ಚಿತ್ತಾಪುರದಲ್ಲಿ ಗೋಪೂಜೆ ಕಾರ್ಯಕ್ರಮ
ಗೋಪೂಜೆಯಿಂದ ಮನಸ್ಸಿಗೆ ಶಾಂತಿ: ಗೋಪಸೇನ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಗೋಪೂಜೆಯಿಂದ ಮನಸ್ಸಿಗೆ ಅದ್ಭುತ ಆನಂದ ಮತ್ತು ಶಾಂತಿ ಹಾಗೂ ನೆಮ್ಮದಿ ಸಿಗಲಿದೆ ಎಂದು ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ಮಲ್ಲರೆಡ್ಡಿ ಗೋಪಸೇನ್ ಹೇಳಿದರು.
ಪಟ್ಟಣದ ನಾಗಾವಿ ಗೋಶಾಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಗೋಶಾಲೆ ಸಹಯೋಗದೊಂದಿಗೆ ನಡೆದ ಗೋವಿನ ಪೂಜೆ, ಪೋಷಣೆ, ಸಂವರ್ಧನೆಯ, ಸಂಕಲ್ಪದೊಂದಿಗೆ ಗೋಪಾಷ್ಟಮಿಯ ನಿಮಿತ್ತ ಗೋಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಹಿಂದು ಧರ್ಮದ ಪ್ರಕಾರ ನಮ್ಮ ಹಿರಿಯರು ಹೇಳುವಂತೆ ಗೋಮಾತೆಯಲ್ಲಿ 33 ಕೋಟಿ ದೇವರು ವಾಸವಾಗಿದ್ದಾರೆ. ನಮ್ಮ ರೈತ ಬಾಂಧವರು ಎಲ್ಲರೂ ಮನೆಯಲ್ಲಿ ಮೊದಲು ಎದ್ದ ತಕ್ಷಣ ಗೋಮಾತೆಯ ನಮಿಸುವೆವು ಎಂದರು.
ಆಕಳು ಮನೆಯಲ್ಲಿ ಇದ್ದರೆ ಕುಟುಂಬದವರ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಆಕಳ ಹಾಲು ಅಮೃತಕ್ಕೆ ಸಮಾನ, ನಾವೀಗ ಆರೋಗ್ಯ ಹದಗೆಡಿಸುವ ಪಾಕೆಟ್ ಹಾಲು ಬಳಕೆ ಹೆಚ್ಚು ಮಾಡುತಿದ್ದೇವೆ. ಮಕ್ಕಳ ಭವಿಷ್ಯಕ್ಕಾಗಿ ಪ್ರತಿ ಮನೆಯಲ್ಲಿ ಆಕಳು ಇರಲಿ ಎಂದರು.
ಸಂಪನ್ಮೂಲ ವ್ಯಕ್ತಿಯಾದ ಪಿ .ಎನ್. ಬಡಿಗೇರ್ ಮಾತನಾಡಿ, ಗೋಮೂತ್ರದಿಂದ ಅನೇಕ ಮಾರಣಾಂತಿಕ ಕಾಯಿಲೆಗಳು ವಾಸಿಯಾಗುತ್ತವೆ. ತಾವಿಂದು ಮಾಡಿರುವ ಗೋಪೂಜೆ, ಅದರ ಅಲಂಕಾರ, ರಂಗುರಂಗಿನ ವಸ್ತ್ರಧಾರಣೆ, ನೈವೇದ್ಯ ಅರ್ಪಣೆ, ಸಮರ್ಪಣಾ ಭಾವ ನಿಜಕ್ಕೂ ಶ್ಲಾಘನೀಯ, ತಮ್ಮ ಮನದ ಇಂಗಿತ, ತಮ್ಮ ಕುಟುಂಬ ವರ್ಗದ ಯಾವುದೇ ಸಮಸ್ಯೆಗಳಿರಲಿ ಎಲ್ಲವೂ ಗೋಪೂಜೆಯಿಂದ ನಿವಾರಣೆಯಾಗುವುದು ಎಂದರು.
ಅರ್ಚಕ ಮಂಜುನಾಥ ಸ್ವಾಮಿ ಗೋಪೂಜಾ ವಿಧಿವಿಧಾನ ನಡೆಸಿಕೊಟ್ಟರು. ವಿ.ಎಚ್.ಪಿ ಅಧ್ಯಕ್ಷ ಶ್ರೀನಿವಾಸ ಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಪುರಸಭೆ ಸದಸ್ಯ ಮತ್ತು ಗೋಶಾಲೆ ಅದ್ಯಕ್ಷ ರಮೇಶ ಬೊಮ್ಮನಳ್ಳಿ, ಸಂತೋಷ ಹಾವೇರಿ, ಆನಂದ ಪಾಟೀಲ, ರಾಜು ಕುಲಕರ್ಣಿ, ಯಲ್ಲಾಲಿಂಗ ಸುಲ್ತಾನಪುರ, ಅಶ್ವಿನ್ ಉಮಿಯಾಜಿ, ಮುನಿಯಪ್ಪ ಕಡಬೂರ, ರಾಜಶೇಖರ ಕಡ್ಲಿ, ಅರುಣ ವಿಶ್ವಕರ್ಮ, ಮಾತೃಶಕ್ತಿಯ ಪ್ರಮುಖರಾದ ಸಕ್ಕುಬಾಯಿ ಕುಲಕರ್ಣಿ, ರೇಣುಕಾ ಬಿರಾದಾರ, ಶೀಲಾ ದೊಡ್ಡಮನಿ, ವಿಜಯಲಕ್ಷ್ಮಿ ತುರೆ, ಜ್ಯೋತಿ ಎಸ್, ಜಗನ್ನಾಥ ಸೇರಿದಂತೆ ಇತರರು ಇದ್ದರು.
ದುರ್ಗಾವಾಹಿನಿಯ ಶೃತಿ ತಾವರೆ ಭಕ್ತಿಪೂರ್ವಕ ಪ್ರಾರ್ಥನಾ ಗೀತೆ ಹಾಡಿದರು, ವಿ ಎಚ್ ಪಿ ತಾಲೂಕು ಕಾರ್ಯದರ್ಶಿ ಸಾಬಣ್ಣ ಪುಜಾರಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಮಹಾದೇವ ಅಂಗಡಿ ಪುಣ್ಯಕೋಟಿ ಉಳಿಸಿ ಕೋಟಿ ಪುಣ್ಯ ಕಟ್ಟಿಕೊಳ್ಳಿ ಎಂದು ಪ್ರಾಸ್ತಾವಿಕವಾಗಿ ನುಡಿದರು. ಮಾತೃಶಕ್ತಿಯ ಅಕ್ಕಮಹಾದೇವಿ ದೇಸಾಯಿ ವಂದಿಸಿದರು.