ತಮ್ಮ ಸ್ವಂತ ಖರ್ಚಿನಲ್ಲಿ ಮಕ್ಕಳ ಪ್ರವಾಸ ಕೈಗೊಂಡ ದೇವಾಜಿ ನಾಯಕ ತಾಂಡಾದ ಶಾಲೆಯ ಶಿಕ್ಷಕ ವಿಜಯಕುಮಾರ ಹರಿ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ದೇವಾಜಿ ನಾಯಕ ತಾಂಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ವಿಜಯಕುಮಾರ ಹರಿ ಭಟ್ ಇದೇ ತಿಂಗಳಲ್ಲಿ ತಮ್ಮ ಶಾಲೆಯ 26 ಮಕ್ಕಳ ಜೊತೆ ಪಕ್ಕದ ಆಲೂರ್ ಶಾಲೆಯ 10 ಮತ್ತು ಸೂಲಹಳ್ಳಿ ಶಾಲೆಯ 13 ಮಕ್ಕಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಸರಕಾರಿ ಬಸ್ ನಲ್ಲಿ (ಅಂದಾಜು 21000 ರೂ.) ಒಂದು ದಿನದ ವಿಜಯಪುರ ಪ್ರವಾಸವನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ಕರ್ತವ್ಯದ ಸಾರ್ಥಕತೆ ಮೆರೆದಿದ್ದಾರೆ.
ಪ್ರವಾಸದ ಜೊತೆಗೆ ಮಕ್ಕಳಿಗೆ ಮನೆಯಿಂದ ಊಟ ತಂದಿದ್ದರೂ ಶೇಂಗಾ ಹೋಳಿಗೆಯ ವ್ಯವಸ್ಥೆಯನ್ನು ಮಾಡಿರುತ್ತಾರೆ. ಶಿಕ್ಷಕ ವಿಜಯಕುಮಾರ ಅವರ ಸೇವೆಗೆ ಮಕ್ಕಳು ಹಾಗೂ ಪಾಲಕರು ಸಂತಸಗೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ನಿಸ್ವಾರ್ಥ ಸೇವೆಯನ್ನು ಗಮನಿಸಿ ಶುಕ್ರವಾರ ನಡೆದ ಮುಖ್ಯ ಗುರುಗಳ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಅವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ್ ನಾಯ್ಕೋಡಿ, ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ, ಅಬ್ದುಲ್ ಸಲೀಂ ಸೇರಿದಂತೆ ಇತರರು ಇದ್ದರು.