ಡಿ.5ರಂದು ವಕ್ಫ್ ಬೋರ್ಡ್ ವಿರುದ್ಧ ಶಹಾಪೂರದಲ್ಲಿ ಬೃಹತ್ ಪ್ರತಿಭಟನೆ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾಗಿ: ಅಮೀನರಡ್ಡಿ ಯಾಳಗಿ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ವಕ್ಫ್ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ರೈತರು, ಮಠಾಧೀಶರ ಜೊತೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಶಹಾಪೂರ ನಗರದಲ್ಲಿ ಡಿ. 5 ರಂದು ಬೆಳಗ್ಗೆ 11 ಕ್ಕೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯುವ ಪ್ರತಿಭಟನೆಯಲ್ಲಿ ಜಿಲ್ಲೆಯಲ್ಲಿ ವಕ್ಫ್ ಹೆಸರಿನಲ್ಲಿ ರೈತರ, ಮಠ ಮಾನ್ಯಗಳ ಸೇರಿದಂತೆ ಎಲ್ಲರ ಜಮೀನು ನುಂಗುವ ನಿಟ್ಟಿನಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಹಾಗೂ ಮುಡಾ ಹಗರಣ, ನಿಗಮಗಳ ಹಗರಣಗಳು ಸೇರಿದಂತೆ ಸರ್ಕಾರದ ವೈಫಲ್ಯದ ವಿರುದ್ಧವೂ ಪ್ರತಿಭಟನೆ ನಡೆಯಲಿದೆ.
ಅಂದು ಬೆಳಗ್ಗೆ 11 ಕ್ಕೆ ಸಿಬಿ ಕಮಾನ್ ನಿಂದ ಹೊರಟು ಶ್ರೀ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆದು ಅಲ್ಲಿ ಬಹಿರಂಗ ಪ್ರತಿಭಟನಾ ಸಮಾವೇಶ ನಡೆಯಲಿದೆ. ಇದರಲ್ಲಿ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ, ಮಾಜಿ ಸಚಿವ ಬೈರತಿ ಬಸವರಾಜ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಸೇರಿದಂತೆ ಜಿಲ್ಲೆಯ ರಾಜ್ಯಮಟ್ಟದ ನಾಯಕರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.
ಡಿ.4 ರಂದು ಬೀದರ ಕಲಬುರ್ಗಿ ಪೂರ್ಣಗೊಳಿಸಿ 5 ರಂದು ಯಾದಗಿರಿ ರಾಯಚೂರಿನಲ್ಲಿ ವಿಜಯೇಂದ್ರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ನಂತರ ಮುಂದೆ ಸಾಗಿ ಬೆಳಗಾವಿಗೆ ಈ ನಿಯೋಗ ತೆರಳಲಿದೆ ಎಂದು ಅವರು ತಿಳಿಸಿದರು.
ಇದು ರೈತರ ಹಾಗೂ ಮಠ ಮಾನ್ಯಗಳ ಆಸ್ತಿಯನ್ನು ಅಕ್ರಮವಾಗಿ ನುಂಗುತ್ತಿರುವ ವಕ್ಫ್ ಬೋರ್ಡ್ ವಿರುದ್ಧ ಪ್ರತಿಭಟನೆ ಇರುವುದರಿಂದ ರೈತರು, ಮಠಾಧೀಶರು, ಪ್ರಗತಿಪರರು, ರೈತ ಪರ ಸಂಘಟನೆಗಳು ಸೇರಿದಂತೆ ಎಲ್ಲರಿಗೂ ಭಾಗವಹಿಸಿ ಈ ಹೋರಾಟಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರಡ್ಡಿ ನಾಯ್ಕಲ್, ಅಲೆಮಾರಿ ನಿಗಮದ ಮಾಜಿ ಅದ್ಯಕ್ಷ ದೇವೇಂದ್ರನಾಥ ನಾದ್, ಯುವ ಮುಖಂಡ ಮಹೇಶರಡ್ಡಿಗೌಡ ಮುದ್ನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ನಗರಾಧ್ಯಕ್ಷ ಲಿಂಗಪ್ಪ ಹತ್ತಿಮನಿ, ಜಿಲ್ಲಾ ಖಜಾಂಚಿ ತಿರುಪತಿ ರೆಡ್ಡಿ, ಬಿಜೆಪಿ ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಚಂದ್ರಶೇಖರ ಕಡೇಸೂರ ಇನ್ನಿತರರು ಇದ್ದರು.