ಚಿತ್ತಾಪುರದಲ್ಲಿ ಮನೆ ಗ್ಯಾಸ್ ಗಾಗಿ ಪರದಾಟ, ಮೌನವಹಿಸಿದ ಇಲಾಖೆ, ಸಾರ್ವಜನಿಕರ ಆಕ್ರೋಶ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಗುರು ಗ್ಯಾಸ್ ಏಜೆನ್ಸಿ ಅವರು ಗ್ಯಾಸ್ ಸಿಲಿಂಡರ್ ವಿತರಣೆ ಮಾಡದೇ ಇರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾಸ್ ಗಾಗಿ ಮೊಬೈಲ್ ನಲ್ಲಿ ಬುಕ್ ಮಾಡಿ ಮುರ್ನಾಲ್ಕು ದಿನ, ಒಂದು ವಾರವಾದರೂ ವಿತರಣೆ ಮಾಡದೇ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.
ಜನವರಿ 1 ಕ್ಕೆ ಗ್ಯಾಸ್ ಬುಕ್ ಮಾಡಿದ್ದೇವೆ ಆದರೆ ಇಲ್ಲಿವರೆಗೆ ವಿತರಣೆ ಆಗಿಲ್ಲ ಕೇಳಿದರೆ ಇಂದು ಸಂಜೆ, ನಾಳೆ, ಇನ್ನೂ ಎರಡು ದಿನ ಅಂತ ಹೇಳಿ, ಕುಂಟು ನೆಪ ಹೇಳಿ ನಮ್ಮನ್ನೂ ವಿನಾಕಾರಣ ಅಲೆದಾಡಿಸುತ್ತಿದ್ದಾರೆ ಎಂದು ಇಟಗಾ ಗ್ರಾಮದ ಪ್ರಭು ತಳವಾರ ತಮ್ಮ ನೋವನ್ನು ತೋಡಿಕೊಂಡರು.
ಈ ಕುರಿತು ಗುರು ಗ್ಯಾಸ್ ಏಜೆನ್ಸಿ ಅವರಿಗೆ ವಿಚಾರಿಸಿದಾಗ, ಈ ಮೊದಲು ಮಹಾರಾಷ್ಟ್ರದಿಂದ ಗ್ಯಾಸ್ ಸರಬರಾಜು ಆಗುತ್ತಿತ್ತು ಈಗ ಆಂದ್ರಪ್ರದೇಶ ರಾಜ್ಯದಿಂದ ಸರಬರಾಜು ಆಗುತ್ತಿದೆ ಹೀಗಾಗಿ ತೊಂದರೆ ಆಗಿದೆ ಎಂದು ಉತ್ತರ ನೀಡಿದ್ದಾರೆ. ಇಂದು ಸಂಜೆ ಲೋಡ್ ಬರಲಿದೆ ನಾಳೆಯಿಂದ ಮನೆಗಳಿಗೆ ಸರಬರಾಜು ಆಗಲಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಬೆಲೆ ಏರಿಕೆ ಸಮಯದಲ್ಲಿ ಗ್ಯಾಸ್ ಬೆಲೆ ಏರಿಕೆಯಾಗಿದೆ ಅದರಲ್ಲೂ ಗ್ಯಾಸ್ ವಿತರಕರು 20 ರಿಂದ 30 ರೂ. ಹೆಚ್ಚುವರಿಯಾಗಿ ಹಣ ತೆಗೆದುಕೊಂಡು ಇನ್ನಷ್ಟು ಭಾರ ಹಾಕುತ್ತಿದ್ದಾರೆ, ಫಲಾನುಭವಿಗಳಿಂದ ಹೆಚ್ಚುವರಿ ಹಣ ತೆದುಕೋಳ್ಳಬಾರದು ಎಂದು ನಿಯಮ ಇದ್ದರೂ ಸಹ ಸರ್ವೀಸ್ ಚಾರ್ಜ್ ಅಂತ ಅಕ್ರಮ ಹಣ ವಸೂಲಿ ಮಾಡುತ್ತಿದ್ದಾರೆ ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಮೌನವಹಿಸಿದ್ದಾರೆ.
ಈ ಕೂಡಲೇ ತ್ವರಿತವಾಗಿ ಮನೆಗಳಿಗೆ ಗ್ಯಾಸ್ ವಿತರಣೆ ಮಾಡುವ ಕಡೆ ಗ್ಯಾಸ್ ಏಜೆನ್ಸಿ ಅವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ ಅಲ್ಲಿವರೆಗೆ ಕಾದುನೋಡಬೇಕಿದೆ.