ಚಿತ್ತಾಪುರದಲ್ಲಿ ಪೊಲೀಸ್ ನಾಟಕ, ಇದರ ಹಿಂದೆ ಪ್ರಿಯಾಂಕ್ ಖರ್ಗೆ ಪಿತೂರಿ: ಛಲವಾದಿ ನಾರಾಯಣಸ್ವಾಮಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಚಿತ್ತಾಪುರದಲ್ಲಿ ಪೊಲೀಸರು ನನ್ನ ವಿರುದ್ಧ ನಾಟಕ ಆಡಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಿಡಿ ಕಾರಿದರು.
ಸಚಿವ ಪ್ರಿಯಾಂಕ್ ಖರ್ಗೆ ದೌರ್ಜನ್ಯ, ಗೂಂಡಾಗಿರಿ ಮತ್ತು ಸಂವಿಧಾನ ವಿರೋಧಿ ನಡೆಯನ್ನು ವಿರೋಧಿಸಿ ಶನಿವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ವೃತ್ತದ ಬಳಿ ಬಿಜೆಪಿ ಹಮ್ಮಿಕೊಂಡಿದ್ದ “ಕಲಬುರ್ಗಿ ಚಲೋ” ಬೃಹತ್ ಹೋರಾಟ ಸಮಾವೇಶದಲ್ಲಿ ಅವರು ಮಾತನಾಡಿದರು.
ಅಂದು ನನ್ನ ಕಾರ್ಯಕ್ರಮ ಇತ್ತು. ಬೇಗ ಹೋದುದರಿಂದ ಚಿತ್ತಾಪುರ ಐ.ಬಿ.ಗೆ ಹೋಗಿದ್ದೆ. ಆಗ ಗದ್ದಲ ಮಾಡಲು ಸಿದ್ಧತೆ ನಡೆದ ಸಂದೇಶ ಬಂತು ಎಂದು ವಿವರಿಸಿದರು.
ಚಿತ್ತಾಪುರದಲ್ಲಿ 400 ಜನರು ನಮ್ಮವರು ಹೊರಗಡೆ ಇದ್ದರು. ಆರಂಭದಲ್ಲಿ ನಮ್ಮ ವಿರುದ್ಧ 20 ಜನ ಇದ್ದರು. ಅದು 25 ಆಯಿತು. 40 ಆಯಿತು. 300-400 ಪೊಲೀಸರು ಇದ್ದರೂ ಅವರನ್ನು ಹೊರಕ್ಕೆ ಕಳಿಸಲಿಲ್ಲ ಎಂದು ಟೀಕಿಸಿದರು. ನೀನು ಅತ್ತ ಹಾಗೆ ಮಾಡು, ನಾನು ಸತ್ತ ಹಾಗೆ ಮಾಡುವೆ ಎಂಬ ನಾಟಕ ಆಡಿದ್ದರು. ಇದರ ಹಿಂದಿನ ಪಿತೂರಿ ಪ್ರಿಯಾಂಕ್ ಖರ್ಗೆ ಅವರದೇ ಎಂದು ಆರೋಪಿಸಿದರು.
ಪೊಲೀಸರು ನಮ್ಮ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಲು ಮುಂದಾಗಿದ್ದರು. ಪೊಲೀಸರು ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕೆಂದು ಆಗ್ರಹಿಸಿದರು. ಗುಲಾಮಗಿರಿ, ಬೂಟ್ ನೆಕ್ಕುವ ಕೆಲಸ ಮಾಡಬಾರದು ಎಂದು ಎಚ್ಚರಿಸಿದರು.
ಅಪ್ಪಟ ದಲಿತ ಯಾರಾದರೂ ಇದ್ದರೆ ಅದು ಛಲವಾದಿ ನಾರಾಯಣಸ್ವಾಮಿ. ಚಾಪೆ ಮೇಲೆ ಮಲಗಿದ್ದೇನೆ, ಚಾಪೆ ಇಲ್ಲದೆ ಮಣ್ಣಿನ ಮೇಲೆ ಮಲಗಿದ್ದೇನೆ, ಕೆರೆ ಕುಂಟೆಗಳ ನೀರು ಕುಡಿದಿದ್ದೇನೆ, ಕೊಟ್ಟ ತಂಗಳು ತಿಂದಿದ್ದೇನೆ, ನಾನು ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿದವನಲ್ಲ ಎಂದು ಸ್ಪಷ್ಟಪಡಿಸಿದರು. ಮಲ್ಲಿಕಾರ್ಜುನ ಖರ್ಗೆಯವರಿಗೆ ಹಿಂದೆ ಕಷ್ಟ ಇದ್ದಿರಬಹುದು ಎಂದರಲ್ಲದೇ, ನನಗೀಗ ಹಕ್ಕುಚ್ಯುತಿ ಆಗಿದೆ ಎಂದರು.
ನಾನು ದಲಿತ ಬಲಿತ ಅಲ್ಲ, ಆಸ್ತಿ ಮಾಡಿಲ್ಲ, ಅಧಿಕಾರ ಅನುಭವಿಸಿಲ್ಲ. 40 ವರ್ಷ ಕಾಂಗ್ರೆಸ್ಸಿನಲ್ಲಿ ದುಡಿದೆ. ಗುರುಮಿಠಕಲ್‍ನಲ್ಲಿ 9 ಬಾರಿ ಗೆದ್ದಿದ್ದಾರೆ. ಅಲ್ಲಿ ಒಬ್ಬ ದಲಿತ ನಾಯಕ ಹುಟ್ಟಿದ್ದಾನಾ ಎಂದು ಕೇಳಿದರು. ನೀವು ನಡೆದ ಕಡೆ ಹುಲ್ಲೂ ಹುಟ್ಟುವುದಿಲ್ಲ ಎಂದರು. ನಿಮ್ಮನ್ನು ಹೊತ್ತು ತಿರುಗಿ ನಿಮ್ಮ ಹೆಸರು ಎಲ್ಲೆಡೆ ಹೇಳುವಂತೆ ಮಾಡಿದ್ದು ನಾನು ಎಂದು ನೆನಪಿಸಿಕೊಟ್ಟರು.
