ದಿಗ್ಗಾಂವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಶಾಲಾ ವಾರ್ಷಿಕೋತ್ಸವ, ಸರ್ಕಾರಿ ಶಾಲೆಯಲ್ಲಿ, ಹಳ್ಳಿಯಲ್ಲಿ ಓದುತ್ತಿದ್ದೇನೆ ಎಂಬ ಕೀಳರಿಮೆ ತೆಗೆದುಹಾಕಿ: ನೆಲ್ಲೋಗಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಹೆಚ್ಚು ಸಾಧನೆಗೈದಿದ್ದಾರೆ, ಇದಕ್ಕೆ ಸಾಕಷ್ಟು ಉದಾಹರಣೆಗಳು ಇವೆ, ಹೀಗಾಗಿ ನಾನು ಸರ್ಕಾರಿ ಶಾಲೆಯಲ್ಲಿ, ಹಳ್ಳಿಯಲ್ಲಿ ಓದುತ್ತಿದ್ದೇನೆ ಎಂಬ ಕೀಳರಿಮೆ ವಿದ್ಯಾರ್ಥಿಗಳು ಮೊದಲು ತೆಗೆದು ಹಾಕಬೇಕು ಎಂದು ಕರದಾಳ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರು ಪಂಡಿತ್ ನೆಲ್ಲೋಗಿ ಹೇಳಿದರು.
ತಾಲೂಕಿನ ದಿಗ್ಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ 10 ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪರೀಕ್ಷೆ ಹತ್ತಿರ ಇರುವುದರಿಂದ ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚನ ಮಹತ್ವ ನೀಡಬೇಕು ಹಾಗೂ ಗುರುಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.
ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಹೀಗಾಗಿ ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಮುಂದೆ ಬರಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಗುರು ಮಹೇಶಕುಮಾರ್ ಭಾವಿಕಟ್ಟಿ ಮಾತನಾಡಿ, ಪರೀಕ್ಷೆ ಸಿದ್ಧತೆಗೆ ಹಾಗೂ ಫಲಿತಾಂಶ ಹೆಚ್ಚಳಕ್ಕೆ ನಾವುಗಳು ಎಲ್ಲಾ ಪ್ರಯತ್ನ ಮಾಡಿದ್ದೇವೆ ಇನ್ನೇನಿದ್ದರೂ ವಿದ್ಯಾರ್ಥಿಗಳ ಪರಿಶ್ರಮ ಮುಖ್ಯ. ಹೀಗಾಗಿ ಪರೀಕ್ಷೆ ಸಮೀಪಿಸುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳು ಮೊಬೈಲ್ ಮತ್ತು ಟಿವಿಗಳಿಂದ ದೂರವಿದ್ದು ಹೆಚ್ಚು ಓದಿನ ಕಡೆ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು. ಚೆನ್ನಾಗಿ ಓದಿದ್ದರೆ ಫಲಿತಾಂಶವು ಕೂಡ ಚೆನ್ನಾಗಿ ಬರಲಿದೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಗುರುಲಿಂಗಪ್ಪ ಬಂದಳ್ಳಿ, ಶಿಕ್ಷಣ ಪ್ರೇಮಿಗಳಾದ ಭೀಮರಾಯ ದೇವರು, ಸುಭಾಷ್, ಪರಮಾತ್ಮ, ತಿಪ್ಪಣ್ಣ ಸಂಗಾವಿ, ಶಿಕ್ಷಕರಾದ ವಿಶ್ವರಾಜ್, ಸೋಮನಾಥ್, ಸಿದ್ದರಾಮ್, ಸುಜಾತಾ ಸೇರಿದಂತೆ ಇತರರು ಇದ್ದರು. ಇದೇ ಸಂದರ್ಭದಲ್ಲಿ ಮಹಿಳಾ ದಿನಾಚರಣೆ ನಿಮಿತ್ತ ಸುಜಾತಾ, ವನಮಾಲಾ, ಚಂದ್ರಕಲಾ, ಗಂಗಮ್ಮ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು, ನಾಗೇಂದ್ರ ಸ್ವಾಗತಿಸಿದರು, ದೇವಿಂದ್ರಪ್ಪ ದೊರೆ ನಿರೂಪಿಸಿದರು, ಸುಹಾಸಿನಿ ವಂದಿಸಿದರು.