ಡಿಕೆಶಿ ಮತ್ತು ಎಚ್ಡಿಕೆ ಪ್ರತಿಷ್ಠೆಯ ಚನ್ನಪಟ್ಟಣ ಹೈವೋಲ್ಟೇಜ್ ಕದನ
ಕಾಂಗ್ರೆಸ್ ನಿಂದ ಡಿ.ಕೆ.ಸುರೇಶ್ ? ಜೆಡಿಎಸ್ ನಿಂದ ನಿಖೀಲ್ ? ಯೋಗೇಶ್ವರ್ ?…
ನಾಗಾವಿ ಎಕ್ಸಪ್ರೆಸ್
ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಎನ್.ಡಿ.ಎ ಕೂಟಕ್ಕೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು ಇನ್ನೂ ಯಾವುದೇ ಹೆಸರನ್ನು ಘೋಷಣೆ ಮಾಡಿಲ್ಲ ಆದರೂ ಹೈವೋಲ್ಟೇಜ್ ಕದನವಾಗಿ ಮಾರ್ಪಟ್ಟಿದೆ.
ಚನ್ನಪಟ್ಟಣ ಕ್ಷೇತ್ರದ ಶಾಸಕರಾಗಿದ್ದ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಕಾರಣ ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಪ್ರಯುಕ್ತ ಉಪ ಚುನಾವಣೆ ಘೋಷಣೆಯಾಗಿದೆ.
ಈಗಾಗಲೇ ರಾಜ್ಯದ ಮೂರು ಕ್ಷೇತ್ರಗಳ ಪೈಕಿ ಶಿಗ್ಗಾಂವಿ ಮತ್ತು ಸಂಡೂರು ಎರಡು ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ, ಚನ್ನಪಟ್ಟಣ ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿ ಘೋಷಣೆ ಮಾಡದೇ ಹಾಗೇ ಬಿಟ್ಟಿದ್ದರಿಂದ ತೀವ್ರ ಕುತೂಹಲ ಮೂಡಿಸಿದೆ. ಈ ಮಧ್ಯೆ ಸಿ.ಪಿ.ಯೋಗೇಶ್ವರ್ ಬಿಜೆಪಿ ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದರಿಂದ ಬಿಜೆಪಿ ಹೈಕಮಾಂಡ್ ಗೆ ತಲೆನೋವಾಗಿದ್ದಾರೆ ಅಷ್ಟೇ ಅಲ್ಲ ಎನ್.ಡಿ.ಎ ಕೂಟಕ್ಕೆ ಮಗ್ಗುಲು ಮುಳ್ಳಾಗಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ಚನ್ನಪಟ್ಟಣ ಕ್ಷೇತ್ರಕ್ಕೆ ಸಹಜವಾಗಿ ತಮ್ಮ ಪುತ್ರ ನಿಖಿಲ್ ಗೆ ಕುಮಾರಸ್ವಾಮಿ ಅವರು ರಾಜಕೀಯ ಜನ್ಮ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ.
ಈಗಾಗಲೇ ಬಿಜೆಪಿ ಹೈಕಮಾಂಡ್ ವಿರುದ್ಧ ಬಂಡೆದ್ದು ಯೋಗೇಶ್ವರ್ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಅಲ್ಲದೇ ಚುನಾವಣೆಯಲ್ಲಿ ಸ್ವತಂತ್ರ ಅಥವಾ ಬೇರಾವುದೇ ಪಕ್ಷದಿಂದ ಸ್ಪರ್ಧಿಸುವುದು ಮಾತ್ರ ಶತಸಿದ್ಧ ಎನ್ನುವ ಸೂಚನೆ ನೀಡಿದ್ದಾರೆ, ಇದರಿಂದ ಚನ್ನಪಟ್ಟಣ ಉಪ ಚುನಾವಣೆ ಮತ್ತಷ್ಟು ರಂಗೇರುವ ಎಲ್ಲ ಲಕ್ಷಣಗಳು ಕಂಡುಬರುತ್ತಿದೆ.
ಇತ್ತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇನ್ನೂ ಘೋಷಣೆ ಆಗಿಲ್ಲ, ಆದರೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಸ್ಪರ್ಧೆ ಮಾಡುವ ಸಂಭವವೇ ಹೆಚ್ಚು. ಹೀಗಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಪ್ರತಿಷ್ಠೆಯ ಚುನಾವಣೆ ಆಗಿದೆ, ಎರಡು ಪಕ್ಷಗಳ ಅಧಿಕೃತ ಅಭ್ಯರ್ಥಿಗಳ ಹೆಸರುಗಳು ಘೋಷಣೆಯಾದ ನಂತರ ಜಿದ್ದಾಜಿದ್ದಿನ ಕದನವಾಗಲಿದೆ, ಜೆಡಿಎಸ್ ನಿಂದ ನಿಖೀಲ್, ಕಾಂಗ್ರೆಸ್ ನಿಂದ ಡಿ.ಕೆ.ಸುರೇಶ್ ಮತ್ತು ಯೋಗೇಶ್ವರ್ ಅವರು ಕೂಡ ಸ್ಪರ್ಧೆ ಮಾಡಿದ್ದರೆ ತ್ರಿಕೋನ ಸ್ಪರ್ಧೆ ಏರ್ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ ಈ ನಿಟ್ಟಿನಲ್ಲಿ ಗೆಲುವು ಯಾರ ಮಡಿಲಿಗೆ ಬೀಳಲಿದೆ ಎಂಬುದು ಕಾದುನೋಡಬೇಕಿದೆ.