ ಭಾಗವಹಿಸಲು ಬುಧವಾರ ಚಿತ್ತಾಪುರ ಪಟ್ಟಣಕ್ಕೆ ಆಗಮಿಸಿದ ಛಲವಾದಿ ನಾರಾಯಣಸ್ವಾಮಿ ಪ್ರವಾಸಿ ಮಂದಿರದಲ್ಲಿ ಇರುವ ವಿಷಯ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರು ಪ್ರವಾಸಿ ಮಂದಿರಕ್ಕೆ ಮುತ್ತಿಗೆ ಹಾಕಿ ಛಲವಾದಿ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಈ ಮಧ್ಯೆ ಕಾಂಗ್ರೆಸ್ ಮುಖಂಡರು ಪ್ರವಾಸಿ ಮಂದಿರದ ಗೇಟ್ ತೆರೆದು ಒಳನುಗ್ಗುವ ಪ್ರಯತ್ನ ಮಾಡಿದಾಗ ಪೊಲೀಸ್ ಅಧಿಕಾರಿಗಳು ಪ್ರತಿಭಟನೆ ನಿರತ ಕಾಂಗ್ರೆಸ್ ಕಾರ್ಯಕರ್ತರನ್ನು ಹೊರಹಾಕಿ ಗೇಟ್ ಬಂದ್ ಮಾಡಿದರು. ಗೇಟ್ ಮುಂದೆ ಕುಳಿತುಕೊಂಡು ಕಾಂಗ್ರೆಸ್ ಮುಖಂಡರು ಹೋರಾಟ ಮುಂದುವರೆಸಿದ್ದಾರೆ. ಪ್ರವಾಸಿ ಮಂದಿರದಲ್ಲಿದ್ದ ಛಲವಾದಿ ನಾರಾಯಣಸ್ವಾಮಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕ್ಷಮೆ ಯಾಚಿಸಬೇಕೆಂದು ಪಟ್ಟುಹಿಡಿದಿದ್ದಾರೆ.
ಈ ಹೋರಾಟ ಮುಂದೆ ಯಾವ ರೂಪ ಪಡೆಯಲಿದೆ ಎಂಬುದು ಕಾದುನೋಡಬೇಕಿದೆ. ಸ್ಥಳದಲ್ಲಿ ಸಿಪಿಐ ಚಂದ್ರಶೇಖರ ತಿಗಡಿ, ನಟರಾಜ್ ಲಾಡೆ, ಪಿಎಸ್ಐಗಳಾದ ಶ್ರೀಶೈಲ್ ಅಂಬಾಟಿ, ತಿಮ್ಮಯ್ಯ ಸೇರಿದಂತೆ ಪೊಲೀಸರು ಸ್ಥಳದಲ್ಲಿದ್ದಾರೆ.