ಧರ್ಮಾಪೂರ ತಾಂಡಾದ ಶಾಲೆಯ ಮುಖ್ಯಗುರು ದಾರುಕಾರಾಧ್ಯ ಎಸ್.ಚಿಕ್ಕಮಠ ಸೇವಾ ನಿವೃತ್ತ ಸಮಾರಂಭ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ: ಕಂಬಳೇಶ್ವರ ಶ್ರೀ
ನಾಗಾವಿ ಎಕ್ಸಪ್ರೆಸ್
ಕಲಬುರ್ಗಿ: ಎಲ್ಲಾ ವೃತ್ತಿಗಳಲ್ಲಿಯೇ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಮತ್ತು ಶ್ರೇಷ್ಠವಾಗಿದೆ ಎಂದು ಚಿತ್ತಾಪುರ ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.
ನಗರದ ವಿಸ್ತಾರ ಹೊಟೇಲ್ ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧರ್ಮಾಪೂರ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ದಾರುಕಾರಾಧ್ಯ ಎಸ್.ಚಿಕ್ಕಮಠ ಅವರ ಸೇವಾ ವಯೋನಿವೃತ್ತಿ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು, ಸಮಾಜದ ಯಾವುದೇ ಕ್ಷೇತ್ರ ಇರಲಿ, ಮಠಾಧೀಶರು ಇರಲಿ, ರಾಜಕಾರಣಿಗಳು ಇರಲಿ ಯಾರೇ ಇರಲಿ ಅಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿರುತ್ತದೆ ಎಂದರು.
ದಾರುಕಾರಾಧ್ಯ ಎಸ್.ಚಿಕ್ಕಮಠ ಅವರಿಗೆ ಮಕ್ಕಳು ಎಂದರೆ ಅಚ್ಚುಮೆಚ್ಚು ಹೀಗಾಗಿ ತಮ್ಮ ಸೇವಾವಧಿಯಲ್ಲಿ ಎಂದೂ ಒಮ್ಮೆಯೂ ಸಿಟ್ಟು ಸಿಡುಕು ಮಾಡದೇ ಪ್ರೀತಿಯಿಂದ ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಂಡ ಅಪರೂಪದ ಶಿಕ್ಷಕರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ನಿವೃತ್ತ ಮುಖ್ಯಗುರು ದಾರುಕಾರಾಧ್ಯ ಎಸ್.ಚಿಕ್ಕಮಠ ಮಾತನಾಡಿ, ನಾನು ಶಿಕ್ಷಕ ವೃತ್ತಿಯಲ್ಲಿ 39 ವರ್ಷ ಸೇವೆ ಸಲ್ಲಿಸಿದ್ದು, ಸೀರನೂರ ಶಾಲೆಯಲ್ಲಿ 14 ವರ್ಷ, ಧರ್ಮಾಪೂರ ಶಾಲೆಯಲ್ಲಿ 10 ವರ್ಷ ಹಾಗೂ ಧರ್ಮಾಪೂರ ತಾಂಡಾದ ಶಾಲೆಯಲ್ಲಿ 15 ವರ್ಷ ಸೇವೆ ಸಲ್ಲಿಸಿ ಈಗ ನಿವೃತ್ತಿಯಾಗಿದ್ದೇನೆ. ನಾನು ಮೊದಲಿನಿಂದಲೂ ಶಿಕ್ಷಕ ವೃತ್ತಿಯ ಮೇಲೆ ಹಾಗೂ ಮಕ್ಕಳ ಮೇಲೆ ಅಪಾರ ಪ್ರೀತಿ ಮತ್ತು ಗೌರವ ಹೊಂದಿದ್ದು, ಶಿಕ್ಷಕ ವೃತ್ತಿಯಲ್ಲಿ ಬಹಳ ಶ್ರದ್ಧೆಯಿಂದ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಆತ್ಮತೃಪ್ತಿ ನನ್ನಲ್ಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಂಬಳೇಶ್ವರ ಶ್ರೀಗಳು ಚಿಕ್ಕಮಠ ದಂಪತಿಗೆ ಸನ್ಮಾನಿಸಿ ಶುಭ ಹಾರೈಸಿದರು. ಪ್ರಮುಖರಾದ ಎಸ್.ಶಾಮಕುಮಾರ್, ಶಾಂತಗೌಡ ಪಾಟೀಲ, ಜಗನ್ನಾಥ ಪಗೋಜಿ, ಹಣಮಂತ ಹಾಗರಗಿ, ಈರಮ್ಮ ಸುತಾರ್, ಶಿವಶರಣಯ್ಯ ಮಠಪತಿ, ಗುರುಲಿಂಗಯ್ಯ ಕರದಳ್ಳಿ, ಸೋಮಶೇಖರ ಹಿರೇಮಠ, ಶಿವುಕುಮಾರ ನಿಲೋಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಶಿವಶರಣ ಜಿರೋಳ್ಳಿ ನಿರೂಪಿಸಿದರು.