ಖರ್ಗೆಯವರು ಮುಖ್ಯಮಂತ್ರಿ ಆಗಬೇಕೆಂದು ರಾಹುಲ್ ಗಾಂಧಿಯವರಿಗೆ ಮನವಿಪತ್ರ ಕೊಟ್ಟಿದವರು ನಾವು. ದಲಿತ ಎಂಬ ಹೆಸರಿನಲ್ಲಿ ಮುಖ್ಯಮಂತ್ರಿ ಪದವಿ ಬೇಡ ಎಂದವರಲ್ಲವೇ ನೀವು? ಹಾಗಿದ್ದರೆ ದಲಿತರ ಕ್ಷೇತ್ರದಲ್ಲಿ ನಿಮ್ಮ ಸ್ಪರ್ಧೆ ಯಾಕೆ ಎಂದು ಪ್ರಶ್ನೆ ಮಾಡಿದರು.
ಎಷ್ಟು ದಿನ ಸ್ವಾಮೀ ನಿಮ್ಮ ಅಧಿಕಾರ. ನಾವೂ ನೋಡುತ್ತೇವೆ. ಪ್ರಿಯಾಂಕಣ್ಣ, ನನ್ನ ರಾಜಕಾರಣ ಪ್ರವೇಶ ಮತ್ತು ನೀವು ಹುಟ್ಟಿದ ವರ್ಷ ಒಂದೇ. ನೀವು 4 ಸಾರಿ ಕಾಂಗ್ರೆಸ್ ಬಿಫಾರಂ ಪಡೆದರೆ ನಾನ್ಯಾಕೆ ಪಡೆಯಲು ಸಾಧ್ಯವಾಗಿಲ್ಲ? ತಮ್ಮ ಅಪ್ಪ ದೊಡ್ಡ ನಾಯಕರು. ಅದಕ್ಕಾಗಿ ಬಿ ಫಾರಂ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಖರ್ಗೆ ಎಂಬ ಹೆಸರು ಇಲ್ಲದಿದ್ದರೆ ಪ್ರಿಯಾಂಕ್‍ಗೆ, ಮಂಡಲ ಪಂಚಾಯಿತಿಯಲ್ಲೂ ಗೆಲ್ಲಲಾಗದು ಎಂದು ಟೀಕಿಸಿದರು. ನೀವು 3 ಸಾರಿ ಸಚಿವರಾಗಿದ್ದೀರಿ. ಇದೇ ನಮ್ಮ ಸಮಾಜದ ಎಸ್.ಎಂ. ನಾರಾಯಣಸ್ವಾಮಿ ಬಂಗಾರಪೇಟೆ 4 ಸಾರಿ ಗೆದ್ದರೂ ಯಾಕೆ ಸಚಿವರಾಗಿಲ್ಲ ಎಂದು ಕೇಳಿದರು. 3 ಸಾರಿ ಗೆದ್ದ ಪ್ರಸಾದ್ ಅಬ್ಬಯ್ಯ ಯಾಕೆ ಸಚಿವರಾಗಿಲ್ಲ? 3 ಸಾರಿ ಗೆದ್ದ ಶಿವಣ್ಣ ಆನೇಕಲ್ ಯಾಕೆ ಮಂತ್ರಿ ಆಗಿಲ್ಲ ಎಂದು ಪ್ರಶ್ನಿಸಿದರು. ಅವರೆಲ್ಲರೂ ಅರ್ಹರಲ್ಲವೇ? ಅಜಯ್ ಸಿಂಗ್ ನಿಮ್ಮಷ್ಟೇ ಗೆದ್ದವರಲ್ಲವೇ? ಅವರಪ್ಪ ಇದ್ದರೆ ಬಿಡುತ್ತಿದ್ದರೇ? ಅವರನ್ನು ತುಳಿದು ಬಿಸಾಕಿದ್ದೀರಲ್ಲವೇ ಎಂದು ಕೇಳಿದರು. ಹೀಗೆ ಎಷ್ಟೋ ಜನರನ್ನು ತುಳಿದಿರಿ. ನಮ್ಮನ್ನೂ ತುಳಿದಿರಿ ಎಂದು ಟೀಕಿಸಿದರು.
ಕಾಂಗ್ರೆಸ್ಸಿನ ದಲಿತರು ಬಾಯಿ ಬಿಡಲಾರದ ಪರಿಸ್ಥಿತಿಯಲ್ಲಿದ್ದಾರೆ. ಅದನ್ನೇ ಹೇಳಲು ನನಗೆ ಫೋನ್ ಮಾಡಿದ್ದರು ಎಂದು ಗಮನ ಸೆಳೆದರು. ಬಾಬಾ ಸಾಹೇಬ ಡಾ.ಅಂಬೇಡ್ಕರರನ್ನು ಸೋಲಿಸಿದ್ದು, ಅಪಮಾನ ಮಾಡಿದ್ದು ನೂರಕ್ಕೆ ನೂರು ಕಾಂಗ್ರೆಸ್ ಎಂದು ಪುನರುಚ್ಚರಿಸಿದರು.